ನಾನು ನಿರ್ದೋಷಿ ಎಂದು ಬಿಜೆಪಿ ಮುಂದೆ ಋಜುವಾತುಪಡಿಸುವ ಅಗತ್ಯವಿಲ್ಲ : ಡಿಕೆಶಿ

ಬೆಂಗಳೂರು:

      ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರಿಗೆ ಅಪಾರ ಪ್ರಮಾಣದಲ್ಲಿ ಚಿನ್ನ, ಹಣ ನೀಡಿರುವುದಾಗಿ ಬಿಜೆಪಿ ಮಾಡಿರುವ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ನಾನು ನಿರ್ದೋಷಿ ಎಂದು ಬಿಜೆಪಿ ಮುಂದೆ ಋಜುವಾತುಪಡಿಸುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.

       ಕಾಂಗ್ರೆಸ್ ಹೈಕಮಾಂಡ್‍ಗೆ ಡಿ.ಕೆ.ಶಿವಕುಮಾರ್ 55 ಕೆಜಿ ಚಿನ್ನ ನೀಡಿದ್ದು, ವರಿಷ್ಠರಿಗೆ ಕರ್ನಾಟಕ ಕಾಂಗ್ರೆಸ್ ಎ.ಟಿ.ಎಂ. ಆಗಿದೆ. ಹೈಕಮಾಂಡ್‍ಗೆ ಡಿಕೆಶಿ ಬೆಂಬಲಿಗರಿಂದ ಹಣ ಸಂದಾಯ ಆಗುತ್ತಿದೆ. ಕಪ್ಪುಹಣದ ಕುಳ ಶಿವಕುಮಾರ್ ಎಂದು ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ಆರೋಪ ಮಾಡಿದ ಹಿನ್ನೆಲೆಯಲ್ಲಿ ಈ ಪ್ರತಿಕ್ರಿಯೆ ನೀಡಿದ್ದಾರೆ.

       ಬಿಜೆಪಿ ಮಾಡಿದ ಆರೋಪಗಳಿಂದ ಕೆಂಡ ಮಂಡಲವಾಗಿರುವ ಅವರು ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ಇದೇ ಮೊದಲ ಬಾರಿಗೆ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿ ನಾಯಕರಿಗೆ ಸ್ಪಷ್ಟವಾಗಿ ಹೇಳ ಬಯಸುತ್ತೇನೆ. ನನ್ನನ್ನು ಜೈಲಿಗೆ ಕಳಿಸಿದರೂ ನಾನು ಹೆದರುವವನಲ್ಲ. ನಾನು ಹೆದರಿಸುವವನು. ಈ ದೇಶದ ಕಾನೂನಿನ ಮೇಲೆ ನನಗೆ ನಂಬಿಕೆಯಿದೆ. ಎಲ್ಲವನ್ನೂ ಎದುರಿಸುವ ತಾಕತ್ತು ನನಗಿದೆ,” ಎಂದು ನೇರ ಸವಾಲು ಹಾಕಿದರು.

       ನಾನೇನು ಕೊಲೆ ಏನು ಮಾಡಿಲ್ಲ. ನಾನು ಯಾವುದೇ ಹವಲಾ ಚಟುವಟಿಕೆ ನಡೆಸಿಲ್ಲ. ಹೀಗಿರುವಾಗ ನನ್ನನ್ನು ಯಾಕೆ ಬಂಧಿಸುತ್ತಾರೆ. ನಿರೀಕ್ಷಣಾ ಜಾಮೀನು ತೆಗದುಕೊಳ್ಳುವ ಪರಿಸ್ಥಿತಿಯೂ ನಿರ್ಮಾಣವಾಗಿಲ್ಲ. ತಪ್ಪು ಮಾಡಿದ್ದರೆ ಬಂಧಿಸಲಿ. ಬಿಜೆಪಿ ನಾಯಕರ ಗೊಡ್ಡು ಬೆದರಿಕೆಗೆ ನಾನು ಹೆದುರುವ ಪ್ರಶ್ನೆಯೇ ಇಲ್ಲ. ತಪ್ಪು ಮಾಡಿದ್ದರೆ ಭಯಪಡಬೇಕು. ಇನ್ನು 15 ದಿನದಲ್ಲಿ ಡಿ ಕೆ ಶಿವಕುಮಾರ್ ಜೈಲಿಗೆ ಹೋಗುತ್ತಾರೆ. ಆಗ ನಾವು ಸರ್ಕಾರ ರಚನೆ ಮಾಡಬಹುದು ಎಂದು ಪಕ್ಷದಲ್ಲಿ ಯಡಿಯೂರಪ್ಪ ಚರ್ಚೆ ಮಾಡುತ್ತಿದ್ದಾರೆ. ಮಾಡಿಕೊಳ್ಳಲಿ. ನಮ್ಮದೇನು ಅಭ್ಯಂತರವಿಲ್ಲ ಎಂದರು.

       ನಗರದಲ್ಲಿ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಯಡಿಯೂರಪ್ಪ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ಮಾಡಿ, ಇನ್ನೆರಡು ದಿನಗಳಲ್ಲಿ ಅವರನ್ನು ಜೈಲಿಗೆ ಕಳಿಸುತ್ತೇವೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, “ಬಿಜೆಪಿಯವರು ಸ್ವತಃ ನ್ಯಾಯಮೂರ್ತಿಗಳಾಗಿ ಬಿಟ್ಟಿದ್ದಾರೆ. ನ್ಯಾಯಾಂಗವನ್ನೂ ತಮಗೆ ಬೇಕಾದಂತೆ ದುರುಪಯೋಗ ಮಾಡಿಕೊಳ್ಳಲು ಮುಂದಾಗಿದ್ದಾರೆ. ಯಡಿಯೂರಪ್ಪ ಹೇಳುತ್ತಾರೆ ನನ್ನನ್ನು ಎರಡು ದಿನಗಳಲ್ಲಿ ಜೈಲಿಗೆ ಕಳಿಸುವುದಾಗಿ. ನನ್ನನ್ನು ಜೈಲಿಗೆ ಕಳಿಸಲು ಅವರ್ಯಾರು. ಬಿಜೆಪಿಯವರು ಎಷ್ಟೇ ಹಿಂಸೆ ಕೊಟ್ಟರೂ ನಾನು ಎದುರಿಸುತ್ತೇನೆ. ನಿಮ್ಮ ಬೆದರಿಕೆಗಳಿಗೆ ಬಗ್ಗುವನಲ್ಲ. ಯಡಿಯೂರಪ್ಪ ಖಾಸಗಿ ಸಂಸ್ಥೆಯಿಂದ ಒಂದು ಕೋಟಿ ರೂ. ಚೆಕ್ ಮೂಲಕ ಲಂಚ ಪಡೆದಿದ್ದವರು. ಅವರು ನನ್ನ ಬಗ್ಗೆ ಮಾತನಾಡುತ್ತಾರೆ” ಎಂದು ಶಿವಕುಮಾರ್ ಯಡಿಯೂರಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

      ತೆರಿಗೆ ಅಧಿಕಾರಿಗಳು ದಾಳಿ ನಡೆಸಿದಾಗ ನನ್ನ ಮನೆಯಲ್ಲಿ ದೊರೆತ 41 ಲಕ್ಷದ ಬಗ್ಗೆ ಮಾಹಿತಿ ನೀಡಿದ್ದೇನೆ. ದೆಹಲಿಯಲ್ಲಿ 7 ಕೋಟಿ ಹಣ ಸಿಕ್ಕಿದೆ ಎನ್ನುವುದು ಸಂಪೂರ್ಣ ಸುಳ್ಳು. ಅಧಿಕಾರಿಗಳು ಕೊಲೆ ಬೆದರಿಕೆ ಹಾಕಿ ತಪ್ಪೊಪಿಗೆ ಹೇಳಿಕೆ ಪಡೆದುಕೊಂಡಿದ್ದಾರೆ. ಇಷ್ಟಕ್ಕೂ ದೆಹಲಿಯ ನಿವಾಸದಲ್ಲಿದ್ದಾಗ ಹಣ ಸಿಕ್ಕಿದೆ ಎನ್ನುವುದೇ ಕಪೋಲ ಕಲ್ಪಿತ ಎಂದರು.

      “ಇಷ್ಟು ದಿನಗಳ ಕಾಲ ಬಿಜೆಪಿ ನನ್ನ ವಿರುದ್ಧ ಪಿತೂರಿ ಮಾಡುತ್ತಿತ್ತು. ಕೇಂದ್ರದ ಹತೋಟಿಯಲ್ಲಿರುವ ಸ್ವತಂತ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ನನ್ನ ಮೇಲೆ ರಾಜಕೀಯ ಪ್ರೇರಿತ ದಾಳಿ ನಡೆಸಲಾಗುತ್ತಿತ್ತು. ಇದೀಗ ಸಂಬಿತ್ ಪಾತ್ರ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ತನಿಖಾ ಡೈರಿಯನ್ನು ಮುಂದಿಟ್ಟುಕೊಂಡು ಮಾತನಾಡಿದ್ದಾರೆ. ಆ ಮೂಲಕ ಬಿಜೆಪಿ ನನ್ನ ಮೇಲಿನ ಆದಾಯ ತೆರಿಗೆ ಇಲಾಖೆ ದಾಳಿ ಮತ್ತು ಜಾರಿ ನಿರ್ದೇಶನಾಲಯದ ಪ್ರಕರಣದ ಹಿಂದಿದೆ ಎಂಬುದನ್ನು ಸಾಭೀತು ಪಡಿಸಿದೆ.

       ತಾವು ಯಾವುದೇ ಡೈರಿಯನ್ನೂ ಬರೆದಿಲ್ಲ, ಆರ್.ಜಿ (ರಾಹುಲ್? ಗಾಂಧಿ), ಎಸ್.ಜಿ (ಸೋನಿಯಾ ಗಾಂಧಿ) ಎಂದು ಸಂಬಿತ್ ಪಾತ್ರ ಹೇಳುತ್ತಿರುವುದೆಲ್ಲ ಸತ್ಯಕ್ಕೆ ದೂರವಾದದ್ದು. ಅಷ್ಟು ಕೋಟಿ ಸಿಕ್ಕಿದೆ, ಇಷ್ಟು ಕೋಟಿ ಸಿಕ್ಕಿದೆ ಎಂದು ಬಿಜೆಪಿ ನಾಯಕರು ಕಥೆ ಹೊಡೆಯುತ್ತಿದ್ದಾರೆ. ಅಲ್ಲಿ ಸಿಕ್ಕ ಹಣದಲ್ಲಿ ಕೇವಲ 41 ಲಕ್ಷ ರೂ. ಗಳು ಮಾತ್ರ ನನಗೆ ಸೇರಿದವು. ಮಿಕ್ಕಿದವು ನನ್ನ ಕೆಲ ಗೆಳೆಯರದ್ದು. ಅದಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಲಿಖಿತ ಹೇಳಿಕೆ ಮತ್ತು ಹಣಕ್ಕೆ ಸಂಬಂಧಿಸಿದ ಪುರಾವೆಯನ್ನೂ ನೀಡಲಾಗಿದೆ. ಇನ್ನು ಕೆಲವರನ್ನು ಬೆದರಿಸಿ ತಮಗೆ ಬೇಕಾದಂತೆ ಹೇಳಿಕೆಗಳನ್ನು ಬರೆಸಿಕೊಳ್ಳಲಾಗಿದೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದರು.

      ಜತೆಗೆ ನ್ಯಾಯಾಲಯಕ್ಕೆ ಇನ್ನೂ ಸಲ್ಲಿಸದ ದಾಖಲೆಗಳು ಬಿಜೆಪಿಯ ಸಂಬಿತ್ ಪಾತ್ರಗೆ ಹೇಗೆ ಲಭ್ಯವಾಯಿತು ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದರು. ಇದರಿಂದಲೇ ಬಿಜೆಪಿ ಸ್ವತಂತ್ರ ತನಿಖಾ ಸಂಸ್ಥೆಗಳನ್ನು ಹೇಗೆ ಬಳಸಿಕೊಳ್ಳುತ್ತಿದೆ ಎಂಬುದು ಗೊತ್ತಾಗುತ್ತದೆ. ಬೆಂಗಳೂರಿನಲ್ಲಿ ಒಂದೇ ಅಲ್ಲ, ದೆಹಲಿಗೂ ತೆರಳಿ ಪತ್ರಿಕಾಗೋಷ್ಠಿ ಮಾಡುತ್ತೀನಿ ಎಂದಿರುವ ಡಿಕೆಶಿ ತಾವೊಬ್ಬ ಕಾನೂನು ಪಾಲಕ ಎಂದು ಸಮರ್ಥಿಸಿಕೊಂಡಿದ್ದಾರೆ.

        “ನಾನು ಯಾರಿಗೂ ಮೋಸ ಮಾಡಿಲ್ಲ. ಕಳ್ಳತನ ಮಾಡಿಲ್ಲ. ಸಿಕ್ಕ ಅಷ್ಟೂ ಹಣಕ್ಕೆ ದಾಖಲೆ ತೋರಿಸಿದ್ದೇನೆ. ಹೀಗಿದ್ದಾಗ ನಾನು ಹೆದರುವ ಅವಶ್ಯಕತೆಯಿಲ್ಲ. ನನ್ನನ್ನು, ನನ್ನ ಪಕ್ಷದ ಹೆಸರನ್ನು ಕೆಡಿಸಲು ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಯತ್ನಿಸುತ್ತಿದೆ, ಆದರೆ ಜನರಿಗೆ ಬಿಜೆಪಿಯ ಪಿತೂರಿಗಳು ಅರ್ಥವಾಗುತ್ತದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಾಡುತ್ತಿರುವ ಸಂವಿಧಾನ ವಿರೋಧಿ ಕೆಲಸಗಳಿಗೆ ಮತದಾರರು ತಕ್ಕ ಉತ್ತರ ಕೊಡಲಿದ್ದಾರೆ ಎಂದು ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

        ನಾನು ಹೆದರಿಸುವ ವ್ಯಕ್ತಿ, ಹೆದರುವ ವ್ಯಕ್ತಿ ಅಲ್ಲ. ನನ್ನನ್ನ ಜೈಲಿಗೆ ಕಳುಹಿಸಿದರೆ ಸುಲಭವಾಗಿ ಸರ್ಕಾರ ರಚನೆ ಮಾಡಬಹುದು ಅಂದುಕೊಂಡಿದ್ದಾರೆ. ಗುಜುರಾತ್ ರಾಜ್ಯಸಭಾ ಚುನಾವಣೆಯಾದ ಮೇಲೆ ಈ ರೀತಿ ಕಿರುಕುಳ ಕೊಡುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಮತ್ತಷ್ಟು ಮಾತನಾಡುತ್ತೇನೆ ಎಂದರು.

        ಜಾರಿ ನಿರ್ದೇಶನಾಲಯದಿಂದ ತಮಗೆ ಯಾವುದೇ ನೋಟಿಸ್ ಬಂದಿಲ್ಲ. ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ. ಬಿಜೆಪಿಯವರು ಜೈಲಿಗೆ ಹೋಗಿ ಬಂದವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡುತ್ತಾರೆ. ಜೈಲಿಗೆ ಹೋಗಿ ಬಂದವರು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು

        ಈ ಎಲ್ಲಾ ವಿಚಾರಗಳನ್ನು ಬೇಕಾದರೆ ದೆಹಲಿಯಲ್ಲಿ ಬಂದು ಸುದ್ದಿಗೋಷ್ಟಿ ನಡೆಸಿ ಉತ್ತರ ಕೊಡುತ್ತೇನೆ. ತೆರಿಗೆ ಅಧಿಕಾರಿಗಳು ನನ್ನ ಕುಟುಂಬ, ನನ್ನ ಸ್ನೇಹಿತರು ಸೇರಿದಂತೆ ಎಲ್ಲರಿಗೂ ಕಿರುಕುಳ ಕೊಟ್ಟಿದ್ದಾರೆ. ಅದೇ ರೀತಿ ಶಿವಕುಮಾರ್ ಹೆದರಿಸೋಣ ಎನ್ನುವ ಅಭಿಪ್ರಾಯ ಹೊಂದಿದ್ದರೆ ಅದು ಸಾಧ್ಯವಿಲ್ಲ ಎಂದರು.

                 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap