ಪರಿಸರ ಉಳಿಸದಿದ್ದರೆ ವಿನಾಶ ಖಚಿತ

ಹುಳಿಯಾರು:

     ಪರಿಸರವನ್ನು ಕಾಪಾಡುವ ಹಾಗೂ ಬೆಳೆಸುವ ಕರ್ತವ್ಯವನ್ನು ಮರೆತರೆ ವಿನಾಶ ಖಚಿತ ಎಂದು ಹುಳಿಯಾರಿನ ಹಾರ್ಡ್‍ವೇರ್ ಅಸೋಸಿಯೇಷನ್‍ನ ಕಾಯಿಬಸವರಾಜು ಅವರು ಅಭಿಪ್ರಾಯಪಟ್ಟರು.

    ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ಹುಳಿಯಾರಿನಲ್ಲಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ತಾಲೂಕಿನಲ್ಲಿ ಮಳೆ, ಬೆಳೆ ಇಲ್ಲದೆ ತೀವ್ರ ಸಂಕಷ್ಟವನ್ನು ಎದುರಿಸಲಾಗುತ್ತಿದೆ. ಸದಾ ಬರಗಾಲಕ್ಕೆ ತುತ್ತಾಗುವುದರ ಜತೆಗೆ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ. ಕೆರೆ ಕುಂಟೆಗಳು ಬತ್ತಿ ಹೋಗಿವೆ. ಸಾವಿರ ಅಡಿ ಆಳಕ್ಕೆ ಕೊರೆದ ಕೊಳವೆ ಬಾವಿಗಳಲ್ಲೂ ನೀರು ದೊರೆಯುತ್ತಿಲ್ಲ. ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ ಎಂದರು.

    ಜಲಕ್ಷಾಮದಿಂದ ಪಾರಾಗಲು ಇರುವ ಏಕೈಕ ಮಾರ್ಗ ಎಂದರೆ ಪರಿಸರವನ್ನು ಅಭಿವೃದ್ಧಿಪಡಿಸುವುದು. ಅವಕಾಶವಿರುವ ಎಲ್ಲ ಕಡೆ ಗಿಡಗಳನ್ನು ನೆಟ್ಟು ಪೋಷಣೆ ಮಾಡಬೇಕು. ಹಬ್ಬಹರಿದಿನಗಳಲ್ಲಿ ಗಿಡ ಬೆಳೆಸುವ ಕಾಯಕವಾಗಬೇಕು. ಮದುವೆ, ಮುಂಜಿ ಮತ್ತಿತರ ಕಾರ್ಯಕ್ರಮಗಳಲ್ಲಿ ಗಿಡಗಳನ್ನೇ ಉಡುಗೊರೆಯನ್ನಾಗಿ ನೀಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಗಿಡಗಳನ್ನು ಕೇವಲ ಪ್ರಚಾರಕ್ಕಾಗಿ ನೆಟ್ಟರೆ ಪ್ರಯೋಜನವಿಲ್ಲ. ನೆಡುವ ಪ್ರತಿಯೊಂದು ಗಿಡವನ್ನು ನೀರು, ಗೊಬ್ಬರ ಹಾಕಿ ಕಾಪಾಡಬೇಕು. ಸಂಪೂರ್ಣ ಹೊಣೆಗಾರಿಕೆಯಿಂದ ಸಸಿಗಳ ಪೋಷಣೆ ಮಾಡಿದರೆ ಮಾತ್ರ ಪರಿಸರ ಉಳಿಯುತ್ತದೆ ಎಂದರು.

     ಹುಳಿಯಾರಮ್ಮ ದೇವಸ್ಥಾನ ಸಮಿತಿಯ ಡಿ.ಆರ್.ನರೇಂದ್ರಬಾಬು, ಕೃಷ್ಣಕೊಳ ನೀರಾವರಿ ಹೊರಾಟ ಸಮಿತಿಯ ಚಿರುಮುರಿಶ್ರೀನಿವಾಸ್, ಅನ್ನದಾನರಂಗ ಪ್ರಸಾದ್, ಎಸ್‍ಎಲ್‍ಆರ್ ಬಸ್ ಮಾಲೀಕ ಪ್ರದೀಪ್, ಕನಕ ಬ್ಯಾಂಕ್ ನಿರ್ದೆಶಕ ಕೆ.ಎನ್.ಉಮೇಶ್ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link