ಬೆಂಗಳೂರು: ಭಾರತ ಸ್ವಾತಂತ್ರ್ಯ ಪಡೆಯಲಿಕ್ಕೆ ಸಾವಿರಾರು ಜನರ ತ್ಯಾಗ, ಬಲಿದಾನಗಳು ನಡೆದಿವೆ. ಆ ತ್ಯಾಗ, ಬಲಿದಾನ ಮಾಡಿರುವ ಮಹನೀಯರನ್ನು ನೆನೆಯಬೇಕು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಗೆ ಕರೆ ನೀಡಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.
ಅಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿದ್ಯುನ್ಮಾನ ಮಾಧ್ಯಮ ವಿಭಾಗ ಮತ್ತು ದಿಶಾ ಭಾರತ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಈ ಕಳೆದ 75 ವರ್ಷಗಳಲ್ಲಿ ಭಾರತವು ವಿವಿಧತೆಯಲ್ಲಿ ಏಕತೆ ಸಾಧಿಸಿದೆ. ಅದಕ್ಕಾಗಿಯೇ ಪ್ರಧಾನಿ ಮೋದಿ ಅವರು ಇದೊಂದು ಅಮೃತ ಕಾಲ ಎಂದು ಘೋಷಿಸಿದ್ದಾರೆ.
ನಮ್ಮ ರಾಜ್ಯದಲ್ಲಿ ಆರೂವರೆ ಕೋಟಿ ಜನಸಂಖ್ಯೆ ಇದ್ದರೂ ಗುಣಮಟ್ಟದ ಶಿಕ್ಷಣದ ಕೊರತೆಯಿಂದಾಗಿ ಟ್ಯಾಲೆಂಟ್‌ಗೂ ಕೊರತೆ ಉಂಟಾಗಿದೆ. ತರಗತಿಯ ಕಲಿಕೆಯಿಂದ ಹೊರಬಂದರೆ ಮಾತ್ರ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯ. ಆ ನಿಟ್ಟಿನಲ್ಲಿ ದೇಶದಲ್ಲೇ ಪ್ರಪ್ರಥಮ ಬಾರಿಗೆ ಕರ್ನಾಟಕದಲ್ಲಿ ಎನ್‌ಇಪಿ ಜಾರಿಗೆ ತರಲಾಗಿದೆ. ಈ ನಾಡಿನಲ್ಲಿ ಪ್ರತಿಯೊಬ್ಬ ಯುವಕರೂ ಕೌಶಲ ಹೊಂದಬೇಕು. ಆ ಮೂಲಕ ಪ್ರತಿಯೊಬ್ಬರೂ ಉದ್ಯೋಗ ಪಡೆಯುವಂತಾಗಬೇಕು ಎಂಬ ನಿಟ್ಟಿನಲ್ಲಿ ನಮ್ಮ ಸರಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತ್‌ಕುಮಾರ್, ಮನೆಗಿಂತ ದೊಡ್ಡ ವಿಶ್ವವಿದ್ಯಾಲಯ ಮತ್ತೊಂದಿಲ್ಲ.ಮನೆಯ ಸಂಸ್ಕೃತಿಯಿಂದ ಕಲಿಯದ ಪಾಠ ಬೇರೆ ಎಲ್ಲಿಂದಲೂ ಕಲಿಯಲು ಸಾಧ್ಯವಿಲ್ಲ. ದಾನ, ಧರ್ಮದ ಬಗ್ಗೆ ಯಾವ ವಿಶ್ವವಿದ್ಯಾಲಯದಲ್ಲಿ ಕಲಿಸುವುದಿಲ್ಲ. ಆದರೆ ನಮ್ಮ ಹಳ್ಳಿಗಳಲ್ಲಿರುವ ರೈತರು ಬೆಳೆ ಬಂದಾಗ ಬಡವರಿಗೆ, ದರಿದ್ರರಿಗೆ ದಾನ ಮಾಡಿ ನಂತರ ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ಪರಂಪರಾಗತದಿಂದ ಇಂತಹ ಗುಣವನ್ನು ಕಲಿಸಿದ್ದು ಭಾರತ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂವಿವಿ ಕುಲಪತಿ ಡಾ.ಎಸ್.ಎಂ.ಜಯಕರ, ಕುಲಸಚಿವ ಡಾ.ಎಂ.ಕೊಟ್ರೇಶ್, ದಿಶಾ ಭಾರತ್ ಅಧ್ಯಕ್ಷ ಡಾ.ಎನ್.ವಿ.ರಘುರಾಮ್ ಮತ್ತಿತರರು ಉಪಸ್ಥಿತರಿದ್ದರು.
ನಾವು ಜ್ಞಾನವನ್ನು ಸಂಪಾದಿಸಬೇಕು. ಆ ಜ್ಞಾನವನ್ನು ಮಂಡಿಸಬೇಕು. ಮಂಡಿಸಿದ ವಿಚಾರಕ್ಕೆ ಬದ್ಧವಾಗಿರಬೇಕು. ಈ ನಿಟ್ಟಿನಲ್ಲಿ ದಿಶಾ ಭಾರತ ಸಂಸ್ಥೆಯು ಯಶಸ್ವಿಯಾಗಿ ಕೆಲಸ ಮಾಡುತ್ತಿದೆ. ವಿಶ್ವವಿದ್ಯಾಲಯಗಳಲ್ಲೂ ಇದು ಅನುಷ್ಠಾನವಾಗಬೇಕು.
-ಡಾ.ಸಿ.ಎನ್.ಅಶ್ವತ್ಥ ನಾರಾಯಣ
ಉನ್ನತ ಶಿಕ್ಷಣ ಸಚಿವ
ಅಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿದ್ಯುನ್ಮಾನ ಮಾಧ್ಯಮ ವಿಭಾಗ ಮತ್ತು ದಿಶಾ ಭಾರತ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತ್‌ಕುಮಾರ್, ಕುಲಪತಿ ಡಾ.ಎಸ್.ಎಂ.ಜಯಕರ, ಕುಲಸಚಿವ ಡಾ.ಎಂ.ಕೊಟ್ರೇಶ್, ದಿಶಾ ಭಾರತ್ ಅಧ್ಯಕ್ಷ ಡಾ.ಎನ್.ವಿ.ರಘುರಾಮ್ ಮತ್ತಿತರರು ಉದ್ಘಾಟಿಸಿದರು.