ಛತ್ತರ್‌ಪುರ:
ಮಧ್ಯ ಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ವೇಗವಾಗಿ ಬಂದ ಟ್ರಕ್ 16 ಹಸುಗಳ ಮೇಲೆ ಹರಿದಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.ಶುಕ್ರವಾರ ರಾತ್ರಿ 11 ಗಂಟೆಯ ಸುಮಾರಿಗೆ ಝಾನ್ಸಿ-ಖಜುರಾಹೊ ರಸ್ತೆಯ ಕೈದಿ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಐದು ಗೋವುಗಳು ಗಾಯಗೊಂಡಿವೆ ಎಂದು ಅಧಿಕಾರಿ ಹೇಳಿದ್ದಾರೆ.
ಅಪರಿಚಿತ ವಾಹನವೊಂದು ಹಸುಗಳ ಮೇಲೆ ಹರಿದಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಯಗೊಂಡ ಪ್ರಾಣಿಗಳನ್ನು ಪಶು ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತಾ(ಬಿಎನ್‌ಎಸ್)ಯ ಮೋಟಾರು ವಾಹನ ಕಾಯ್ದೆ ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ, ಪೊಲೀಸರು ಟ್ರಕ್ ಅನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಉತ್ತರ ಪ್ರದೇಶದ ನಿವಾಸಿಗಳಾದ ಚಾಲಕ ಧೀರೇಂದ್ರ ಕುಶ್ವಾಹಾ ಮತ್ತು ಸಹಾಯಕ ಪ್ರಮೋದ್ ಕುಶ್ವಾಹಾ ಅವರನ್ನು ಬಂಧಿಸಲಾಗಿದೆ.ಘಟನೆಯಲ್ಲಿ 16 ಹಸುಗಳು ಸಾವನ್ನಪ್ಪಿದ್ದು, ಐದು ಹಸುಗಳು ಗಾಯಗೊಂಡಿವೆ ಎಂದು ಪಶುವೈದ್ಯಾಧಿಕಾರಿ ಆರ್ ಎನ್ ಸೇನ್ ತಿಳಿಸಿದ್ದಾರೆ.