ಬೆಂಗಳೂರು :

ತೆಲುಗಿನ ಸ್ಟಾರ್ ಜೂ ಎನ್ಟಿಆರ್ ಹಿಂದಿಯ ‘ವಾರ್ 2’ ಸಿನಿಮಾ ಚಿತ್ರೀಕರಣ ಮುಗಿಸಿ ಬಂದಿದ್ದಾರೆ. ಇದೀಗ ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಸಿನಿಮಾಕ್ಕೆ ಈ ಮೊದಲು ‘ಡ್ರ್ಯಾಗನ್’ ಎಂದು ಹೆಸರಿಡಲಾಗಿತ್ತು, ಆದರೆ ಸಿನಿಮಾದ ಹೆಸರನ್ನು ಬದಲಾಯಿಸಲಾಗುವುದು ಎನ್ನಲಾಗುತ್ತಿದೆ. ಈ ಸಿನಿಮಾದ ಚಿತ್ರೀಕರಣಕ್ಕಾಗಿ ಕರ್ನಾಟಕದ ಕುಮಟಾ ಬಳಿ ಬೃಹತ್ ಸೆಟ್ ಒಂದನ್ನು ನಿರ್ಮಿಸಲಾಗಿದೆ.
ಕುಮಟಾದ ಧಾರೇಶ್ವರದಲ್ಲಿ ಭಾರಿ ಬೃಹತ್ ಸೆಟ್ ಅನ್ನು ಜೂ ಎನ್ಟಿಆರ್ ಸಿನಿಮಾಕ್ಕಾಗಿ ನಿರ್ಮಾಣ ಮಾಡಲಾಗಿದೆ. ಜೂ ಎನ್ಟಿಆರ್ ಹಲವು ದಿನಗಳ ಕಾಲ ಇಲ್ಲಿಯೇ ಇದ್ದು ಚಿತ್ರೀಕರಣ ಮಾಡಲಿದ್ದಾರೆ. ಸಿನಿಮಾ ಸೆಟ್ನಲ್ಲಿ ಬೃಹತ್ ಹೆಲಿಕಾಪ್ಟರ್, ಮನೆಗಳು, ರೈಲ್ವೆ ಟ್ರ್ಯಾಕ್, ರೈಲ್ವೆ ಭೋಗಿಗಳು, ಭಾರಿ ಬೃಹತ್ ಬಂದೂಕುಗಳು, ಟ್ಯಾಂಕರ್ಗಳನ್ನು ತಂದು ನಿಲ್ಲಿಸಲಾಗಿದೆ. ಧಾರೇಶ್ವರ ಸೆಟ್ ನೋಡಿದರೆ ಸಿನಿಮಾದ ಬೃಹತ್ತತೆ ಅರ್ಥವಾಗುವಂತಿದೆ.
ರಾಮನಗಿಂಡಿ ಕಡಲ ಕಿನಾರೆಯಲ್ಲಿ ಈ ಬೃಹತ್ ಸೆಟ್ ನಿರ್ಮಾಣ ಮಾಡಲಾಗಿದ್ದು ಪ್ರಶಾಂತ್ ನೀಲ್ ಅವರ ‘ಸಲಾರ್’, ‘ಕೆಜಿಎಫ್’ ಸಿನಿಮಾಗಳಿಗೆ ಸೆಟ್ ನಿರ್ಮಿಸಿದ್ದ ತಂಡವೇ ಜೂ ಎನ್ಟಿಆರ್ ಸಿನಿಮಾಕ್ಕೂ ಸೆಟ್ ನಿರ್ಮಾಣ ಮಾಡಿದೆ. ಪ್ರತಿದಿನ ಬೆಳಿಗ್ಗೆ 7 ರಿಂದ ಸಂಜೆ 7ರ ವರೆಗೆ ಸಿನಿಮಾ ಚಿತ್ರೀಕರಣ ನಿರಾತಂಕವಾಗಿ ಸಾಗುತ್ತಿದೆ. ಸಿನಿಮಾ ಸೆಟ್ಗೆ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗಿದೆ. ಸಿನಿಮಾದಲ್ಲಿ ಜೂ ಎನ್ಟಿಆರ್ ಎದುರು ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಪ್ರಶಾಂತ್ ನೀಲ್ ಅವರ ಈ ಹಿಂದಿನ ಸಿನಿಮಾಗಳಿಗೆ ಸಂಗೀತ ನೀಡಿದ್ದ ರವಿ ಬಸ್ರೂರು ಅವರೇ ಈ ಸಿನಿಮಾಕ್ಕೂ ಸಂಗೀತ ನೀಡಲಿದ್ದಾರೆ. ಭುವನ್ ಗೌಡ ಅವರು ಕ್ಯಾಮೆರಾ ಕಾರ್ಯ ನಿರ್ವಹಿಸಲಿದ್ದಾರೆ. ಪ್ರಶಾಂತ್ ನೀಲ್ ಬಹುತೇಕ ತಮ್ಮ ಹಳೆಯ ತಂಡವನ್ನೇ ಈ ಸಿನಿಮಾಕ್ಕೂ ಬಳಸಿಕೊಂಡಿದ್ದಾರೆ. ಸುಮಾರು ಎರಡು ತಿಂಗಳ ಹಿಂದೆಯೇ ಸಿನಿಮಾದ ಚಿತ್ರೀಕರಣ ಶುರುವಾಗಿದ್ದು, ಜೂ ಎನ್ಟಿಆರ್, ಒಂದು ವಾರದ ಹಿಂದಷ್ಟೆ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಭರ್ಜರಿ ಆಕ್ಷನ್ ಸಿನಿಮಾ ಇದಾಗಿದ್ದು, ಸಿನಿಮಾನಲ್ಲಿ ಎರಡು ಶೇಡ್ನಲ್ಲಿ ಜೂ ಎನ್ಟಿಆರ್ ಕಾಣಿಸಿಕೊಳ್ಳಲಿದ್ದಾರೆ.
ಪ್ರಶಾಂತ್ ನೀಲ್-ಜೂ ಎನ್ಟಿಆರ್ ಸಿನಿಮಾದ ಚಿತ್ರೀಕರಣ ಈ ವರ್ಷಾಂತ್ಯಕ್ಕೆ ಮುಗಿಯಲಿದೆ. ಆ ಬಳಿಕ ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಮುಂದಿನ ವರ್ಷ ಏಪ್ರಿಲ್ ತಿಂಗಳ ವೇಳೆಗೆ ಬಿಡುಗಡೆ ಆಗಲಿದೆ. ಈ ಸಿನಿಮಾದ ಬಳಿಕ ‘ದೇವರ 2’ ಸಿನಿಮಾ ಪ್ರಾರಂಭ ಮಾಡಲಿದ್ದಾರೆ ಜೂ ಎನ್ಟಿಆರ್. ಇನ್ನು ಪ್ರಶಾಂತ್ ನೀಲ್, ಈ ಸಿನಿಮಾದ ಬಳಿಕ ಪ್ರಭಾಸ್ ಜೊತೆಗೆ ‘ಸಲಾರ್ 2’ ಪ್ರಾರಂಭ ಮಾಡಲಿದ್ದಾರೆ.
