ಶಿರಾ
ಗ್ರಾಮಕ್ಕೆ ಕುಡಿಯುವ ನೀರನ್ನು ಒದಗಿಸುವಲ್ಲಿ ಗ್ರಾಮ ಪಂಚಾಯ್ತಿಯು ಸಂಪೂರ್ಣ ವಿಫಲಗೊಂಡಿದೆ ಎಂದು ಆರೋಪಿಸಿ ತಾಲ್ಲೂಕಿನ ಎಂ.ದಾಸರಹಳ್ಳಿ ಗ್ರಾಮದ ಮಹಿಳೆಯರು ಮತ್ತು ಗ್ರಾಮಸ್ಥರು ಮದಲೂರು ಗ್ರಾಮ ಪಂಚಾಯ್ತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಎಂ.ದಾಸರಹಳ್ಳಿ ಗ್ರಾಮದಲ್ಲಿ ಕಳೆದ ಮೂರು ತಿಂಗಳಿಂದಲೂ ಕೊಳಾಯಿ ನೀರನ್ನು ಸರಬರಾಜು ಮಾಡದೆ, ಇಲ್ಲಿನ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ್ಯ ವಹಿಸಿದ್ದಾರೆ. ಗ್ರಾಮದಲ್ಲಿನ ನೀರಿನ ಟ್ಯಾಂಕ್‍ನಲ್ಲಿ ಪಕ್ಷಿಗಳ ತ್ಯಾಜ್ಯ ವಸ್ತುಗಳು ಬಿದ್ದಿದ್ದು, ಟ್ಯಾಂಕನ್ನು ಶುದ್ಧೀಕರಣಗೊಳಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ಮೂರು ತಿಂಗಳಿಂದ ನಲ್ಲಿಯಲ್ಲಿ ನೀರು ಪೂರೈಸದೆ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನ ಹಪಹಪಿಸುವಂತಾಗಿದೆ. ನೀರಿನ ಸಮಸ್ಯೆ ನೀಗಿಸಲು ಜಿ.ಪಂ. ಉಪ ವಿಭಾಗ, ತಾಲ್ಲೂಕು ಪಂಚಾಯ್ತಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು ಪಂಚಾಯ್ತಿಗೆ ಬೀಗ ಜಡಿದು ಕೂತರು.
ಪ್ರತಿಭಟನೆಯ ಕಾವು ಹೆಚ್ಚಾದಾಗ ಕೂಡಲೇ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಆರಕ್ಷಕ ಇಲಾಖೆಯ ಅಧಿಕಾರಿಗಳೊಟ್ಟಿಗೆ ಸ್ಥಳಕ್ಕೆ ಆಗಮಿಸಿದರು. ಆರಕ್ಷಕರ ಎದುರಿನಲ್ಲಿಯೇ ಗ್ರಾಮಸ್ಥರು ಪಿಡಿಓ ಅವರನ್ನು ತರಾಟೆಗೆ ತೆಗೆದುಕೊಂಡರು. ಪಿಡಿಓ ಶಿವರಾಂ ಮಾತನಾಡಿ ಎಂ.ದಾಸರಹಳ್ಳಿ ಗ್ರಾಮದಲ್ಲಿ ನೂತನ ಕೊಳವೆ ಬಾವಿ ಕೊರೆಸಲು ಕ್ರಮ ಕೈಗೊಳ್ಳಲಾಗಿದ್ದು, ಟ್ಯಾಂಕರ್ ಮೂಲಕ ನೀರು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಈರಮ್ಮ, ಈರನಾಗಮ್ಮ, ಕೆಂಚಮ್ಮ, ಗಂಗಮ್ಮ, ಮಂಜುಳ, ಈರಣ್ಣ, ರೈತ ಮುಖಂಡರಾದ ಎಲಿಯಪ್ಪ, ಕರಿಯಪ್ಪ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.