ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವ ಯುವಕರು

 ದಾವಣಗೆರೆ:

      ಇಂದಿನ ಯುವಕರು ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗಿ ತಮ್ಮ ಭವಿಷ್ಯ ಮತ್ತು ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಕುಲಕರ್ಣಿ ಅಂಬಾದಾಸ್‍ಜಿ ಕಳವಳ ವ್ಯಕ್ತಪಡಿಸಿದರು.

      ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬಿಇಎಸ್ ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಸ್ವಾಮಿ ವಿವೇಕಾನಂದರ ಜನ್ಮ ದಿನೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಮಾದಕ ವಸ್ತುಗಳಿಂದ ಯುವಕರ ರಕ್ಷಣೆ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

      ಮಾನವ ಜೀವನದಲ್ಲಿ ಬಾಲ್ಯ, ಯೌವನ, ಮುಪ್ಪು ಈ ಮೂರು ಹಂತಗಳು ಅನಿವಾರ್ಯವಾಗಿದ್ದು, ಯೌವನಾವಸ್ಥೆಯಲ್ಲಿ ಯುವಕರು ಸ್ವಾಮಿ ವಿವೇಕಾನಂದರ ಮಾರ್ಗದರ್ಶನದ ಆದರ್ಶಗಳನ್ನು ತಮ್ಮ ಜೀವನದಲ್ಲಿ ರೂಡಿಸಿಕೊಳ್ಳುವ ಮೂಲಕ ಮತ್ತು ಶಕ್ತಿಯುತ ವ್ಯಕ್ತಿತ್ವದ ಮೂಲಕ ನವ ಭಾರತ ನಿರ್ಮಾಣಕ್ಕೆ ಶ್ರಮಿಸುವಂತೆ ಕರೆನೀಡಿದರು.

      ಇಂದು ಜನರ ಆರೋಗ್ಯ ರಕ್ಷಣೆ ಮಾಡಬೇಕಾದ ಮತ್ತು ವಸ್ಯಸನಗಳಿಗೆ ಒಳಗಾದ ಯುವಕರಿಗೆ ಮಾರ್ಗದರ್ಶನ ನೀಡಿ ಅವರನ್ನು ವ್ಯಸನ ಮುಕ್ತರಾಗಿ ಮಾಡಬೇಕಾದ ವೈದ್ಯ ವಿದ್ಯಾರ್ಥಿ ಇಂದು ಮಾದಕ ವಸ್ತುಗಳಿಗೆ ಬಲಿಯಾಗಿ ಜೀವನ ಹಾಗೂ ಭವಿಷ್ಯ ಹಾಳು ಮಾಡಿಕೊಳ್ಳುತ್ತಿರುವುದು ವಿಷಾಧಕರ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

      ಈಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶರಾದ ಕೆಂಗಬಾಲಯ್ಯ ಮಾತನಾಡಿ, ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳುವ ಮೂಲಕ ಸ್ವಾಮಿ ವಿವೇಕಾನಂದರು ಬಯಸಿದ್ದ ಸದೃಢ ಭಾರತ ನಿರ್ಮಿಸಲು ಮುಂದಾಗಬೇಕು. ಇಂದಿನ ದಿನಮಾನದಲ್ಲಿ ಮೊಬೈಲ್ ಕೂಡ ಯುವಕರನ್ನು ಸಮೂಹ ಸನ್ನಿಗೆ ಈಡುಮಾಡಿದೆ. ಯುವ ಸಮೂಹ ಮೊಬೈಲ್‍ಗಳಿಗೆ ದಾಸರಾಗದೇ ದೇಶಕ್ಕೆ ಕೊಡುಗೆ ನೀಡುವಂತೆ ಕರೆನೀಡಿದರು.

      ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ, ನ್ಯಾಯವಾದಿ ಎಲ್.ಹೆಚ್.ಅರುಣ್‍ಕುಮಾರ್ ಮಾತನಾಡಿ, ಯುವಕರಲ್ಲಿ ಜ್ಞಾನದ ಕಿಚ್ಚನ್ನು ಹಚ್ಚಿ ಅವರನ್ನು ಜಾಗೃತಿಗೊಳಿಸಿ ಯುವಕರಿಗೆ ಪ್ರೇರೆಣೆ ನೀಡಿದ ವಿವೇಕಾನಂದರು ಅಲ್ಪಕಾಲದಲ್ಲಿಯೇ ಹಲವು ಯುಗಗಳ ಸಾಧನೆ ಮಾಡಿ ತೋರಿಸಿದರು. ಹಸಿದವನಿಗೆ ಅನ್ನ ಕೊಡದ, ವಿಧವೆಯ ಕಣ್ಣಿರೂ ಒರೆಸದ, ದುರ್ಬಲ ವರ್ಗದ ಜನರನ್ನು ಗುಲಾಮಗಿರಿಗೆ ಒಳಪಡಿಸುವ ಸಮಾಜವನ್ನು ನಿರಾಕರಣೆ ಮಾಡಿ ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದರು ಎಂದರು.

      ಸಾಹಿತಿ ಆನಂದ್ ಋಗ್ವೇದಿ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯಎಂ.ಹೆಚ್ ಬೇತೂರುಮಠ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಎನ್.ಟಿ. ಮಂಜುನಾಥ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಶ್ರೀನಿವಾಸ್ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿ ವಿದ್ಯಾರ್ಥಿನಿಯರು, ಉಪನ್ಯಾಸಕರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap