ಬೆಂಗಳೂರು : ನಗರದಲ್ಲಿ ಸಂಚಾರ ದಟ್ಟಣೆಯ ನಿರ್ವಹಣೆಗೆ ಸಂಬಂಧಿಸಿದಂತೆ ಈಗಾಗಲೇ ಪರಿಶೀಲನೆ ನಡೆಸಿ ಜಂಕ್ಷನ್ಗಳಲ್ಲಿ ತೆಗೆದುಕೊಳ್ಳಬೇಕಿರುವ ತುರ್ತು ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಆಡಳಿತಗಾರ ರಾಕೇಶ್ ಸಿಂಗ್ ಅವರು ಅಧಿಕಾರಿಳಿಗೆ ಸೂಚನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ನಿರ್ವಹಣೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಜೊತೆ ನಡೆದ 3ನೇ ಸಮನ್ವಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಪ್ರಮುಖ ಜಂಕ್ಷನ್ಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ತಾತ್ಕಾಲಿಕ ಪರಿಹಾರಗಳ ಜೊತೆಗೆ ಶಾಶ್ವತ ಪರಿಹಾರಗಳಿಗೂ ಹೆಚ್ಚು ಆದ್ಯತೆ ನೀಡಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಗೋರಗುಂಟೆ ಪಾಳ್ಯ, ಹೆಬ್ಬಾಳ ಜಂಕ್ಷನ್, ಸಿಲ್ಕ್ ಬೋರ್ಡ್ ಜಂಕ್ಷನ್, ಕೆ.ಆರ್.ಪುರ ಜಂಕ್ಷನ್, ಜಯದೇವ ಜಂಕ್ಷನ್ ಗಳಲ್ಲಿ ರಸ್ತೆಯ ಗುಣಮಟ್ಟವನ್ನು ಹೆಚ್ಚಿಸಬೇಕಿದ್ದು, ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಭೆಯಲ್ಲಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಮಾತನಾಡಿ, ಶಿವಾನಂದ ಮೇಲುಸೇತುವೆ ಕಾಮಗಾರಿಯನ್ನು 5 ಆಗಸ್ಟ್ 2022ಕ್ಕೆ ಪೂರ್ಣಗೊಳಿಸಲು ಯೋಜನಾ ವಿಭಾಗದ ಮುಖ್ಯ ಅಭಿಯಂತರರಿಗೆ ಸೂಚನೆ ನೀಡಿದರು. ಜೊತೆಗೆ ಗಾಳಿ ಆಂಜನೇಯ ದೇವಸ್ಥಾನ ಜಂಕ್ಷನ್, ಕೆಂಗೇರಿ ಸ್ಯಾಟಲೈಟ್ ಬಸ್ ನಿಲ್ದಾಣ ಮತ್ತು ಸುಮನಹಳ್ಳಿ ಜಂಕ್ಷನ್ನಲ್ಲಿ ಪಾದಚಾರಿ ಮೇಲುಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕೆಂಪೇಗೌಡ ರಸ್ತೆ(ಕೆ.ಜಿ.ರಸ್ತೆ)ಯ ಸಂತೋಷ್ ಚಿತ್ರಮಂದಿರದ ಬಳಿಯಿರುವ ಪಾದಚಾರಿ ಮೇಲುಸೇತುವೆಯು ಶಿಥಿಲಗೊಂಡಿದ್ದು, ಅದನ್ನು ಕೂಡಲೆ ತೆರವುಗೊಳಿಸಿ ಹೊಸದಾಗಿ ಪಾದಚಾರಿ ಮೇಲುಸೇತುವೆ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ, ಜಲಮಂಡಳಿ ಅಧ್ಯಕ್ಷರಾದ ಜಯರಾಮ್, ಬಿಡಿಎ ಆಯುಕ್ತರಾದ ರಾಜೇಶ್ ಗೌಡ, ಸಂಚಾರಿ ಪೋಲಿಸ್ ಜಂಟಿ ಆಯುಕ್ತರಾದ ರವಿಕಾಂತೆ ಗೌಡ, ಸ್ಮಾರ್ಟ್ ಸಿಟಿ ಹಾಗೂ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಾದ ರಾಜೇಂದ್ರ ಚೋಳನ್, ಪಾಲಿಕೆಯ ಎಲ್ಲಾ ವಲಯ/ವಿಶೇಷ ಆಯುಕ್ತರುಗಳು, ಬಿ.ಎಂ.ಆರ್.ಸಿ.ಎಲ್, ಬಿ.ಎಂ.ಟಿ.ಸಿ, ಕೆ.ಎಸ್.ಆರ್.ಟಿ.ಸಿ, ಕೆ.ಪಿ.ಟಿ.ಸಿ.ಎಲ್, ರೈಲ್ವೇ, ಪಾಲಿಕೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.