ನವದೆಹಲಿ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕುಸ್ತಿಪಟುಗಳು ತಮ್ಮ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿ ಸಂಸದ ಹಾಗೂ ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ತಮ್ಮ ಮೇಲೆ ಲೈಂಗಿಕ ಕಿರುಕುಳ ನಡೆಸಿದ್ದಾರೆ ಎಂಬ ಆರೋಪಗಳನ್ನು ಮಹಿಳಾ ಕುಸ್ತಿ ಪಟುಗಳು ಮಾಡುತ್ತಿದ್ದಾರೆ.
ಇದು ದೇಶದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಈ ವಿಚಾರವಾಗಿ ಸಾರ್ವಜನಿಕರು, ರೈತ ಮುಖಂಡರು ಹಾಗೂ ವಿರೋಧ ಪಕ್ಷಗಳ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯ ಸಿಗುವವರೆಗೂ ಕುಸ್ತಿಪಟುಗಳ ಬೆಂಬಲಕ್ಕೆ ನಿಲ್ಲುವುದಾಗಿ ಹೇಳಿದ್ದಾರೆ. ಒಲಿಂಪಿಕ್ಸ್ ಮೆಡಲ್‌ಗಳನ್ನು ಗೆದ್ದಿರುವ ಕುಸ್ತಿಪಟುಗಳಿಗೆ ಈ ಸ್ಥಿತಿ ಬಂದಿರುವುದಕ್ಕೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕುಸ್ತಿಪಟುಗಳಿಗೆ ಪರ ನಿಂತು ನ್ಯಾಯ ಕೇಳಿದ್ದಾರೆ. ಮಹಾರಾಷ್ಟ್ರದ ಬಿಜೆಪಿಯ ಲೋಕಸಭಾ ಸಂಸದೆ ಪ್ರೀತಮ್ ಮುಂಡೆ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಬೆಂಬಲಿಸಿದ್ದಾರೆ. ಇದಾದ ಒಂದು ದಿನದ ನಂತರ, ಪಕ್ಷದ ಹಿರಿಯ ಸಂಸದೆ ಮೇನಕಾ ಗಾಂಧಿ ಅವರು ಕುಸ್ತಿಪಟುಗಳಿಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿದ್ದಾರೆ.
‘ಅವರಿಗೆ ( ಕುಸ್ತಿಪಟುಗಳಿಗೆ ) ಕೊನೆಯಲ್ಲಿ ನ್ಯಾಯ ಸಿಗುತ್ತದೆ ಎಂಬುದು ನನಗೆ ಖಾತ್ರಿಯಿದೆ’ ಎಂದು ಕಾಶ್ಮೀರದ ಶ್ರೀನಗರದಲ್ಲಿ ಮಾಧ್ಯಮಗಳಿಗೆ ಮನೇಕಾ ಗಾಂಧಿ ತಿಳಿಸಿದ್ದಾರೆ. ಕಾಲೇಜು ಕಸ ಗುಡಿಸಿ, ಬೆಲ್ ಹೊಡೆದು ಕೆಲಸ ಆರಂಭಿಸಿದ ಶಾಸಕ! ದೇಶದ ಅಗ್ರ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ಭಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ತಮ್ಮ ಬೆಂಬಲಿಗರೊಂದಿಗೆ ಹರಿದ್ವಾರಕ್ಕೆ ತೆರಳಿದ್ದರು. ತಮ್ಮ ಪದಕಗಳನ್ನು ಗಂಗಾ ನದಿಗೆ ಎಸೆಯಲು ಹೋಗಿದ್ದರು. ಖಾಪ್‌ಗಳು ಮತ್ತು ರೈತ ಮುಖಂಡರು ಅದನ್ನು ತಡೆಯಲು ಯಶಸ್ವಿಯಾದರು. ಕೇಂದ್ರ ಸರ್ಕಾರಕ್ಕೆ ಐದು ದಿನಗಳ ಕಾಲ ಗಡುವು ನೀಡಿದರು.
ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೆಹಲಿ ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಮೊದಲ ಎಫ್‌ಐಆರ್ ಅಪ್ರಾಪ್ತ ಕುಸ್ತಿಪಟುವಿನ ಆರೋಪಗಳಿಗೆ ಸಂಬಂಧಿಸಿದೆ ಇದೆ. ಇದು ಪೋಕ್ಸೊ ಕಾಯ್ದೆಯಡಿಯಲ್ಲಿ ದಾಖಲಾಗಿದೆ. ಎರಡನೆಯದು ಕುಸ್ತಿಪಟುಗಳ ಆರೋಪದ ಮೇಲೆ ದಾಖಲಾಗಿದೆ. ಇದೆಲ್ಲದರ ನಡುವೆ, ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಗುರುವಾರ ಸಭೆ ನಡೆಸಿದ ರೈತ ನಾಯಕರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲು ನಿರ್ಧರಿಸಿದೆ.
‘ನಮ್ಮ ಪ್ರತಿನಿಧಿಗಳು ರಾಷ್ಟ್ರಪತಿಗಳನ್ನು ಭೇಟಿ ಮಾಡಲಿದ್ದಾರೆ. ಕೇಂದ್ರ ಸರ್ಕಾರದ ನಾಯಕರನ್ನೂ ಭೇಟಿ ಮಾಡಲಿದ್ದಾರೆ. ಪ್ರತಿಭಟಿಸುವ ಕುಸ್ತಿಪಟುಗಳ ಪರ ನ್ಯಾಯ ಕೇಳಲಿದ್ದಾರೆ. ನ್ಯಾಯ ಸಿಗುವವರೆಗೂ ನಾವು ಇದರಿಂದ ಹಿಂದೆ ಸರಿಯುವುದಿಲ್ಲ’ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಶುಕ್ರವಾರ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆಯುವ ಸಭೆಯಲ್ಲಿ ಕುಸ್ತಿಪಟುಗಳ ಪ್ರತಿಭಟನೆಯ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಟಿಕಾಯತ್ ತಿಳಿಸಿದ್ದಾರೆ.
ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ ನಂತರ ದೆಹಲಿ ಪೊಲೀಸರು ಗಡಿಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಜಂತರ್ ಮಂತರ್‌ನಲ್ಲಿ ಕುಸ್ತಿಪಟುಗಳಿಗೆ ತಮ್ಮ ಪ್ರತಿಭಟನೆಯನ್ನು ಮುಂದುವರಿಸಲು ಅವಕಾಶ ನೀಡುವಂತೆ ಎಸ್‌ಕೆಎಂ ಗುರುವಾರ ರಾಷ್ಟ್ರಪತಿ ಮುರ್ಮು ಅವರಿಗೆ ಮನವಿ ಪತ್ರ ಸಲ್ಲಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
