ಬೆಂಗಳೂರು:
ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ ಮೀಸಲಿಟ್ಟ ಹಣವನ್ನು ಕಾನೂನಿಗೆ ವಿರುದ್ದವಾಗಿ ಮೂಲಸೌಕರ್ಯ ಯೋಜನೆಗಳಿಗೆ ಬಳಕೆ ಮಾಡುವ ಮೂಲಕ ರಾಜ್ಯದ ಬಿಜೆಪಿ ಸರ್ಕಾರ ದಲಿತ ಸಮುದಾಯಕ್ಕೆ ದ್ರೋಹ ಬಗೆದಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.
ನಮ್ಮ ಸರ್ಕಾರ ಜಾರಿಗೆ ತಂದಿರುವ ಎಸ್ ಸಿಪಿ/ಟಿಎಸ್ ಪಿ ಕಾಯ್ದೆಯ ಪ್ರಕಾರ ಒಟ್ಟು ಬಜೆಟ್ ನ ಶೇಕಡಾ 24.1ರಷ್ಟು ಭಾಗವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣಕಾರ್ಯಕ್ರಮಗಳಿಗಷ್ಟೇ ಬಳಸಬೇಕಾಗುತ್ತದೆ. ಆ ವರ್ಷ ಉಳಿಕೆಯಾದರೆ ಅದನ್ನು ನಂತರದ ವರ್ಷ ಖರ್ಚು ಮಾಡಬೇಕು. ನಿಗದಿತ ಪ್ರಮಾಣದಲ್ಲಿ ನಿಗದಿತ ಉದ್ದೇಶಕ್ಕೆ ಖರ್ಚು ಮಾಡದೆ ಇದ್ದರೆ ಸಂಬಂಧಿತ ಅಧಿಕಾರಿಗಳ ವಿರುದ್ದ ಕಾನೂನುಕ್ರಮ ಕೈಗೊಳ್ಳಲು ಕೂಡಾ ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ.
2021-22ರ ರಾಜ್ಯ ಬಜೆಟ್ ನಲ್ಲಿ ಎಸ್ ಸಿಪಿ/ಟಿಎಸ್ ಪಿ ಕಾಯ್ದೆಯನ್ವಯ ಯೋಜನಾ ವೆಚ್ಚದ ಶೇಕಡಾ 24.1ರಷ್ಟು ಅಂದರೆ 26,695.64 ಕೋಟಿ ರೂಪಾಯಿಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲ್ಯಾಣಕ್ಕೆ ಮೀಸಲಿಡಲಾಗಿತ್ತು. ಆದರೆ ರಾಜ್ಯ ಸರ್ಕಾರ ಕಾಯ್ದೆಯನ್ನು ಉಲ್ಲಂಘಿಸಿ ಒಟ್ಟು ಹಣದಲ್ಲಿ ರೂ.7885.32 ಕೋಟಿಗಳನ್ನು ಮೂಲಸೌಕರ್ಯದ ಯೋಜನೆಗಳಿಗೆ ವ್ಯಯ ಮಾಡಿದೆ. ಇದು ಸಂಪೂರ್ಣವಾಗಿ ಕಾನೂನು ವಿರೋಧಿ ನಡೆಯಾಗಿದ್ದು ಇದಕ್ಕೆ ಕಾರಣಕರ್ತರಾದವರ ವಿರುದ್ದ ಎಸ್ ಸಿಪಿ/ಟಿಎಸ್ ಪಿ ಕಾಯ್ದೆಯನ್ವಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತೇನೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
