ಪ್ಲಾಸ್ಟಿಕ್ ಮುಕ್ತ ಬೆಂಗಳೂರು ಮಾಡಲು ಪಣತೊಟ್ಟ ಬಿಬಿಎಂಪಿ
ನಗರದಲ್ಲಿ ದಂಡಾಸ್ತ್ರ ಹಲವು ಕಡೆ ದಾಳಿ : ಪ್ಲಾಸ್ಟಿಕ್ ಬಳಸದಂತೆ ಅರಿವು
ಗುಡಿಬಂಡೆ ಭರತ್ ಜಿ.ಎಸ್
ಬೆಂಗಳೂರು : ನಗರದ 8 ವಲಯಗಳಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳ ಮಾರಟ ಮತ್ತು ಬಳಕೆಯ ನಿಷೇಧವನ್ನು ಕಟ್ಟುನಿಟ್ಟಾಗಿ ಪಾಲಿಸಲು ಬಿಬಿಎಂಪಿ ಅಧಿಕಾರಿಗಳು ತಂಡಗಳನ್ನು ರಚನೆ ಮಾಡಿ ನಗರದ ದಿನಸಿ ಅಂಗಡಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ದೇಶಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್ ಮೇಲೆ ನಿಷೇಧ ಹೇರಲಾಗಿದ್ದು, ಕರ್ನಾಟಕ ಸರ್ಕಾರವು 2016ರಿಂದಲೇ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದೆ. ಇದೀಗ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೊರಡಿಸಿದ ಈ ಆದೇಶವು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಗಡಿ ಪ್ರದೇಶಗಳಲ್ಲಿ ನಿಬರ್ಂಧಗಳನ್ನು ಜಾರಿಗೊಳಿಸಲು ಇನ್ನಷ್ಟು ಸಹಾಯಕವಾಗಿದೆ. ದೇಶಾದ್ಯಂತ ಜುಲೈ 1ರಿಂದ ಏಕ ಪ್ಲಾಸ್ಟಿಕ್ ಬಳಕೆ ನಿಷೇಧವನ್ನು ಹೇರಲಾಗಿದ್ದು ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಲು ಮುಂದಾಗಿದ್ದಾರೆ. ಪಾಲಿಕೆಯ ಕಿರಿಯ ಆರೋಗ್ಯ ಪರಿವೀಕ್ಷಕರು, ಮಾರ್ಷಲ್ ಗಳ ಮೇಲ್ವಿಚಾರಕರು, ಮಾರ್ಷಲ್ ಗಳ ತಂಡ, ಅನಿರೀಕ್ಷಿತವಾಗಿ ದಾಳಿ ಮಾಡಿ ದಂಡದ ಬಿಸಿ ಮುಟ್ಟಿಸಿದ್ದಾರೆ .
ಪ್ಲಾಸ್ಟಿಕ್ ತಯಾರಿಕಾ ಘಟಕದ ಮೇಲೆ ದಾಳಿ :
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದಾಸರಹಳ್ಳಿ ವಲಯ ವ್ಯಾಪ್ತಿಯ ಶೆಟ್ಟಿಹಳ್ಳಿ ವಾರ್ಡ್ ನಲ್ಲಿ ಪ್ಲಾಸ್ಟಿಕ್ ತಯಾರು ಮಾಡುತ್ತಿದ್ದ ಸುಭದ್ರ ಎಂಟರ್ ಪ್ರೈಸಸ್ ಕಾರ್ಖಾನೆ ಮೇಲೆ ದಾಳಿ ನಡೆಸಿ ಸುಮಾರು 4,160 ಕೆ.ಜಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಅಧಿಕಾರಿಗಳು ವಶಪಡಿಸಿಕೊಂಡು ಎಚ್ಚರಿಕೆ ನೀಡಿದ್ದಾರೆ.
ದಾಳಿಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು :
ದಾಳಿ ಮಾಡಿದ ತಂಡದಲ್ಲಿ ದಾಸರಹಳ್ಳಿ ವಲಯದ ಜಂಟಿ ಆಯುಕ್ತರ ಸಮ್ಮುಖದಲ್ಲಿ ಘನತ್ಯಾಜ್ಯ ನಿರ್ವಹಣೆ ವಿಭಾಗದ ಅಧೀಕ್ಷಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಿರಿಯ/ಘನತ್ಯಾಜ್ಯ ಪರಿವೀಕ್ಷಕರು, ಮಾರ್ಷಲ್ ಸೂಪರ್ ವೈಸರ್ ಮತ್ತು ಇನ್ನಿತರ ಸಿಬ್ಬಂದಿಗಳು ಭಾಗವಹಿಸಿದ್ದರು. 7 ಆಟೋ ಟಿಪ್ಪರ್ ಗಳಲ್ಲಿ ವಶಪಡಿಸಿಕೊಂಡ ನಿಷೇಧಿತ ಪ್ಲಾಸ್ಟಿಕ್ ಅನ್ನು ವಲಯ ಜಂಟಿ ಆಯುಕ್ತರು ಪರಿಶೀಲಿಸಿ, ಚೂರು ಚೂರು ಮಾಡಿ ದೊಡ್ಡಬಿದರಕಲ್ಲು ಘನತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ವಿಲೇವಾರಿ ಮಾಡಲು ವಲಯ ಜಂಟಿ ಆಯುಕ್ತರು ಸೂಚನೆ ನೀಡಿದರು.
ಏಕ ಪ್ಲಾಸ್ಟಿಕ್ ಬಳಕೆ ಪ್ಲಾಸ್ಟಿಕ್ ನಿಷೇಧ :
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ನಗರದಾದ್ಯಂತ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಮಾರಾಟ ಮಳಿಗೆಗಳು, ಉತ್ಪಾದಿಸುತ್ತಿರುವ ಘಟಕಗಳ ಮೇಲೆ ಅನಿರೀಕ್ಷಿತ ತಪಾಸಣೆ ನಡೆಸಿ ಪ್ಲಾಸ್ಟಿಕ್ ವಶಪಡಿಸಿಕೊಳ್ಳುವ ಜೊತೆಗೆ ದಂಡ ವಿಧಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ಪ್ರಜಾಪ್ರಗತಿ ಪತ್ರಿಕೆಗೆ ಮಾಹಿತಿ ನೀಡಿದರು.
ಪಾಲಿಕೆಯ ಎಂಟೂ ವಲಯಗಳಲ್ಲಿ ಬರುವ ಎಲ್ಲಾ ವಾರ್ಡ್’ಗಳಲ್ಲಿ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಳಕೆಯನ್ನು ಸಪೂರ್ಣವಾಗಿ ನಿಲ್ಲಿಸುವ ಕಾರ್ಯವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಘನತ್ಯಾಜ್ಯ ವಿಭಾಗದದಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದರಂತೆ ಪಾಲಿಕೆಯ ಕಿರಿಯ ಆರೋಗ್ಯ ಪರಿವೀಕ್ಷಕರು, ಮಾರ್ಷಲ್ಗಳ ಮೇಲ್ವಿಚಾರಕರು ಹಾಗೂ ಮಾರ್ಷಲ್ಗಳ ತಂಡವು ಅನಿರೀಕ್ಷಿತವಾಗಿ ಸಗಟು ವ್ಯಾಪಾರ ಮಳಿಗೆಗಳು, ಅಂಗಡಿಗಳು, ಹೋಟೆಲ್ ಉದ್ದಿಮೆ, ಪ್ಲಾಸ್ಟಿಕ್ ಉತ್ಪಾದಿಸುವ ಉದ್ದಿಮೆಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್ ಜಪ್ತಿ ಮಾಡುವುದರ ಜೊತೆಗೆ ದಂಡ ವಿಧಿಸುತ್ತಿದ್ದೇವೆ. ಅಲ್ಲದೆ ಮತ್ತೊಮ್ಮೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.
-ನಂದೀಶ್, ಅಧೀಕ್ಷಕ ಅಭಿಯಂತರರು, ಬಿಬಿಎಂಪಿ.