ತನಿಖೆ ನಡೆಸುವ ದಮ್ಮು, ತಾಖತ್ತು ಇದ್ದರೆ ದಾಖಲೆ ಕೊಡುತ್ತೇನೆ : ಎಚ್.ಡಿ.ಕೆ

ಬೆಂಗಳೂರು

    ಈ ಸರಕಾರ ಬಂದ ಮೇಲೆ ನಡೆಯುತ್ತಿರುವ ವರ್ಗಾವಣೆ ದಂಧೆ ಹಾಗೂ ಕಾಸಿಗಾಗಿ ಪೋಸ್ಟಿಂಗ್ ಬಗ್ಗೆ ನಾನು ದಾಖಲೆ ಕೊಡಲು ಸಿದ್ಧನಿದ್ದೇನೆ. ತನಿಖೆ ನಡೆಸುವ ದಮ್ಮು ತಾಕತ್ತು ಸರಕಾರಕ್ಕೆ ಇದೆಯಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಸವಾಲು ಹಾಕಿದರು.

   ವಿಧಾನಸೌಧದಲ್ಲಿ ಇಂದು ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ ಅವರು; ಯಾರೋ ಒಬ್ಬರು ತಾಖತ್ತು ಇದ್ದರೆ ಕುಮಾರಸ್ವಾಮಿ ದಾಖಲೆ ಕೊಡಲಿ ಎಂದು ಹೇಳಿದ್ದಾರೆ. ಅದಕ್ಕೆ ಇದೇ ನನ್ನ ಉತ್ತರ. ನನ್ನ ಹತ್ತಿರ ದಾಖಲೆಗಳೂ ಇವೆ. ದಾಖಲೆ ಕೊಡುವ ದಮ್ಮು, ತಾಖತ್ತು ನನಗೆ ಇದೆ. ತನಿಖೆ ಮಾಡುವ ದಮ್ಮು, ತಾಖತ್ತು ಇವರಿಗೆ ಇದೆಯಾ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.

    ಈ ಸರಕಾರ ಇನ್ನೂ ಹನಿಮೂನ್ ಪೀರಿಯಡ್ ನಲ್ಲಿ ಇದೆ ಎಂದು ಹೇಳುತ್ತಿದ್ದಾರೆ ಕಾಂಗ್ರೆಸ್ ನವರು. ಸರಕಾರಕ್ಕೆ ಐದು ಆರು ತಿಂಗಳಾದರೂ ಸಮಯ ಕೊಡಬೇಡವೇ ಎಂದು ಕೆಲವರು ಕೇಳುತ್ತಿದ್ದಾರೆ. ಹನಿಮೂನ್ ಪೀರಿಯಡ್ ನಲ್ಲಿದ್ದರೆ ಈಗೆಲ್ಲಾ ಮಾಡುತ್ತಾರೆಯೇ? ಹನಿಮೂನ್ ಪಿರಿಯಡ್ ನಲ್ಲೇ ಹೀಗಾದರೆ ಮುಂದಿರುವ ಪೀರಿಯಡ್ ಗಳ ಕಥೆ ಏನು? ಎಂದು ಅವರು ತೀಕ್ಷ÷್ಣವಾಗಿ ಪ್ರಶ್ನಿಸಿದರು.

    ನನ್ನ ಆರೋಪಕ್ಕೆ ದಾಖಲೆ ಕೇಳ್ತಿದ್ದಾರೆ ಕಾಂಗ್ರೆಸ್ ನಾಯಕರು. ಅವರ ಕನಸು ನಾನು ಈಡೇರಿಸುತ್ತೇನೆ. ನಾನು ದಾಖಲೆ ಕೊಟ್ಟರೆ ಯಾವ ಮಂತ್ರಿಯ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆದಿದೆ ಎಂದು ಆ ಮಂತ್ರಿಯನ್ನು ವಜಾ ಮಾಡ್ತಿರಾ? ಆ ಮಂತ್ರಿಯನ್ನು ವಜಾ ಮಾಡುವ ತಾಕತ್ ಇವರಿಗೆ ಇದೆಯಾ? ನಾನು ನನ್ನ ಬಳಿ ಇರುವ ದಾಖಲೆಯನ್ನು ಸದನದಲ್ಲಿಯೇ ಇಡುತ್ತೇನೆ. ನಾನು ದಾಖಲೆ ಕೊಟ್ಟರೆ ಈ ಸರ್ಕಾರ ಎಲ್ಲಿರುತ್ತೊ ಗೊತ್ತಿಲ್ಲ. ಸುಮ್ಮನೆ ಸ್ವಲ್ಪ ದಿನ ಈ ಸರಕಾರ ನೆಮ್ಮದಿಯಾಗಿರಲಿ ಎಂದು ಬಿಟ್ಟಿದೀನಿ. ಸರಕಾರ ತಿದ್ದಿಕೊಂಡರೆ ಒಳ್ಳೆಯದು ಎಂದು ಬಿಟ್ಟಿದೀನಿ ಅಷ್ಟೇ ಎಂದರು.

    ಕಳೆದ ಎರಡು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದ ಕೊನೆಪಕ್ಷ ಒಂದು ದಾಖಲೆಯನ್ನೂ ಬಿಡುಗಡೆ ಮಾಡಿಲ್ಲ. ಮಂತ್ರಿಯೊಬ್ಬರು ನಾನು ದಾಖಲೆ ಸಮೇತ ಆರೋಪ ಮಾಡಿದ್ದೆ ಎಂದು ಹೇಳಿಕೆ ನೀಡಿದ್ದಾರೆ. ಅದು ಯಾವ ದಾಖಲೆ ಕೊಟ್ಟಿದ್ದಾರೆ, ಯಾವ ತನಿಖೆ ನಡೆದಿದೆ ನಡೆದಿದೆ ಎನ್ನುವುದರ ಬಗ್ಗೆ ಮಾಹಿತಿ ಕೊಡಲಿ. ಚುನಾವಣೆ ಸಮಯದಲ್ಲಿ ಇವರು ಭ್ರಷ್ಟಾಚಾರದ ಬಗ್ಗೆ ಪುಟಗಟ್ಟಲೆ ಜಾಹಿರಾತು ಕೊಟ್ಟರು. ಆದರೆ, ಒಂದು ದಾಖಲೆಯನ್ನಾದರೂ ಬಿಡುಗಡೆ ಮಾಡಿದಾರಾ? ಸುಳ್ಳು ದಾಖಲೆ ಹೇಳಿ ಅಧಿಕಾರಕ್ಕೆ ಬಂದಿದೀರಾ? ಎಂದು ಅವರು ಪ್ರಶ್ನಿಸಿದರು.

    ನನ್ನ ಅವಧಿಯಲ್ಲಿ ನಡೆದ ವರ್ಗಾವಣೆಗಳ ಬಗ್ಗೆಯೂ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ನನ್ನ ಕಾಲದಲ್ಲಿ ನಡೆದ ವರ್ಗಾವಣೆಯನ್ನು ತನಿಖೆ ಮಾಡಲಿ. ಐದು ವರ್ಷ ಕಾಂಗ್ರೆಸ್ ಪಕ್ಷದ ಪೂರ್ಣ ಸರಕಾರ ಇತ್ತಲ್ಲ, ಆ ಸರಕಾರದ ಅವಧಿಯಲ್ಲಿ ನಡೆದ ವರ್ಗಾವಣೆಗಳ ಕುರಿತು ತನಿಖೆ ನಡೆಸಲಿ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

    ಕಾಂಗ್ರೆಸ್ ನವರು ಹಗಲು ದರೋಡೆ ಗೆ ಇಳಿದಿದ್ದಾರೆ. ವರ್ಗವಣೆ ದಂಧೆಗೆ ಹಣ ನಿಗದಿ ಮಾಡಿದ್ದಾರೆ ಅಂತ ಗೊತ್ತು. ಪ್ರತಿ ಹುದ್ದೆಗೂ ಒಂದೊಂದು ರೇಟ್ ಫಿಕ್ಸ್ ಮಾಡಿದ್ದಾರೆ. ಸಮಯ ಬಂದಾಗ ದಾಖಲೆ ಕೊಟ್ಟೆ ಕೊಡುತ್ತೇನೆ. ನಾನು ಎಲ್ಲಿಯೂ ಓಡಿ ಹೋಗುವುದಿಲ್ಲ ಎಂದರು.

   ನಾನು ಕೊಡುವ ದಾಖಲೆ ನೋಡಿದ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳುತ್ತೀರಿ ಅಂತ ಮೊದಲು ಅವರು ಹೇಳಲಿ. ಈ ಬಗ್ಗೆ ಪ್ರಶ್ನೆ ಎತ್ತಿದವರು ಉತ್ತರ ಕೊಡಲಿ ಎಂದ ಅವರು; ಕೆಲವರು ಸತೀಶ್ ಜಾರಕಿಹೊಳಿ ಮುಂದಿನ ಮುಖ್ಯಮಂತ್ರಿ ಅಂತ ಹೇಳ್ತಾರೆ. ಈಗಾಗಲೇ ಡಿಕೆ ಶಿವಕುಮಾರ್ ಅವರು ಟವೆಲ್ ಹಾಕಿದ್ದಾರೆ ಎಂದು ಅವರು ಟಾಂಗ್ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap