ಜಿ.ಎಸ್.ಟಿ.ಯಿಂದಾಗುತ್ತಿರುವ ಅನಾನುಕೂಲಗಳು: ಸರ್ಕಾರಕ್ಕೆ ಮನವಿ

ತುಮಕೂರು:

       ಜಿ.ಎಸ್.ಟಿ. ಯಿಂದಾಗಿ ತೆರಿಗೆ ಕ್ಷೇತ್ರದ ಮಂದಿ ಹಾಗೂ ಉದ್ಯಮಿಗಳು, ಟ್ಯಾಕ್ಸ್ ವೃತ್ತಿನಿರತರು ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳನ್ನು ನಿವಾರಿಸಲು ಇಲ್ಲಿನ ತುಮಕೂರು ಜಿಲ್ಲಾ ಟ್ಯಾಕ್ಸ್ ಪ್ರಾಕ್ಟೀಷಿನರ್ಸ್ ಅಸೋಸಿಯೇಷನ್ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

       ಜಿ.ಎಸ್.ಟಿ. ರಿಟನ್ರ್ಸ್ ಫೈಲ್ ಮಾಡುವಾಗ ಉದ್ಯಮಿಗಳು ಅನುಭವಿಸುತ್ತಿರುವ ಸಂಕಷ್ಟಗಳು, ವೆಬ್ ಸೈಟ್‍ನಲ್ಲಿ ಎದುರಾಗುತ್ತಿರುವ ತೊಂದರೆಗಳು, ನೆಟ್‍ವರ್ಕ್ ಸಮಸ್ಯೆ ತಡವಾಗಿದ್ದಕ್ಕೆ ಶುಲ್ಕ ವಿಧಿಸುತ್ತಿರುವ ಕ್ರಮ ನೂತನವಾಗಿ ಜಾರಿಗೆ ಬರುತ್ತಿರುವ ಕಾನೂನುಗಳ ಅನುಷ್ಠಾನದ ಮಾಹಿತಿಯ ಕೊರತೆ, ಸುತ್ತೋಲೆಗಳಲ್ಲಿ ಸ್ಪಷ್ಟತೆ ಇಲ್ಲದಿರುವುದು ಮೊದಲಾದ ಅನೇಕ ಅಂಶಗಳನ್ನು ಮನವಿ ಪತ್ರದಲ್ಲಿ ನಮೂದಿಸಲಾಗಿದೆ.

        ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯಮಿಗಳು ಎಲ್ಲರೂ ತೆರಿಗೆ ಮತ್ತು ಕಾನೂನಿನ ಅಂಶಗಳನ್ನು ತಿಳಿದುಕೊಂಡಿರುವುದಿಲ್ಲ. ನಿಗದಿತ ಸಮಯಕ್ಕೆ ಅವರು ರಿಟನ್ರ್ಸ್ ಫೈಲ್ ಮಾಡಲು ಸಾಧ್ಯವಾಗಿರುವುದಿಲ್ಲ. ಈ ಬಗ್ಗೆ ಸೂಕ್ತ ಮತ್ತು ಸಮರ್ಪಕ ಮಾಹಿತಿಯನ್ನು ಇಲಾಖೆಯಿಂದ ಒದಗಿಸುತ್ತಿರಬೇಕು. ಇದಲ್ಲದೆ, ಬಹಳ ಮುಖ್ಯವಾಗಿ ಎಲ್ಲರಿಗೂ ಎದುರಾಗುತ್ತಿರುವ ಸಮಸ್ಯೆ ಎಂದರೆ ಸಾಫ್ಟ್‍ವೇರ್ ಅಪ್‍ಡೇಟ್ ಆಗದೇ ಇರುವುದು. ಬಹಳ ದಿನಗಳಿಂದಲೂ ಇಂತಹ ಹಲವಾರು ನ್ಯೂನತೆಗಳ ಬಗ್ಗೆ ಗಮನ ಎಳೆಯಲಾಗಿದೆ. ಆದರೂ ಮುಖ್ಯ ವಿಷಯಗಳು ಬಗೆಹರಿದಿಲ್ಲ. ಸಮಸ್ಯೆಗಳು ಹಾಗೆಯೇ ಉಳಿದುಕೊಂಡಿವೆ ಎಂದು ವಿವರಿಸಿದರು.

        ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಟ್ಯಾಕ್ಸ್ ಪ್ರಾಕ್ಟೀಷಿನರ್ಸ್ ಅಸೋಸಿಯೆಷನ್‍ನ ಕಾರ್ಯದರ್ಶಿ ಎಸ್. ಪ್ರಕಾಶ್ ಅವರು ನಾವೆಲ್ಲರೂ ದೇಶದ ಹಿತಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಜಿ.ಎಸ್.ಟಿ ದೇಶದ ಅಭಿವೃದ್ಧಿಯ ಹಿತದೃಷ್ಟಿಯಲ್ಲಿ ಒಂದು ಉತ್ತಮ ದೃಷ್ಟಿಕೋನ ಹೊಂದಿದೆ. ಆದರೆ ಅದರ ಅನುಷ್ಠಾನದಲ್ಲಿ ಹಲವಾರು ಸಮಸ್ಯೆಗಳಿವೆ. ಇದರಿಂದಾಗಿ ಉದ್ದಿಮೆದಾರರು ಸಂಕಷ್ಟ ಎದುರಿಸುತ್ತಿದ್ದಾರೆ. ನಾವು ಯಾರೂ ಸಹ ಸರ್ಕಾರದ ವಿರುದ್ಧವಾಗಿ ಇಲ್ಲ. ಸರ್ಕಾರದ ನಿಯಮಗಳನ್ನು ಜಾರಿಗೆ ತರಲು ಬದ್ಧವಾಗಿದ್ದೇವೆ.

        ಆದರೆ ಇರುವ ಸಮಸ್ಯೆಗಳನ್ನು ನಿವಾರಿಸಿ ಎಂಬುದಷ್ಟೇ ನಮ್ಮ ಮನವಿಯಾಗಿದೆ. ಬಹುಮುಖ್ಯವಾಗಿರುವ ಕೆಲವು ನ್ಯೂನತೆಗಳನ್ನು ಸರಿಪಡಿಸಿದರೆ ರಾಷ್ಟ್ರದ ಆರ್ಥಿಕ ಆದಾಯ ಮತ್ತಷ್ಟು ಉತ್ತಮವಾಗಲಿದೆ. ಇದನ್ನು ನಾವು ಸರ್ಕಾರದಿಂದ ನಿರೀಕ್ಷಿಸುತ್ತಿದ್ದೇವೆ. ರಾಷ್ಟ್ರಾದ್ಯಂತ ಇಂದು ಜಿ.ಎಸ್.ಟಿ. ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸುವ ಕಾರ್ಯಕ್ರಮ ನಡೆಯುತ್ತಿದ್ದು, ಇದರ ಅಂಗವಾಗಿ ತುಮಕೂರಿನಲ್ಲಿಯೂ ನಡೆಯುತ್ತಿದೆ ಎಂದರು.

      ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಟ್ಯಾಕ್ಸ್ ಪ್ರಾಕ್ಟೀಷಿನರ್ಸ್ ಅಸೋಷಿಯೇಷನ್ ಅಧ್ಯಕ್ಷ ಸುರೇಶ್ ರಾವ್ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link