ಗುಬ್ಬಿ
ಶ್ರೀಗುರು ಸಿದ್ದರಾಮೇಶ್ವರರ 846 ನೇ ಜಯಂತಿ ಮಹೋತ್ಸವವು ತಾಲ್ಲೂಕಿನ ಬಾಗೂರು ಗೇಟ್‍ನ ಶ್ರೀಸಿದ್ದರಾಮೇಶ್ವರ ಸನ್ನಿಧಿ ಸಿದ್ದಶ್ರೀ ನಗರದ ಅನುಭವ ಮಂಟಪದಲ್ಲಿ 2019 ರ ಜ.14 ಮತ್ತು 15 ರಂದು ನಡೆಯುತ್ತಿದ್ದು, ಈ ಧಾರ್ಮಿಕ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದರು.
ತಾಲ್ಲೂಕಿನ ಬಾಗೂರು ಗೇಟಿನ ಅನುಭವ ಮಂಟಪಕ್ಕೆ ಭೇಟಿ ನೀಡಿ ಜನವರಿಯಲ್ಲಿ ಶ್ರೀ ಸಿದ್ದರಾಮೆಶ್ವರ ಜಯಂತಿ ಮಹೋತ್ಸವ ನಡೆಸುವ ಬಗ್ಗೆ ಬೆಟ್ಟದಹಳ್ಳಿ ಶ್ರೀ ಚಂದ್ರಶೇಖರ ಶ್ರೀಗಳೊಂದಿಗೆ ಸಮಗ್ರವಾಗಿ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವಾದಿ ಶರಣರ ತತ್ವಾದರ್ಶಗಳು ಮನುಕುಲದ ಉದ್ದಾರಕ್ಕೆ ಮಹತ್ವದ ಕೊಡುಗೆಗಳಾಗಿವೆ ಎಂದು ತಿಳಿಸಿದರು.
ಶ್ರೀಸಿದ್ದರಾಮೇಶ್ವರ ಜಯಂತಿಗಳು ಮಹತ್ವ ಪೂರ್ಣವಾದವುಗಳಾಗಿವೆ. ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಸೇವೆಯಲ್ಲಿ ಮಹತ್ವದ ಕಾರ್ಯ ಮಾಡುತ್ತಿರುವ ಬೆಟ್ಟದಹಳ್ಳಿ ಗವಿಮಠ ಈ ಬಾರಿ ರಾಜ್ಯ ಮಟ್ಟದ ಶ್ರೀಸಿದ್ದರಾಮ ಜಯಂತಿ ಮಹೋತ್ಸವವನ್ನು ನಡೆಸುತ್ತಿರುವುದು ಅಭಿನಂದನಾರ್ಹವಾಗಿದೆ. ಜಯಂತಿ ಮಹೋತ್ಸವವು ವ್ಯವಸ್ಥಿತವಾಗಿ ನಡೆಯಲು ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್‍ನ ಶಾಸಕರು ಎಲ್ಲರೂ ಒಗ್ಗಟ್ಟಾಗಿದ್ದು ಯಾರೂ ಪಕ್ಷ ಬಿಡುವ ಪ್ರ್ರಶ್ನೆಯೇ ಇಲ್ಲ. ನಮ್ಮ ಸಮ್ಮಿಶ್ರ ಸರಕಾರ ಸುಭದ್ರವಾಗಿದೆ. 5 ವರ್ಷ ಪೂರ್ಣ ಪ್ರಮಾಣದ ಆಡಳಿತ ಮಾಡುತ್ತೇವೆ. ಬಿಜೆಪಿಯವರ ಜೊತೆ ನಮ್ಮ ಯಾವುದೇ ಶಾಸಕರು ಇಲ್ಲ. ಅದು ಅವರ ಭ್ರಮೆ ಅಷ್ಟೆ. ಕಾಂಗ್ರೆಸ್ ಪಕ್ಷಕ್ಕೆ ತನ್ನದೆ ಆದ ತತ್ವ ಸಿದ್ದಾಂತವಿದೆ. ನಾವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡಲು ಬದ್ದವಾಗಿದ್ದೇವೆ ಎಂದರು.
ಬೆಟ್ಟದºಳ್ಳಿ ಗವಿಮಠದ ಶ್ರೀಚಂದ್ರಶೇಖರ ಸಾಮೀಜಿ ಮಾತನಾಡಿ ರಾಜ್ಯ ಮಟ್ಟದ ಸಿದ್ದರಾಮ ಜಯಂತಿ ಮಹೋತ್ಸವವಾಗಿರುವುದರಿಂದ ಅರ್ಥಪೂರ್ಣವಾಗಿ ಮತ್ತು ಭಕ್ತಿ ಪೂರ್ವಕವಾಗಿ ಆಚರಿಸಬೇಕಾಗಿದೆ. ಆದ್ದರಿಂದ ಈ ಜಯಂತಿಯನ್ನು ಪಕ್ಷಾತೀತವಾಗಿ ಮತ್ತು ಜಾತ್ಯತೀತವಾಗಿ ಆಚರಿಸಲಾಗುತ್ತಿದೆ.
ಭಕ್ತರು ತಮ್ಮ ತನು ಮನ ಧನವನ್ನು ನೀಡುವ ಮೂಲಕ ಜಯಂತಿ ಮಹೋತ್ಸವವು ಯಶಸ್ವಿಗೊಳಿಸಲು ಸಹಕರಿಸಬೇಕು. ಕಾಯಕ ಯೋಗಿ ಶ್ರೀಸಿದ್ದರಾಮೇಶ್ವರರ ಪವಾಡಗಳು ಮಹತ್ವ ಪೂರ್ಣವಾದವುಗಳಾಗಿದ್ದು, ಅವರ ಪ್ರತಿಯೊಂದು ವಚನನಗಳು ಸಮಾಜದ ಎಲ್ಲಾ ವರ್ಗಗಳಿಗೂ ಪೂರಕವಾದವುಗಳಾಗಿವೆ. ಸಮಾಜದ ಎಲ್ಲಾ ಸಮುದಾಯಗಳು ಈ ಜಯಂತಿ ಕಾರ್ಯಕ್ರಮದಲ್ಲಿ ಭಕ್ತಿಯಿಂದ ಭಾಗವಹಿಸಲಿದ್ದಾರೆ. ಊಟ, ತಿಂಡಿ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ವಿವಿಧ ಉಪ ಸಮಿತಿಗಳನ್ನು ರಚಿಸಲಾಗುತ್ತಿದೆ. ಸಂಸದರು, ಸಚಿವರು ಮತ್ತು ಶಾಸಕರು ಸೇರಿದಂತೆ ಹಲವು ಮುಖಂಡರು ಹಗೂ ಭಕ್ತಾದಿಗಳ ಸಹಕಾರದೊಂದಿಗೆ ವ್ಯವಸ್ಥಿತವಾಗಿ ನಡೆಸಲು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಜಿ.ಎಸ್.ಪ್ರಸನ್ನಕುಮಾರ್, ಶಂಕರಾನಂದ, ಸಮಿತಿಯ ಪದಾಧಿಕಾರಿಗಳು ಮತ್ತು ವೀರಶೈವ ಮಹಾಸಭಾದ ಸದಸ್ಯರುಗಳು ಭಾಗವಹಿಸಿದ್ದರು.
