“ನನ್ನ ಜೀವನವೇ ನನ್ನ ಸಂದೇಶ” ಎಂದ ರಾಷ್ಟ್ರಪಿತನ ಜೀವನ ಆದರ್ಶಪೂರ್ಣ

0
31

ಬಳ್ಳಾರಿ:

        “ಮನುಷ್ಯನ ಹುಟ್ಟು ಪ್ರಾಕೃತಿಕ ವಿಸ್ಮಯ ಅಷ್ಟೇ ಆಕಸ್ಮಿಕ. ಸಾವು ಜೀವನದ ಸತ್ಯ. ಹುಟ್ಟು ಸಾವಿನ ನಡುವಿನ ಬಾಳು ಅರ್ಥಪೂರ್ಣವಾಗುವಂತಿದ್ದರೆ ಜ್ಞಾನದಿಂದ ಸಂಪಾದಿಸಿದ ಸಂಸ್ಕಾರದಿಂದ ಸತ್ಯದ ಜೀವನ ಪ್ರಯೋಗವನ್ನು ಅರ್ಥಮಾಡಿಕೊಂಡ ಕಾರಣವಾಗಿ ನನ್ನ ಜೀವನವು ವೈಚಿತ್ರ್ಯ ವೈರುಧ್ಯಗಳಿಂದ ಕೂಡಿ ಸತ್ಯದ ಅನ್ವೇಷಣೆಯಲ್ಲಿ ತೊಡಗಿ ಜನಮಾನಸದಲ್ಲಿ ಒಂದಾಗಿ ಬೆರೆತು ಹೋಯಿತು.

       ಹೀಗಿದ್ದಾಗ ಜನ ಸಾಮಾನ್ಯರಲ್ಲೊಬ್ಬನಾದ ನಾನು ನನ್ನ ಜನರಿಗೆ ಏನೆಂದು ಸಂದೇಶ ನೀಡಲಿ? ನನ್ನ ಜೀವನವೇ ನನ್ನ ಸಂದೇಶ ಎಂದು ನಡೆದು ತೋರಿಸಿದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜೀವನ ನಮಗೆ ಸೂರ್ಯಚಂದ್ರರಿರುವವರೆಗೂ ಆದರ್ಶಪೂರ್ಣ.

       ಇತಿಹಾಸ ನಮಗೆ ಕಲಿಸಿದ್ದು ಸಾಕಷ್ಟಿದೆ. ಭವಿಷ್ಯದಲ್ಲಿ ಕಲಿಯಬೇಕಾದುದು ಬೇಕಾದಷ್ಟಿದೆ. ಇದರ ಮಧ್ಯೆ ನಮ್ಮನ್ನು ನಾವು ರೂಪಿಸಿಕೊಳ್ಳು ಇರಬೇಕಾದ ಸಹನೆ ಸಂಯಮ ಸತ್ಯ ಪ್ರಾಮಾಣಿಕತೆ ಅನುಸರಣೆ. ಅದರಿಂದ ಜೀವನದರ್ಶನ. ಕಷ್ಟವನ್ನು ಮೆಟ್ಟಿನಿಲ್ಲುವ ಗಟ್ಟಿತನಗಳು ಪ್ರಾಪ್ತಿ.

      ಹಿಗಾಗಿ ಮೌಲ್ಯಯುತ ಹಿತವಚನಗಳಿಗೆ ನಾವು ಕಿವಿಕೊಡಬೇಕು.” ಎಂದು ಹಿರಿಯ ಸಾಹಿತಿ ಗಂಗಾಧರ್ ಪತ್ತಾರ್ ಅಭಿಪ್ರಾಯ ಪಟ್ಟರು. ಬಳ್ಳಾರಿಯ ಶ್ರೀ ರಾಮಾಂಜನೇಯ ತೊಗಲು ಗೊಂಬೆ ಮೇಳ ಟ್ರಸ್ಟ್(ರಿ) ಅವರು ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಏರ್ಪಡಿಸಿದ್ದ ‘ಬಾಪೂಜಿ ಗೆ-150’ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಸಂದರ್ಭದಲ್ಲಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.

       ಕಾರ್ಯಕ್ರಮದ ಉದ್ಘಾಟಕರಾಗಿ ಭಾಗವಹಿಸಿದ್ದ ಟಿ.ಜಿ.ವಿಠಲ್ “ಮಹಾತ್ಮಾ ಗಾಂಧೀಜಿ ಅದೊಂದು ದಿವ್ಯ ಚೇತನ. ಬಾಲ್ಯದಲ್ಲೇ ಶ್ರವಣಕುಮಾರನ ಪಿತೃಭಕ್ತಿ, ಹರಿಶ್ಚಂದ್ರನ ಸತ್ಯ ಸಂಧತೆಯಿಂದ ಪ್ರಭಾವಿತರಾದವರು. ಲಂಡನ್ ನಗರದಲ್ಲಿ ಅಭ್ಯಾಸಮಾಡುವಾಗಲೂ ಬೈಬಲ್-ಕುರಾನ್- ಭಗವದ್ಗೀತೆಗಳ ಆಳವಾದ ಅದ್ಯಯನದಿಂದ ಸ್ವಂತದ ಬದುಕನ್ನು ಪ್ರಯೋಗಶೀಲತೆಗೆ ಒಗ್ಗಿಸಿಕೊಂಡ ಮಹಾನುಭಾವ. ಸ್ವಂತ ಕ್ಷೌರ, ಸ್ವಂತ ಚಪ್ಪಲಿ ನಿರ್ಮಾಣ, ಸ್ವಂತವಾಗಿ ನೂಲುನೇಯ್ದು ಬಟ್ಟೆಯನ್ನು ಹೆಣೆದು ಸ್ವಂತ ಗ್ರಾಮೋದ್ಯೋಗಗಳ ಬಗೆಗೆ ಅರಿವನ್ನು ಮೂಡಿಸಿ ದೇಶೀಯ ಪ್ರಭಾವದ ಚಳುವಳಿಗಳಿಂದ ಇನ್ನೂರು ವರ್ಷಗಳಿಂದ ಭಾರತವನ್ನು ಕಪಿಮುಷ್ಟಿಯಲ್ಲಿ ಬಿಗಿ ಹಿಡಿದಿದ್ದ ಬ್ರಿಟೀಷರನ್ನು ದೇಶದಿಂದ ಹೊರಗಟ್ಟುವ ಸಂಕಲ್ಪವನ್ನು ಮಾಡಿ ಸ್ವಾತಂತ್ರ ಶಿಲ್ಪಿ ಎನಿಸಿದರು.

       ಅಂತೆಯೇ ರವೀಂದ್ರನಾಥ ಠಾಗೋರರು ಗಾಂಧೀಜಿಯವರನ್ನು ‘ಮಹಾತ್ಮಾ’ಎಂದು ಕರೆದರು. ಗಾಂಧೀಜಿಗೆ ಮತ್ತೊಬ್ಬ ಪರ್ಯಾಯ ಗಾಂಧೀಜಿ ಇಲ್ಲ. ಗಾಂಧೀಜಿಗೆ ಗಾಂಧೀಜಿಯೇ ಸಾಟಿ” ಎಂದು ಅಭಿಪ್ರಾಯ ಪಟ್ಟರು. ಮುಖ್ಯ ಅತಿಥಿಗಳಾಗಿ ಹಿರಿಯ ರಂಗ ಹಾಗೂ ನೃತ್ಯಕಲಾವಿದೆ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಶ್ರೀಮತಿ ವನಮಾಲ ಕುಲಕರ್ಣಿ, ಬಾಲ ಭಾರತಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಪಲ್ಲವಿ ವೈ ರಾಘವೇಂದ್ರರಾವ್ ಮುಂತಾದವರು ಉಪಸ್ಥಿತರಿದ್ದರು.

       ಮಹಾತ್ಮಾ ಗಾಂಧೀಜಿ ಹಾಗೂ ರಾಷ್ಟ್ರಗೀತೆಗಳ ಪ್ರಸ್ತುತಿಗಾಗಿ ಮೈಸೂರಿನಿಂದ ಆಗಮಿಸಿದ್ದ ಕು. ಸಿಯೆನ್ನಾ ಕಂಠದಿಂದ ಅದ್ಭುತವಾದ ಗೀತೆಗಳು ಮೂಡಿ ಬಂದವು. ವಂದೆ ಮಾತರಂ, ವೈಷ್ಣವ ಜನತೋ, ಇತನಿ ಶಕ್ತಿ ಹಮೇ ದೇನ ದಾತಾ, ಧನೋ ಧಾನ್ಯ ಪುಷ್ಪೆ ಪುರಾ, ಭಾರತ ಪಿತನೆ ಬಾಪೂಜಿ, ಮುಂತಾದ ಹಾಡುಗಳ ಜೊತೆಗೆ ಕೊನೆಯದಾಗಿ ಹಾಡಿದ ಜನಗಣ ಮನ ಸಂಪೂರ್ಣ ರಾಷ್ಟ್ರಗೀತೆ ನೆರೆದಿದ್ದ ಪ್ರೇಕ್ಷಕರನ್ನು ಸಂಪೂರ್ಣವಾಗಿ ರೋಮಾಂಚನಗೊಳಿಸಿತು.

      ನಂತರ ವಯೋಮಾನ ಶ್ರೇಷ್ಠ ಸಮ್ಮಾನ್ ಪುರಸ್ಕøತ ನಾಡೋಜ ಬೆಳಗಲ್ಲು ವೀರಣ್ಣನವರ ನೇತ್ರತ್ವದಲ್ಲಿ ಮೂಡಿ ಬಂದ ‘ಬಾಪೂಜಿ’ತೊಗಲುಗೊಂಬೆಯಾಟವು ನೆರೆದಿದ್ದ ಪ್ರೇಕ್ಷಕ ಸಮೂಹವನ್ನು ಮಂತ್ರಮುಗ್ಧಗೊಳಿಸಿತು. ಗಾಂಧೀಜಿಯವರ ದಕ್ಷಿಣಾಫ್ರಿಕಾ ದೇಶದಲ್ಲಿಯ ಹೋರಾಟ, ಭಾರತಕ್ಕೆ ಮರಳಿದ್ದು, ಚಂಪಾರಣ್ಯ, ಜಲಿಯನ್ ವಾಲಾಭಾಗ್, ಅಸಹಾಕಾರ ಚಳುವಳಿ, ಗ್ರಾಮೀಣ ಕಸುಬುಗಳ ಮಹತ್ವ, ಹರಿಜನ ದೇವಾಲಯ ಪ್ರವೇಶ, ವಿದೇಶಿ ವಸ್ತ್ರ ದಹನ, ದಂಡಿಯಾತ್ರೆ, 1942 ರ ಚಲೇಜಾವ್ ಚಳುವಳಿ, ಭಾರತ ಸ್ವತಂತ್ರಗೊಂಡದ್ದು ಜೊತೆಗೆ ಭಾರತ ವಿಭಜನೆಯ ಘಟನಾವಳಿಗಳನ್ನು ಮನ ಮುಟ್ಟುವಂತೆ ಪ್ರದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ಎ.ಎಂ.ಜಯಶ್ರೀ, ಗಂಗಾಧರ್,ಕೆ. ಸುರೇಂದ್ರ ಸ್ವಾಮಿ, ಕಣ್ಣನ್, ಬಿ.ಜಿ. ಸಾಯಿ ಕುಮಾರ್, ಪವನ್ ಕುಮಾರ್, ಸರ್ವೇಶ್, ವಿರಿಪಾಕ್ಷಿ ತಂಡದ ಕಲಾವಿದರಾಗಿ ಭಾಗವಹಿಸಿದ್ದರು, ಕಾರ್ಯಕ್ರಮದಲ್ಲಿ ಹಿರಿಯ ರಂಗ ಕಲಾವಿದೆ ನಾಡೋಜ ಡಾ. ಸುಭದ್ರಮ್ಮ ಮನ್ಸೂರು, ಶ್ರೀಮತಿ ವೀಣಾಕುಮಾರಿ, ಶ್ರೀಮತಿ ಉಮಾರಣಿ ಇಲಕಲ್, ಶ್ರೀಮತಿ ಜಯಶ್ರೀ ಪಾಟೀಲ್, ಶ್ರೀಮತಿ ಲತಾ, ಪುರುಷೋತ್ತಮ ಹಂದ್ಯಾಳ್, ಅಣ್ಣಾಜಿ ಕೃಷ್ಣಾರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here