ಚಳ್ಳಕೆರೆ

ಬಾಲ್ಯವಿವಾಹ ಸಾಮಾಜಿಕ ಪಿಡುಗಾಗಿದ್ದು, ಬಾಲ್ಯವಿವಾಹವನ್ನು ಪ್ರೋತ್ಸಾಹಿಸುವ ಮತ್ತು ಬೆಂಬಲಿಸುವ ಎಲ್ಲರು ಕಾನೂನಿನ ರೀತ್ಯ ಅಪರಾಧಿಗಳಾಗಿದ್ದು, ಜೈಲು ಶಿಕ್ಷೆ ಹಾಗೂ ಅಧಿಕ ದಂಡವಿದ್ದು, ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಬಾಲ್ಯವಿವಾಹವನ್ನು ತಡೆಯುವ ಸರ್ಕಾರಿ ಕಾರ್ಯಕ್ರಮಕ್ಕೆ ಬೆಂಬಲ ನೀಡುವಂತೆ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಮನವಿ ಮಾಡಿದರು.
ಅವರು, ಬುಧವಾರ ಇಲ್ಲಿನ ತಾಲ್ಲೂಕು ಕಚೇರಿ ಕಾರ್ಯಾಲಯದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಮತ್ತು ತಾಲ್ಲೂಕು ಶಿಶು ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಾಲ್ಯವಿವಾಹ ತಡೆ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ 2016ರಲ್ಲಿ ಅಸ್ಥಿತ್ವಕ್ಕೆ ಬಂದ ಈ ಕಾನೂನು ಜಾರಿಯಿಂದ ಬಾಲ್ಯವಿವಾಹಗಳನ್ನು ನಿಯಂತ್ರಿಸಲಾಗಿದ್ದು, ಸಂಪೂರ್ಣವಾಗಿ ಇದನ್ನು ತಡೆಯುವ ಇಲಾಖೆಯ ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯವೆಂದರು.
ಜಿಲ್ಲಾ ಸಂಪನ್ಮೂಲ ವ್ಯಕ್ತಿ ವೆಂಕಟರತ್ನಮ್ಮ ಮಾತನಾಡಿ, ಬಾಲ್ಯವಿವಾಹ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಇದನ್ನು ಸಂಪೂರ್ಣವಾಗಿ ತೊಡೆದು ಹಾಕುವ ಉದ್ದೇಶವನ್ನು ಇಲಾಖೆ ಹೊಂದಿದೆ. ಈ ನಿಟ್ಟಿನಲ್ಲಿ ಎಲ್ಲಾ ಹಂತಗಳಲ್ಲೂ ಜಾಗೃತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು, ಎಲ್ಲರೂ ಈ ಕಾರ್ಯಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಡಿಪಿಒ ಸಿ.ಕೆ.ಗಿರಿಜಾಂಬ ಮಾತನಾಡಿ, ಬಾಲ್ಯವಿವಾಹ ತಡೆ ಅರಿವು ಕಾರ್ಯಕ್ರಮವನ್ನು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ. ತಾಲ್ಲೂಕು ಮಟ್ಟದ ಈ ಪೂರ್ವಭಾವಿ ಸಭೆಗೆ ನಗರದ ವಿವಿಧ ಕಲ್ಯಾಣ ಮಂಟಪಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ದೇವಸ್ಥಾನಗಳ ಪೂಜಾರಿಗಳು ಹಾಗೂ ವಿವಾಹ ದಿನಾಂಕವನ್ನು ಗೊತ್ತು ಪಡಿಸುವ ಜ್ಯೋತಿಷಿಗಳನ್ನು ಸಹ ಕರೆಸಿ ಮಾಹಿತಿ ನೀಡಲಾಗಿದೆ ಎಂದರು.
ಸಭೆಯಲ್ಲಿ ವಕೀಲೆ ಶ್ಯಾಮಲಮ್ಮ, ವೀರಶೈವ ಕಲ್ಯಾಣ ಮಂಟಪದ ಗಂಗಣ್ಣ, ವಾಸವಿ ಮಹಲ್‍ನ ರಾಮಮೋಹನ್, ನಾಗೇಶ್ ಮುಂತಾದವರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
