ಬಿಪೂರ್‌ ಜಾಯ್‌ : 44000 ಜನರ ಸ್ಥಳಾಂತರ….!

ಅಹಮದಾಬಾದ್

       ಗುಜರಾತ್ ಕರಾವಳಿ ಭಾಗದಲ್ಲಿ ರೆಡ್ ಅಲರ್ಟ್‌ ಘೋಷಣೆ ಮಾಡಲಾಗಿದೆ. ಮುಂಜಾಗ್ರಜಾ ಕ್ರಮಗಾಗಿ 44 ಸಾವಿರ ಜನರನ್ನು ಸ್ಥಳಾಂತರ ಮಾಡಲಾಗಿದೆ. ಗುರುವಾರದ ಬಳಿಕ ಅಬ್ಬರ ಕೊಂಚ ಕಡಿಮೆಯಾಗುವ ನಿರೀಕ್ಷೆಇದೆ. ಗುಜರಾತ್ ನ ಸೌರಾಷ್ಟ್ರ ಮತ್ತು ಕಚ್ ಪ್ರದೇಶದಲ್ಲಿ ಬಿಪೊರ್‌ಜಾಯ್ ಚಂಡಮಾರುತದ ಪರಿಣಾಮ ಹೆಚ್ಚಿರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಇದರಿಂದಾಗಿ ರಾಜ್ಯದ ಕರಾವಳಿ ಭಾಗದ ಜನರನ್ನು ಮುಂಜಾಗ್ರತಾ ಕ್ರಮವಾಗಿ ಗುಜರಾತ್ ಸರ್ಕಾರ ಸ್ಥಳಾಂತರ ಮಾಡಿದೆ.

     ಬಿಪೊರ್‌ಜಾಯ್ ಚಂಡಮಾರುತದ ಪಾಕಿಸ್ತಾನದ ಕರಾಚಿ ಕಡೆಗೆ ಗುರುವಾರ ಸಂಜೆಯ ವೇಳೆಗೆ ಸಾಗಲಿದೆ. ಅಲ್ಲಿಯ ತನಕ ಸಮುದ್ರ ಪ್ರಕ್ಷುಬ್ಧವಾಗಿದ್ದು, ಭಾರೀ ಗಾಳಿ ಬೀಸುತ್ತಿದೆ. ಯಾವುದೇ ಹಾನಿಯಾಗದಂತೆ ತಡೆಯಲು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.  ಭಾರತೀಯ ಹವಾಮಾನ ಇಲಾಖೆ ಗುಜರಾತ್‌ನ ಸೌರಾಷ್ಟ್ರ ಮತ್ತು ಕಚ್ ಪ್ರದೇಶಕ್ಕೆ ರೆಡ್ ಅಲರ್ಟ್‌ ಘೋಷಣೆ ಮಾಡಿದೆ. ಆದ್ದರಿಂದ ಜನರನ್ನು ಸ್ಥಳಾಂತರ ಮಾಡಿ, ರಕ್ಷಣಾ ಕಾರ್ಯಕ್ಕೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಪಡೆಯನ್ನು ಸಹ ನಿಯೋಜನೆ ಮಾಡಲಾಗಿದೆ. 

      ಕಾಳಜಿ ಕೇಂದ್ರಗಳನ್ನು ಅಲ್ಲಲ್ಲಿ ಸ್ಥಾಪನೆ ಮಾಡಲಾಗಿದ್ದು, ಕರಾವಳಿ ತೀರದ ಜನರಿಗೆ ಅಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದ್ದು, ದೋಣಿಗಳನ್ನು ತೀರಕ್ಕೆ ತಂದು ನಿಲ್ಲಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಯಾದವ್ ಮತ್ತು ರಾಜ್ಯದ ಹಿರಿಯ ಅಧಿಕಾರಿಗಳ ಜೊತೆ ಚಂಡಮಾರುತ ಎದುರಿಸಲು ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಸಿದರು.

    ಇನ್ನೂ ಹೆಚ್ಚಿನ ಜನರನ್ನು ಸ್ಥಳಾಂತರ ಮಾಡಲು ಅಗತ್ಯ ಇರುವ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದ್ದಾರೆ. ರಾಜ್ಯ ಪರಿಹಾರ ವಿಭಾಗದ ಮುಖ್ಯಸ್ಥ ಅಲೋಕ್ ಕುಮಾರ್ ಪಾಂಡೆ, “ಚಂಡಮಾರುತ ಅಪ್ಪಳಿಸುವ ಜಿಲ್ಲೆಗಳನ್ನು ಗುರುತಿಸಿ ಅಲ್ಲಿಂದ ಜನರನ್ನು ಸ್ಥಳಾಂತರ ಮಾಡಲಾಗಿದೆ. ಈ ಜಿಲ್ಲೆಗಳಲ್ಲಿ ಮೂಲ ಸೌಲಭ್ಯಗಳಾದ ವಿದ್ಯುತ್,‌ ಕುಡಿಯುವ ನೀರು, ದೂರವಾಣಿ ಸಂಪರ್ಕದ ಸಮಸ್ಯೆ ಆಗದಂತೆ ಎಚ್ಚರ ವಹಿಸಲಾಗಿದೆ” ಎಂದು ಪಿಟಿಐಗೆ ಹೇಳಿದ್ದಾರೆ. ಮಾಂಡ್ವಿ ಮತ್ತು ಕಚ್ ಮೂಲಕ ಬಿಪೊರ್‌ಜಾಯ್ ಚಂಡಮಾರುತ ಪಾಕಿಸ್ತಾನ ಕಡೆಗೆ ಸಾಗಲಿದೆ.

    ಆಗ ಗಾಳಿಯ ವೇಗ ಗಂಟೆಗೆ 125 ರಿಂದ 135 ಕಿ. ಮೀ.ಇರಲಿದೆ ಎಂದು ಅಂದಾಜಿಸಲಾಗಿದೆ. ಸೌರಾಷ್ಟ್ರ, ಕಚ್ ಪ್ರದೇಶದಲ್ಲಿ ಭಾರೀ ಗಾಳಿಯೊಂದಿಗೆ ಕೂಡಿದ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಜೂನ್ 15 ರಿಂದ 17ರ ತನಕ ಬಿಪೊರ್‌ಜಾಯ್ ಚಂಡಮಾರುತ ಪರಿಣಾಮ ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ.

   ಗುಜರಾತ್ ಸರ್ಕಾರ ಎರಡು ಹಂತದಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ. ಮೊದಲ ಹಂತದಲ್ಲಿ ಸಮುದ್ರದ ಸಮೀಪ 5 ಕಿ. ಮೀ. ವ್ಯಾಪ್ತಿಯಲ್ಲಿರುವ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ. ಬಳಿಕ 10 ಕಿ. ಮೀ. ವ್ಯಾಪ್ತಿಯಲ್ಲಿರುವ ಜನರನ್ನು ಸ್ಥಳಾಂತರ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ರಾಜ್ಯದಲ್ಲಿ 17 ಎನ್‌ಡಿಆರ್‌ಎಫ್ ಮತ್ತು 12 ಎಸ್‌ಡಿಆರ್‌ಎಫ್ ಪಡೆಗಳನ್ನು ವಿವಿಧ ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಪಶ್ಚಿಮ ರೈಲ್ವೆ 69 ರೈಲುಗಳ ಸಂಚಾರ ರದ್ದುಗೊಳಿಸಿದೆ. 32 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap