ಹುಳಿಯಾರು
ಹುಳಿಯಾರು ಹೋಬಳಿ ಇಟ್ಟಿಗೆ ಉತ್ಪಾದಕರ ಸಂಘದಿಂದ ಕೊಡಗು ಜಿಲ್ಲೆಯ ನೆರೆ ಸಂತ್ರಸ್ಥರಿಗಾಗಿ ನೆರವು ನೀಡಲಾಯಿತು.
ಕೊಡಗು ಜಿಲ್ಲೆಯ ನೆರೆಪೀಡಿತ ಪ್ರದೇಶಕ್ಕೆ ತೆರಳಲಿರುವ ಕರ್ನಾಟಕ ವೇದಿಕೆ ಮತ್ತು ಜಯಕರ್ನಾಟಕ ಸಂಘ ಪದಾಧಿಕಾರಿಗೆ 50 ಪಂಚೆ ಹಾಗೂ 50 ಚಾಪೆಗಳನ್ನು ಹಸ್ತಾಂತರಿಸಲಾಯಿತು.
ಇಟ್ಟಿಗೆ ಉತ್ಪಾದಕರ ಸಂಘದ ಅಧ್ಯಕ್ಷ ಎಚ್.ಅಶೋಕ್ ಅವರು ಈ ಸಂದರ್ಭದಲ್ಲಿ ಮಾತನಾಡಿ ವರುಣನ ರೌದ್ರ ನರ್ತನಕ್ಕೆ ಕೊಡಗು ಜಿಲ್ಲೆ ಅಕ್ಷರಶಃ ತತ್ತರಿಸಿದೆ. ಟಿವಿಗಳಲ್ಲಿ ಅಲ್ಲಿನ ದೃಶಗಳನ್ನು ನೋಡುತ್ತಿದ್ದರೂ ಸಾಕು ಎದೆ ಝಲ್ ಎನ್ನುತ್ತದೆ. ಅಂತಹದರಲ್ಲಿ ಅಲ್ಲಿನ ನಿವಾಸಿಗಳ ಕಷ್ಟ ದೇವರನ್ನು ಮುಟ್ಟುತ್ತಿದೆ. ಇಂತಹ ಕಷ್ಟಕ್ಕೆ ಇಡೀ ರಾಜ್ಯದ ಜನ ಸ್ಪಂಧಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಇದು ರಾಜ್ಯದ ಮಣ್ಣಿನ ಗುಣದ ಮಹತ್ವ ಹಾಗೂ ಕನ್ನಡಿಗರ ಹೃದಯ ವೈಶಾಲ್ಯತೆಯ ಪ್ರತೀಕವಾಗಿದೆ ಎಂದರು.
ಹುಳಿಯಾರಿನಿಂದಲೂ ಕರವೇ, ಜಯಕರ್ನಾಟಕ, ಚಾರಣಿಗರ ಸಂಘದ ಪದಾಧಿಕಾರಿಗಳು ದಿನಬಳಕೆ ಸಾಮಗ್ರಿಗಳನ್ನು ಸಂಗ್ರಹಿಸಿಕೊಂಡು ನೇರವಾಗಿ ನೆರೆ ಪೀಡಿದ ಪ್ರದೇಶಕ್ಕೆ ತೆರಳಿ ವಿತರಣೆ ಮಾಡಲು ಹೊರಟಿರುವುದು ಸ್ವಾಗತಾರ್ಹ ಮತ್ತು ಅಭಿನಂದನಾರ್ಹ. ಇವರಿಗೆ ಸತ್ಕಾರ್ಯಕ್ಕೆ ನೆರವಾಗುವ ಜೊತೆಗೆ ನೆರೆ ಪೀಡಿತರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಇಟ್ಟಿಗೆ ಉತ್ಪಾದಕರ ಸಂಘದಿಂದ ಅಗತ್ಯ ವಸ್ತುಗಳನ್ನು ನೀಡುತ್ತಿದ್ದು ಮುಂದೆಯೂ ಸಹ ಸಮಾಜಮುಖಿ ಕಾರ್ಯಗಳಿಗೆ ಸಂಘ ನೆರವಿನ ಹಸ್ತ ಚಾಚುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಇಟ್ಟಿಗೆ ಉತ್ಪಾದಕರ ಸಂಘದ ಮುಕುಂದಯ್ಯ, ಎಸ್‍ಎಸ್‍ಆರ್ ಶೇಖರಣ್ಣ, ಸುಧೀರ್, ಎಂಎಂಬಿ ಮಂಜು, ಕರವೇಯ ಕೋಳಿ ಶ್ರೀನಿವಾಸ್, ಲಕ್ಷ್ಮೀಕಾಂತ್, ಕ್ಯಾಸೆಟ್ ರಂಗಸ್ವಾಮಿ, ಮಂಜುನಾಥ್, ಜಯಕರ್ನಾಟಕದ ಮೋಹನ್ ಕುಮಾರ್ ರೈ, ಕಾರ್ಗಿಲ್ ಸತೀಶ್, ಕೆಸಿಪಾಳ್ಯ ಉಮೇಶ್, ಬಿ.ವಿ.ಶ್ರೀನಿವಾಸ್ ಮತ್ತಿತರರು ಇದ್ದರು.
