ತುಮಕೂರು
ತುಮಕೂರು ನಗರದಲ್ಲಿ ಸಾರ್ವಜನಿಕರು ಮನೆಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣಪತಿ ವಿಗ್ರಹಗಳ ವಿಸರ್ಜನೆಗೆ ಅನುಕೂಲವಾಗುವಂತೆ ತುಮಕೂರು ಮಹಾನಗರ ಪಾಲಿಕೆಯು ವಿವಿ‘ ಬಡಾವಣೆಗಳಲ್ಲಿ ‘ಸಂಚಾರಿ ವಾಹನ’ (ಮೊಬೈಲ್ ವೆಹಿಕಲ್)ಗಳ ವ್ಯವಸ್ಥೆ ಮಾಡಿದೆ.
‘‘ನಗರದ 1) ಬಟವಾಡಿ ಆಂಜನೇಯ ಸ್ವಾಮಿ ದೇವಾಲಯದ ಬಳಿ, 2) ಶೆಟ್ಟಿಹಳ್ಳಿ ರಸ್ತೆಯ ರಾಘವೇಂದ್ರ ಸ್ವಾಮಿಗಳ ಮಠದ ಬಳಿ, 3)ಮಹಾನಗರ ಪಾಲಿಕೆ ಕಚೇರಿ ಆವರಣ, 4)ಕೋಟೆ ಆಂಜನೇಯ ಸ್ವಾಮಿ ದೇವಾಲಯ ಬಳಿ, 5) ಕ್ಯಾತಸಂದ್ರ ಬಸ್ ನಿಲ್ದಾಣದ ಬಳಿ, 6)ಅಗ್ರಹಾರದ ಶಿಶುವಿಹಾರ ಮೈದಾನ ಮತ್ತು 7) ವಿದ್ಯಾನಗರದಲ್ಲಿರುವ (ಆರ್.ಟಿ.ಓ. ಹಿಂಭಾಗ) ಪಾಲಿಕೆಯ ವಾಟರ್ ವರ್ಕ್ಸ್ ಆವರಣ- ಹೀಗೆ ಒಟ್ಟು 7 ಸ್ಥಳಗಳಲ್ಲಿ ಗಣಪತಿ ವಿಗ್ರಹಗಳ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗುತ್ತಿದೆ’’ ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್ ‘ಪ್ರಜಾಪ್ರಗತಿ’ಗೆ ಮಾಹಿತಿ ನೀಡಿದರು.
3 ದಿನಗಳೂ ಈ ಸೌಲಭ್ಯ
‘‘ಈ 7 ಸ್ಥಳಗಳಲ್ಲೂ ಪಾಲಿಕೆಯ ಟ್ರಾೃಕ್ಟರ್/ವಾಹನ ಇರುತ್ತದೆ. ಇದರಲ್ಲಿ ಗಣೇಶನ ವಿಗ್ರಹ ಮುಳುಗಿಸಲು ಅನುಕೂಲವಾಗುವಂತೆ ನೀರಿನ ತೊಟ್ಟಿ ಇರುತ್ತದೆ. ಜೊತೆಗೆ ಬೇರೊಂದು ತೊಟ್ಟಿಯಲ್ಲಿ ವಿಗ್ರಹದ ಜೊತೆಗೆ ಇರುವ ಹೂವು, ಪತ್ರೆ ಇತ್ಯಾದಿಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತದೆ. ಗುರುವಾರ (ಸೆ.13) ಗಣಪತಿ ಹಬ್ಬವಿದ್ದು, ಅಂದು ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಈ ವಾಹನಗಳು ನಿಗದಿತ ಸ್ಥಳದಲ್ಲಿ ನಿಂತಿರುತ್ತವೆ. ಇದೇ ರೀತಿ ಶುಕ್ರವಾರ ಮತ್ತು ಶನಿವಾರವೂ ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಈ ವಾಹನಗಳು ಇದೇ ಸ್ಥಳದಲ್ಲಿ ಇರಲಿವೆ. ಈ ಮೂರು ದಿನಗಳಲ್ಲೂ ಸಾರ್ವಜನಿಕರು ಗಣಪತಿ ವಿಗ್ರಹಗಳನ್ನು ಈ ವಾಹನಗಳಲ್ಲಿ ವಿಸರ್ಜಿಸಬಹುದು’’ ಎಂದು ಅವರು ತಿಳಿಸಿದರು.
‘‘ವಿದ್ಯಾನಗರದ ವಾಟರ್ ವರ್ಕ್ಸ್ ಆವರಣದಲ್ಲಿ ಗಣಪತಿ ವಿಗ್ರಹಗಳ ವಿಸರ್ಜನೆಗೆಂದೇ 60X40 ಅಳತೆಯ ತೊಟ್ಟಿಯನ್ನು ನಿರ್ಮಿಸಲಾಗಿದೆ. ಇದರಲ್ಲಿ ಸುಮಾರು 5 ಅಡಿಗಳಷ್ಟು ನೀರು ಇರುತ್ತದೆ. ನಗರದಲ್ಲಿ ಪ್ರತಿಷ್ಠಾಪಿಸಿರುವ ದೊಡ್ಡ ಗಣಪತಿಗಳನ್ನು ಇಲ್ಲಿ ವಿಸರ್ಜಿಸಲು ಅವಕಾಶವಿರುತ್ತದೆ’’ ಎಂದು ಹೇಳಿದ ಅವರು, ‘‘ಸಾರ್ವಜನಿಕರು ಪಾಲಿಕೆ ಮಾಡಿರುವ ಈ ವ್ಯವಸ್ಥೆಯನ್ನು ಸದ್ಬಳಕೆ ಮಾಡಿಕೊಂಡು ಸಹಕರಿಸಬೇಕು’’ ಎಂದು ಮನವಿ ಮಾಡಿದರು.
ಪಾಲಿಕೆಯ ನಿಬಂಧನೆಗಳು
ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಪ್ರತಿಷ್ಠಾಪಿಸಲು ಪಾಲಿಕೆಯು ಕೆಲವೊಂದು ಷರತ್ತುಗಳನ್ನು ವಿಧಿಸಿ ಅನುಮತಿ ಪತ್ರ ನೀಡುತ್ತಿದೆ. ಅನುಮತಿಸಲಾದ ಸ್ವತ್ತಿಗೆ ಯಾವುದೇ ಧಕ್ಕೆ ಬರಬಾರದು. ಪ್ರಚಾರಕ್ಕೆ ಪೊಲೀಸರ ಅನುಮತಿ ಪಡೆಯಬೇಕು. ಜನಸಂಚಾರ ಮತ್ತು ವಾಹನ ಸಂಚಾರಕ್ಕೆ ಅಡಚಣೆ ಆಗಬಾರದು. ನಿಗದಿತ ಸ್ಥಳದಲ್ಲೇ ಗಣಪತಿ ವಿಗ್ರಹ ವಿಸರ್ಜಿಸಬೇಕು. ಸಾರ್ವಜನಿಕರಿಗೆ ಕಾಣುವಂತೆ ಅನುಮತಿ ಪತ್ರ ಪ್ರದರ್ಶಿಸಬೇಕು. ಶಬ್ದ ಮಾಲಿನ್ಯ ಮಾಡಬಾರದು. ಕೋಮುಭಾವನೆ ಮೊದಲಾದ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಪ್ಲಾಸ್ಟರ್ ಆ್ ಪ್ಯಾರೀಸ್ (ಪಿ.ಓ.ಪಿ.) ಅಥವಾ ಬಣ್ಣಲೇಪಿತ ವಿಗ್ರಹಗಳನ್ನು ಪ್ರತಿಷ್ಠಾಪಿಸಬಾರದು. ಧ್ವನಿವರ್ಧಕವನ್ನು ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಬಳಸಬೇಕು. ಅಗ್ನಿಶಾಮಕ ಸಾಧನಗಳನ್ನು ಕಡ್ಡಾಯವಾಗಿ ಇಟ್ಟಿರಬೇಕು. ಅಗ್ನಿಶಾಮಕ ದಳದಿಂದ ನಿರಾಕ್ಷೇಪಣಾ ಪತ್ರ (ಎನ್.ಓ.ಸಿ.) ಪಡೆದಿರಬೇಕು. ಅನುಮತಿಸಿದ ಸ್ಥಳವನ್ನು ಕಾರ್ಯಕ್ರಮದ ಬಳಿಕ ಸ್ವಚ್ಛಗೊಳಿಸಬೇಕು ಎಂಬಿತ್ಯಾದಿ ಷರತ್ತುಗಳನ್ನು ವಿಧಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
