ಬಳ್ಳಾರಿ
ಪ್ರತಿ ವರ್ಷದಂತೆ ಈ ಬಾರಿಯೂ ರಂಗ ಕಲಾವಿದರ ಮನೆಗೆ ತೆರಳಿ ಬಂಧು ಮಿತ್ರರ ಸಮ್ಮುಖದಲ್ಲಿ ಕಲಾವಿದರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಇಲ್ಲಿನ ಸಂಸ್ಕತಿ ಪ್ರಕಾಶನ ಮತ್ತು ಡಾ.ಸುಭಾಷ್‍ಭರಣಿ ಸಾಂಸ್ಕತಿಕ ವೇದಿಕೆ ವಿಶಿಷ್ಟವಾಗಿ ವಿಶ್ವರಂಗಭೂಮಿ ದಿನವನ್ನು ಆಚರಿಸಿದವು.
ಸಾವಿರಕ್ಕೂ ಹೆಚ್ಚು ಸಾಮಾಜಿಕ, ಪೌರಾಣಿಕ, ಐತಿಹಾಸಿಕ ನಾಟಕಗಳಲ್ಲಿ ಅಭಿನಯಿಸಿದ್ದರೂ ಎಲೆಮರೆ ಕಾಯಿಯಂತಿರುವ ಹಿರಿಯ ರಂಗ ಕಲಾವಿದ ಪ್ರೊ. ಚಂದ್ರಶೇಖರ ಎಚ್ ಎಂ ಹಾಗೂ ವೃತ್ತಿ ರಂಗ ನಟಿ ಜಯಶ್ರೀ ಪಾಟೀಲ್ ಅವರನ್ನು ಬುಧವಾರ ಕಲಾವಿದರ ನಿವಾಸದಲ್ಲಿ ವೇದಿಕೆಯ ಗೌರವಾಧ್ಯಕ್ಷ, ಸಾಹಿತಿ ಡಾ. ವೆಂಕಟಯ್ಯ ಅಪ್ಪಗೆರೆ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಸಿ ಮಂಜುನಾಥ್ ಅವರು ಸತ್ಕರಿಸಿ ಗೌರವಿಸಿದರು.
ಹಿರಿಯ ಕವಿ ಗಂಗಾಧರ ಪತ್ತಾರ ಮಾತನಾಡಿ ಕಲಾವಿದರು ಆಧುನಿಕ ಯಕ್ಷ ಗಂಧರ್ವ ಕಿನ್ನರರು. ಪ್ರೇಕ್ಷಕರ ಮುಂದೆ ಯಕ್ಷ ಲೋಕವನ್ನು ಸೃಷ್ಟಿಸಬಲ್ಲರು. ರಂಗಭೂಮಿಯು ಚಲನಶೀಲ ವಿಶ್ವವಿದ್ಯಾಲಯ. ಪ್ರೇಕ್ಷಕರ ಭಾವನೆಗಳನ್ನು ಅವರ ಅಂತರಂಗದ ಅನಿಸಿಕೆಗಳನ್ನು ವಿಶಿಷ್ಟ ಭಾವಾಭಿವ್ಯಕ್ತಿಯ ಮೂಲಕ ನಟಿಸಿ ಮನರಂಜನೆ ನೀಡುತ್ತಾರೆ ಎಂದು ಹೇಳಿದರು.
ಹಿರಿಯ ರಂಗಕರ್ಮಿ ಕೆ. ಜಗದೀಶ ಅವರು ಮಾತನಾಡಿ, ರಂಗ ಕಲಾವಿದರಿಗೆ ನಯ ವಿನಯದ ಜತೆ ರಂಗ ಶಿಸ್ತು, ಸಮಯ ಪ್ರಜ್ಞೆ ಅತ್ಯಗತ್ಯ ಎಂದು ಹೇಳಿದರು.
ನಿರ್ದೇಶಕರಿಗೆ ಹೆಸರು ಬರಲು ಕಲಾವಿದರ ಅಭಿನಯ ಸಾಮಥ್ರ್ಯವೇ ಕಾರಣ. ಬೆರಳಿಕೆಯಷ್ಟು ಕಲಾವಿದರನ್ನು ಹೊರತು ಪಡಿಸಿದರೆ ಹೆಚ್ಚಿನ ರಂಗ ಕಲಾವಿದರು ತೀವ್ರ ಸಂಕಷ್ಟದಲ್ಲಿದ್ದಾರೆ. ಸರಕಾರ ಇಂತಹವರ ಬಗ್ಗೆ ಕಾಳಜಿ ತೋರಬೇಕು ಎಂದು ಒತ್ತಾಯಿಸಿದರು.
ಹಿರಿಯ ರಂಗ ಕಲಾವಿದ ಡಾ. ಗಾದಿಲಿಂಗನಗೌಡ ಅವರು, ವಿಶ್ವ ರಂಗಭೂಮಿ ದಿನದಂದು ಕಲಾವಿದರ ಮನೆಗೆ ತೆರಳಿ ಸನ್ಮಾನಿಸಿ ಗೌರವಿಸುವುದು ಉತ್ಕಷ್ಟ ಕಾರ್ಯ. ಕಲಾವಿದರು, ಸಾಧಕರನ್ನು ಗುರುತಿಸಿ ಉತ್ತೇಜಿಸುವ ಸಂಸ್ಕತಿ ಪ್ರಕಾಶನ, ಭರಣಿ ಸಾಂಸ್ಕತಿಕ ವೇದಿಕೆಯ ಕಾರ್ಯ ಇತರ ಸಂಘ ಸಂಸ್ಥೆಗಳಿಗೆ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆ ಅಧ್ಯಕ್ಷ ಸಿ ಮಂಜುನಾಥ್ ಮಾತನಾಡಿ, ವೇದಿಕೆ ಈವರೆಗೆ ಸನ್ಮಾನಿಸಿ ಗೌರವಿಸಿದ 50ಕ್ಕೂ ಹೆಚ್ಚು ಸಾಧಕ ರಂಗ ಕಲಾವಿದರನ್ನು ಪರಿಚಯಿಸುವ ರಂಗ ಕುಸುಮಗಳು ಕೃತಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಪ್ರೊ. ಚಂದ್ರಶೇಖರ ಅವರು ಮಾತನಾಡಿ ಪ್ರಶಸ್ತಿ ಪುರಸ್ಕಾರಗಳಿಗೆ ಅರ್ಜಿ ಹಾಕಿ ಪಡೆಯುವುದು ಮುಜುಗರದ ಕೆಲಸ. ಸರಕಾರ, ಸಂಘ ಸಂಸ್ಥೆಗಳೇ ಸಾಧಕರನ್ನು ಗುರುತಿಸಿ ಗೌರವಿಸಬೇಕು. ಈ ಹಿನ್ನಲೆಯಲ್ಲಿ ಸಂಸ್ಕತಿ ಪ್ರಕಾಶನದ ಕಾರ್ಯ ಮಾದರಿ ಎಂದರು.ಡಾ. ವೆಂಕಟಯ್ಯ ಅಪ್ಪಗೆರೆ, ಚಂದ್ರಮೌಳಿ ಮಾತನಾಡಿದರು. ಕಲಾವಿದೆ ಮೀನಾಕ್ಷಿ ಪಾಟೀಲ್, ಯುವ ಕಲಾವಿದರಾದ ಹೆಚ್ ಎಂ ಅಮರೇಶ ಹಚ್ಚೋಳಿ, ಪರಶುರಾಮ ಹಂದ್ಯಾಳ್, ಮೋತಿಲಾಲ್ ರಾಯಭಾಗಿ, ಉಭಯ ಕಲಾವಿದರ ಕುಟುಂಬ ಸದಸ್ಯರು, ಮಿತ್ರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ