ಬೆಂಗಳೂರು
ಕುಡಿತ ಗಾಂಜಾ ಇನ್ನಿತರ ದುಶ್ಚಟಗಳಿಗೆ ಸರಗಳವು ಮಾಡುತ್ತಿದ್ದ ಇಬ್ಬರು ಕುಖ್ಯಾತ ಸರಗಳ್ಳರನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿ 4 ಲಕ್ಷ 55 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಪೂಜಿ ನಗರದ 2ನೇ ಕ್ರಾಸ್‍ನ ಮೊಹ್ಮದ್ ಮುದಾಸಿರ್ ಅಲಿಯಾಸ್ ಮೊಹ್ಮದ್ ಫಾಜಿಲ್ (20), ಮೊಹ್ಮದ್ ರಿಜ್ವಾನ್ (21) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 4 ಲಕ್ಷ 55 ಸಾವಿರ ಮೌಲ್ಯದ 133 ಗ್ರಾಂ ತೂಕದ 4 ಚಿನ್ನದ ಸರಗಳು, 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ ಏ. 23ರಂದು ಆರೋಪಿಗಳು ಚಂದ್ರಾಲೇಔಟ್‍ನಲ್ಲಿ ಸುಮನ್ ಎಂಬ ಮಹಿಳೆಯ 18 ಗ್ರಾಂ ತೂಕದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದರು.ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಇನ್ಸ್‍ಪೆಕ್ಟರ್ ಕಲ್ಲಪ್ಪ ಖರಾತ್, ಮತ್ತವರ ತಂಡ ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ಬಾಲ್ಯ ಸ್ನೇಹಿತರಾಗಿದ್ದು, ಸಿಗರೇಟ್, ಗಾಂಜಾ, ಇನ್ನಿತರ ದುಶ್ಚಟಗಳಿಗೆ ಬಲಿಯಾಗಿ ಸುಲಭವಾಗಿ ಹಣ ಗಳಿಸಲು ಕಳವು ಮಾಡಿದ್ದ ಬೈಕ್‍ನಲ್ಲಿ ಸಂಚರಿಸುತ್ತ ಒಂಟಿ ಮಹಿಳೆಯರ ಚಿನ್ನದ ಸರಗಳನ್ನು ಕಸಿದು ಪರಾರಿಯಾಗುತ್ತಿದ್ದರು.ಸರಗಳವಲ್ಲದೆ, ತೆರೆದ ಬಾಗಿಲಿನ ಮನೆಯೊಳಗೆ ನುಗ್ಗಿ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದರು ಎಂದು ಡಿಸಿಪಿ ರವಿಚೆನ್ನಣ್ಣನವರ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
