ಮುಳ್ಳು ಹಾಸಿನ ಮೇಲೆ
ಹೂ ಹೊದಿಕೆ
ಕಾಯಿ,ಎಲೆ,ಹೂವಿಲ್ಲದ
ಬೇರೊಳಗೆ ಹುದುಗಿ ಕಟ್ಟಕಡೆವರೆಗೂ ಕಾಯುವ
ಕಾಂಡದೊಳಗಿನ ಹಸಿರು ಒರತೆ

ಜಿನುಗುವ ಮಳೆಗೆ ಕೊಚ್ಚುವ ಎದೆ ಝರಿಯಂತೆ
ಸೋಲುವ ಕೈ ಕಾಲುಗಳಿಗೆ
ಬದುವಿನ ಮೇಲೆ ಕೈ ಬೀಸುವ ಗರಿಕೆ.
ಮುಂಗಾರಿನ ಮಿಂಚು ಸಿಡಿಲು
ಕಾಡ್ಗತ್ತಲ ಇಳಿ ಸಂಜೆಗೆ
ಕೊರಕಲ ದಾರಿ ದಾರಿಹೋಕನಿಗೆ.
ನಾನು ಕವಿತೆ.
ಅರ್ಥಕ್ಕೆ ಕಳ್ಳು ಬಗೆದು
ಕಿಡಿ ತಾಕಿಸಿದರೂ ಸಿಗದ
ಪದಗಳೊಳಗೆ ಪದವಿ ನೀಡುವ
ವಾಗ್ದೇವಿಯ ಆಗರತೆ
ಓದಿ ಮುಗಿಸಿ ದಷ್ಟು ಉಳಿಯುವ ಶೇಷತೆ.
