ಹೊಸಪೇಟೆ :
ಭೂಸ್ವಾಧೀನ ಕಾಯ್ದೆ ತಿದ್ದುಪಡಿ, ಬರಗಾಲ ನಿರ್ವಹಣೆಯಲ್ಲಿ ಸರ್ಕಾರ ವಿಫಲ, ಹಾಗು ತುಂಗಭದ್ರಾ ಬಲದಂಡೆ ಕೆಳಮಟ್ಟದ ರೈತರಿಗೆ ಲೈನಿಂಗ್ ಹೆಸರಿನಲ್ಲಿ ನವೀಕರಣ ಮಾಡಿ ಕರ್ನಾಟಕ ರೈತರಿಗೆ ಮೋಸ ಮಾಡುತ್ತಿರುವುದನ್ನು ಖಂಡಿಸಿ ಇದೇ 10ರಂದು ಟಿ.ಬಿ.ಡ್ಯಾಂನ ಗಣೇಶ ಗುಡಿ ಬಳಿ ಎನ್.ಎಚ್.13ರ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗುವುದು ಎಂದು ರಾಜ್ಯ ರೈತ ಸಂಘ ಹಾಗು ಹಸಿರುಸೇನೆಯ ಜಿಲ್ಲಾಧ್ಯಕ್ಷ ಜೆ.ಕಾರ್ತಿಕ್ ಹೇಳಿದರು.
ಇಲ್ಲಿನ ಅಮರಾವತಿ ಪ್ರವಾಸಿ ಮಂದಿರದಲ್ಲಿ ಶನಿವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಯುಪಿಯ ಸರ್ಕಾರ ರೈತರ ಅನುಕೂಲಕ್ಕಾಗಿ ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಮಾಡಿ ರೈತರ ಒಪ್ಪಿಗೆ ಇಲ್ಲದೇ ಭೂಸ್ವಾಧೀನ ಪಡಿಸಿಕೊಳ್ಳುವಂತಿಲ್ಲ. ರೈತರಿಗೆ ಕೊಡುವ ಪರಿಹಾರ ಮಾರುಕಟ್ಟೆ ಧರಕ್ಕಿಂತ ನಾಲ್ಕು ಪಟ್ಟು ಹೆಚ್ಚಿರಬೇಕು. ಸ್ವಾಧೀನ ಪಡಿಸಿಕೊಂಡ ಭೂಮಿ ಸಾರ್ವಜನಿಕ ಉದ್ದೇಶಗಳಿಗೆ ಸೀಮಿತವಾಗಿರಬೇಕು.
ಹಾಗು ಸ್ವಾಧೀನ ಪಡಿಸಿಕೊಂಡ ಭೂಮಿ 5ವರ್ಷಗಳೊಳಗೆ ಉದ್ದೇಶಿತ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳಬೇಕು. ಮಾಡದಿದ್ದರೆ ರೈತರಿಗೆ ಭೂಮಿಯನ್ನು ವಾಪಸ್ಸು ಕೊಡಬೇಕು ಎಂಬ ಕಾಯ್ದೆಯನ್ನು ಜಾರಿಗೆ ತಂದಿತ್ತು. ಆದರೆ ಈಗಿನ ಮೈತ್ರಿ ಸರ್ಕಾರ ಹಿಂದಿನ ಎಲ್ಲಾ ಕಾಯ್ದೆಗಳನ್ನು ಗಾಳಿಗೆ ತೂರಿ ಈಗ ಹೊಸ ಕಾಯ್ದೆ ಜಾರಿಗೆ ತಂದು ರೈತರ ಪರವಾನಿಗೆ ಪಡೆಯದೇ ಏಕಾಏಕಿ ರೈತರ ಭೂಮಿಯನ್ನು ಸರ್ಕಾರಿ ಧರದಲ್ಲಿ ಕೇವಲ ಎಕರೆಗೆ 1.22ಲಕ್ಷಕ್ಕೆ ಮಾರಾಟ ಮಾಡಲು ಹೊರಟಿದೆ. ಈ ಕಾಯ್ದೆಯು ರೈತರಿಗೆ ಮರಣ ಶಾಸನವಾಗಿದ್ದು, ಕೂಡಲೇ ಈ ಕಾಯ್ದೆಯನ್ನು ವಾಪಾಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಯಾವ ಮಾನದಂಡದ ಮೇಲೆ ಜಿಂದಾಲ್ ಕಾರ್ಖಾನೆಗೆ 3667 ಎಕರೆ ಭೂಮಿಯನ್ನು ಕೇವಲ 1.22 ಲಕ್ಷಕ್ಕೆ ಮಾರಾಟ ಮಾಡಲು ಹೊರಟಿದೆಯೋ ನಮಗೆ ಅರ್ಥವಾಗುತ್ತಿಲ್ಲ. ಇವರಿಗೇನು ಮಾನ ಮರ್ಯಾದೆ ಇದೆಯಾ ? ಎಂದು ಪ್ರಶ್ನಿಸಿದ ಅವರು, ರೈತರ ಭೂಮಿಯನ್ನು ಕಬಳಿಸಲು ಸರ್ಕಾರ ಈ ರೀತಿ ಮಾಡುತ್ತಿದೆ. ಇವೆಲ್ಲವುಗಳನ್ನು ಖಂಡಿಸಿ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಜೂ.10ರಂದು ಬೆಳಿಗ್ಗೆ 10ರಿಂದ ಸಂಜೆ 6ಗಂಟೆಯ ವರೆಗೆ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು. ಅಂದು ಎಲ್ಲಾ ಪ್ರಗತಿಪರ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು ಬೆಂಬಲ ನೀಡಲಿವೆ ಎಂದರು.
ಹಿಂದೆ ವಿಜಯನಗರ ಕಾಲುವೆಗಳಾದ ರಾಯ, ಬಸವ, ಬೆಲ್ಲ, ತುರ್ತಾ ಕಾಲುವೆಗಳಿಗೆ 7ಟಿಎಂಸಿ ನೀರು ಕಾಲುವೆಗಳಿಗೆ ಹರಿಯುತ್ತಿತ್ತು. ಇಂದು ರಾಜಕಾರಿಣಿಗಳ ಇಚ್ಚಾಶಕ್ತಿ ಕೊರತೆಯಿಂದ ಕೇವಲ 5ಟಿಎಂಸಿ ನೀರು ಹರಿಯುವಂತಾಗಿದೆ ಎಂದು ಆರೋಪಿಸಿದರು.
ಸರ್ಕಾರ 1 ಎಕರೆಗೆ ಕೇವಲ 1.22ಲಕ್ಷಕ್ಕೆ ಮಾರಾಟ ಮಾಡುತ್ತಿದೆ. ಬೇಕಾದರೆ ನಾವೇ ರೈತರು ಎಕರೆಗೆ 1.50ಲಕ್ಷ ಕೊಡಲು ಸಿದ್ದರಿದ್ದೇವೆ. ತಾಕತ್ತಿದ್ದರೆ ಸರ್ಕಾರ ನಮಗೇ ಭೂಮಿ ನೀಡಲಿ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಜೆ.ಕಾರ್ತಿಕ್ ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಕಾರ್ಯಧ್ಯಕ್ಷ ಪಿ.ನಾರಾಯಣರೆಡ್ಡಿ, ತಾಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ, ಪದಾಧಿಕಾರಿಗಳಾದ ಎಲ್.ಎಸ್.ರುದ್ರಪ್ಪ, ರೇವಣಸಿದ್ದಪ್ಪ, ಚಿನ್ನಾದೊರೈ, ಅಯ್ಯಣ್ಣ, ನಾಗೇಶ, ಶ್ರೀನಿವಾಸ, ಎಂ.ಕೆ.ಹನುಮಂತಪ್ಪ, ಮಧುಸೂಧನ್ ಇದ್ದರು.