ಚಿಕ್ಕಬಳ್ಳಾಪುರದಲ್ಲಿ ಪ್ರೇಮ ವೈಫಲ್ಯ ಮನನೊಂದು ಯುವಕ ಆತ್ಮಹತ್ಯೆ

ಚಿಕ್ಕಬಳ್ಳಾಪುರ: ಪ್ರೇಮ ವೈಫಲ್ಯದ ಹಿನ್ನೆಲೆ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-44ರ ಬೆಂಗಳೂರು, ಹೈದರಾಬಾದ್ ಹೆದ್ದಾರಿ ಬದಿಯ ಶೆಟ್ಟಿಗೆರೆ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಬಾಗೇಪಲ್ಲಿ ತಾಲೂಕಿನ ಪಿಚ್ಚಲವಾರಪಲ್ಲಿ ಗ್ರಾಮದ ಮಂಜುನಾಯಕ್(24) ಮೃತ ಯುವಕ. ಕಳೆದ 4 ದಿನಗಳ ಹಿಂದೆ ಮನೆಯಲ್ಲಿ ಬೆಂಗಳೂರಿಗೆ ಹೋಗುವುದಾಗಿ ಹೇಳಿ ಬಂದಿದ್ದ ಯುವಕ ಅರಣ್ಯ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಈ ಬಗ್ಗೆ ಸ್ಥಳೀಯರು ಪೇರೇಸಂದ್ರ ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪರಿಶೀಲನೆ ನಡೆಸಿ ಮೃತದೇಹವನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ನಂತರ ಶವವನ್ನು ಕುಟುಂಬಸ್ಥರಿಗೆ ವರ್ಗಾಯಿಸಿದ್ದಾರೆ.

ಮೃತ ಯುವಕ ಅಪ್ರಾಪ್ತ ಹಾಗೂ ಅಂರ್ತಜಾತೀಯ ಬಾಲಕಿಯನ್ನು ಪ್ರೀತಿಸುತ್ತಿದ್ದ. ಹೀಗಾಗಿ ಎರಡು ಕಡೆಯ ಪೋಷಕರು ಸಹ ಇದು ಸರಿ ಅಲ್ಲ ಅಂತ ಬುದ್ದಿವಾದ ಹೇಳಿ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮನೆಯಿಂದ ಬೆಂಗಳೂರಿಗೆ ಬರುವುದಕ್ಕೆ ಮೂರು ದಿನದ ಮುಂಚೆಯೂ ಸಹ ಮಂಜುನಾಯಕ್ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಈ ವೇಳೆ ಮನೆಯವರು ಆತನನ್ನು ರಕ್ಷಿಸಿದ್ದರು. ಇದಾದ ನಂತರ ಬೆಂಗಳೂರಿನಲ್ಲಿ ವೈರಿಂಗ್ ಕೆಲಸ ಮಾಡುತ್ತಿದ್ದ ಮಂಜುನಾಯಕ್, ಮತ್ತೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೀಗ ಘಟನೆ ಸಂಬಂಧ ಪೇರೇಸಂದ್ರ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Recent Articles

spot_img

Related Stories

Share via
Copy link
Powered by Social Snap