ಬೆಂಗಳೂರು

ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಹೆಸರೇಳಿಕೊಂಡು ಕೋಟ್ಯಂತರ ರೂ. ಮೌಲ್ಯದ ಚಿನ್ನ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರೋಪಿ ಐಶ್ವರ್ಯ ಗೌಡ ಅವರನ್ನು ವಶಕ್ಕೆ ಪಡೆದಿದ್ದಾರೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿರುವ ಐಶ್ವರ್ಯ ಗೌಡ ನಿವಾಸ ಮತ್ತು ಗೊರಗುಂಟೆಪಾಳ್ಯದಲ್ಲಿರುವ ಫ್ಲ್ಯಾಟ್ ಮೇಲೆ ಇಡಿ ಅಧಿಕಾರಿಗಳು ಗುರುವಾರ ರಂದು ದಾಳಿ ನಡೆಸಿದ್ದರು. ಈ ವೇಳೆ ಇಡಿ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಇಡಿ ಅಧಿಕಾರಿಗಳು ಬೆಂಗಳೂರಿನ ಆರ್.ಆರ್.ನಗರದ ಕಾಂಗ್ರೆಸ್ ಮುಖಂಡ ತಿಬ್ಬೇಗೌಡ ನಿವಾಸದ ಮೇಲೂ ದಾಳಿ ನಡೆಸಿದ್ದರು. ತಿಬ್ಬೇಗೌಡ ಅವರ ಬ್ಯಾಂಕ್ ಅಕೌಂಟ್ಸ್ ಡೀಟೆಲ್ಸ್, ದಾಖಲೆಗಳನ್ನು ಇಡಿ ಅಧಿಕಾರಿಗಳು ಕೊಂಡೊಯ್ದಿದ್ದಾರೆ.
ಐಶ್ವರ್ಯ ಗೌಡ ಅವರ ಬೆನ್ಜ್ ಕಾರು ಬಳಸುತ್ತಿದ್ದ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಅವರ ಬೆಂಗಳೂರಿನ ಮನೆ ಮೇಲೂ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ಸತತ 28 ಗಂಟೆಗಳ ಕಾಲ ವಿನಯ ಕುಲಕರ್ಣಿ ಅವರ ಮನೆಯಲ್ಲಿ ಇಡಿ ಅಧಿಕಾರಿಗಳು ಶೋಧಕಾರ್ಯ ನಡೆಸಿದರು. ಆರೋಪಿ ಐಶ್ವರ್ಯ ಗೌಡ ತನಗೆ 3 ಕೋಟಿ 25 ಲಕ್ಷ ನಗದು ಹಾಗೂ 430 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿದ್ದಾರೆಂದು ಆರ್.ಆರ್.ನಗರ ಠಾಣೆಯಲ್ಲಿ ತಿಬ್ಬೇಗೌಡ ಪತ್ನಿ ಶಿಲ್ಪಗೌಡ ದೂರು ನೀಡಿದ್ದರು. ತಾನು ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಸಹೋದರಿ, ರಿಯಲ್ ಎಸ್ಟೇಟ್ ವಿಲ್ಲಾ ನಿರ್ಮಾಣ ಮಾಡುತ್ತೇನೆ. ಕಡಿಮೆ ಬೆಲೆಗೆ ಚಿನ್ನಾಭರಣ ಕೊಡಿಸುತ್ತೇನೆ ಅಂತ ಐಶ್ವರ್ಯ ಗೌಡ ಹಲವರಿಗೆ ವಂಚಿಸಿದ್ದರು.
2022 ರಿಂದ 2024 ರ ಅವಧಿಯಲ್ಲಿ ಅಕ್ರಮವಾಗಿ ಕೋಟ್ಯಾಂತರ ರೂಪಾಯಿ ಹಣದ ವಹಿವಾಟು ಮಾಡಿದ್ದರು. ಸುಮಾರು 70 ಕೋಟಿ ರೂ. ವಹಿವಾಟು ಅಕೌಂಟ್ ಮೂಲಕ ನಡೆಸಿದ್ದ ಬಗ್ಗೆ ತನಿಖೆ ವೇಳೆ ಗೊತ್ತಾಗಿತ್ತು. ಐಶ್ವರ್ಯಗೌಡ ವಿರುದ್ಧ ಬೆಂಗಳೂರಿನ ಆರ್.ಆರ್.ನಗರ ಚಂದ್ರಾಲೇಔಟ್ ಸೇರಿ ಮಂಡ್ಯ ಠಾಣೆಗಳಲ್ಲಿ ಹಲವು ವಂಚನೆ ಕೇಸ್ ದಾಖಲಾಗಿದ್ದವು. ಐಶ್ವರ್ಯ ಗೌಡ ಅಕ್ರಮ ಹಣ ವಹಿವಾಟು ಸಂಬಂಧ ಐಟಿ ಮತ್ತು ಇಡಿಗೆ ಬ್ಯಾಟರಾಯನಪುರ ಎಸಿಪಿ ಭರತ್ ರೆಡ್ಡಿ ಪತ್ರ ಬರೆದಿದ್ದರು.ಐಶ್ವರ್ಯಗೌಡ ಪತಿ ಹರೀಶ್ ಹೆಸರಿನಲ್ಲಿರುವ ಬೆಂಝ್ ಕಾರನ್ನು ಮಾಜಿ ಸಚಿವ ವಿನಯ್ ಕುಲಕರ್ಣಿ ಬಳಸಿದ್ದ ಆರೋಪ ಕೇಳಿಬಂದಿತ್ತು. ಈ ಕಾರನ್ನು ಎಸಿಪಿ ಭರತ್ ರೆಡ್ಡಿ ಜಪ್ತಿ ಮಾಡಿದ್ದರು.
ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಜುವೆಲ್ಲರಿಯ ಮಾಲೀಕರಿಗೆ ಐಶ್ವರ್ಯ ಗೌಡ ವಂಚನೆ ಎಸಗಿದ್ದಾರೆ ಎಂಬ ಆರೋಪವಿದೆ. ಇಷ್ಟೇ ಅಲ್ಲದೆ, ಮಾಜ ಸಂಸದ ಡಿಕೆ ಸುರೇಶ್ ಹೆಸರಿನಲ್ಲಿ ವಂಚನೆ ಎಸಗಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ 2024ರ ಡಿಸೆಂಬರ್ನಲ್ಲೇ ಡಿಕೆ ಸುರೇಶ್ ದೂರು ನೀಡಿದ್ದರು.ಪ್ರಕರಣ ಸಂಬಂಧ 2024 ರ ಡಿಸೆಂಬರ್ನಲ್ಲಿ ಐಶ್ವರ್ಯ ಗೌಡ ಮತ್ತು ಆಕೆಯ ಪತಿ ಕೆಎನ್ ಹರೀಶ್ ಅವರನ್ನು ಬಂಧಿಸಲಾಗಿತ್ತು. ಅದಾದ ನಂತರ ಐಶ್ವರ್ಯ ಗೌಡ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶಿಸಿತ್ತು.
