ಚಿತ್ರದುರ್ಗ:
ಬೇಸಿಗೆಯ ದಗೆ ಈಗಾಗಲೆ ಆರಂಭಗೊಂಡಿರುವುದರಿಂದ ಪಕ್ಷಿಗಳಿಗೆ ನೀರು ಉಣಿಸುವುದಕ್ಕಾಗಿ ಗುಬ್ಬಚ್ಚಿ ಬರ್ಡ್ ಟ್ರಸ್ಟ್‍ನವರು ದಾವಣಗೆರೆ ರಸ್ತೆಯಲ್ಲಿರುವ ಆದರ್ಶ ನಗರದಲ್ಲಿ ಭಾನುವಾರ ಮನೆ ಮನೆಗೆ ತೆರಳಿ ಉಚಿತವಾಗಿ ಮಣ್ಣಿನ ತಟ್ಟೆಗಳನ್ನು ನೀಡಿ ಪಕ್ಷಿ ಸಂಕುಲಗಳ ಉಳಿವಿಗೆ ಮನವಿ ಮಾಡಿದರು.
ಅರಣ್ಯ ಇಲಾಖೆಯ ಎ.ಸಿ.ಎಫ್. ರಾಘವೇಂದ್ರರಾವ್‍ರವರು ಮಣ್ಣಿನ ತಟ್ಟೆಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಪ್ರಕೃತಿಯಲ್ಲಿ ಪ್ರಾಣಿ ಪಕ್ಷಿಗಳನ್ನು ಜೋಪಾನವಾಗಿ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಬೇಸಿಗೆ ಕಾಲದಲ್ಲಿ ಪಕ್ಷಿಗಳು ಕುಡಿಯಲು ನೀರಿಲ್ಲದೆ ಕೆಲವೊಮ್ಮೆ ನರಳುತ್ತಿರುವುದನ್ನು ಗಮನಿಸಿ ಗುಬ್ಬಚ್ಚಿ ಬರ್ಡ್ ಟ್ರಸ್ಟ್‍ನವರು ಅತ್ಯುತ್ತಮವಾದ ಕಾರ್ಯ ಮಾಡುತ್ತಿರುವುದನ್ನು ಶ್ಲಾಘಿಸಿದರು.
ನಿಜವಾಗಿಯೂ ಪ್ರಾಣಿ ಪಕ್ಷಿಗಳನ್ನು ಸಂರಕ್ಷಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡಬೇಕು. ಅಂತಹುದರಲ್ಲಿ ಗುಬ್ಬಚ್ಚಿ ಬರ್ಡ್ ಟ್ರಸ್ಟ್‍ನವರು ಪಕ್ಷಿಗಳಿಗೆ ನೀರು ಕುಡಿಸುವುದಕ್ಕಾಗಿ ಆದರ್ಶ ನಗರದಲ್ಲಿ ಮನೆ ಮನೆಗೆ ಹೋಗಿ ಮಣ್ಣಿನ ತಟ್ಟೆಗಳನ್ನು ನೀಡುತ್ತಿದ್ದಾರೆ. ಮಧ್ಯಾಹ್ನದ ವೇಳೆಯಲ್ಲಿ ಮನೆಯ ತಾರಸಿ ಮೇಲೆ ತಟ್ಟೆಯಲ್ಲಿ ನೀರಿಟ್ಟು ಪಕ್ಷಿಗಳ ದಾಹ ತೀರಿಸಿ ಎಂದು ಕೋರಿದರು.
ಗಿಡ-ಮರಗಳನ್ನು ಹೆಚ್ಚು ಹೆಚ್ಚಾಗಿ ಬೆಳೆಸಿದರೆ ಕಾಲ ಕಾಲಕ್ಕೆ ಸರಿಯಾಗಿ ಮಳೆಯಾಗಿ ಪರಿಸರದಲ್ಲಿ ಸಮತೋಲನವಿರುತ್ತದೆ ಇದರಿಂದ ಸಕಲ ಜೀವರಾಶಿಗಳಿಗೂ ಅನುಕೂಲವಾಗಲಿದೆ. ಹಾಗಾಗಿ ಪರಿಸರ ಹಾಳಾಗದಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.
ಗುಬ್ಬಚ್ಚಿ ಬರ್ಡ್ ಟ್ರಸ್ಟ್‍ನ ಅಧ್ಯಕ್ಷ ಕಾರ್ತಿಕ್, ಕಾರ್ಯದರ್ಶಿ ನಾಗೇಶ್, ಅಜಯ್, ದೇವೇಂದ್ರ, ಕುಮಾರಸ್ವಾಮಿ, ಆದರ್ಶ ನಗರದ ಎಂ.ಕೆ.ರವೀಂದ್ರ, ವಸ್ತಿಮಲ್, ಕಲ್ಪವೃಕ್ಷ ಟ್ರಸ್ಟ್‍ನ ವೇಣುಗೋಪಾಲ್, ವಾಸವಿ ಮಹಿಳಾ ಸಂಘದ ಜಲಜಾರಮೇಶ್, ರಾ.ವೆಂಕಟೇಶಶೆಟ್ಟಿ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
