ಬೆಂಗಳೂರು
ಮೈಸೂರು ಮಿನರಲ್ಸ್ ನಿಗಮದ ಅಧ್ಯಕ್ಷರಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಇಂದು ಅಧಿಕಾರ ಸ್ವೀಕರಿಸಿದ್ದಾರೆ.ನಗರದ ಶಾಂತಿನಗರ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಮಾತನಾಡಿದ ಅವರು, ಪಕ್ಷದ ಹೈಕಮಾಂಡ್ ತಮಗೆ ನಿಗಮದ ಅಧ್ಯಕ್ಷ ಸ್ಥಾನ ನೀಡಿದ್ದು, ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಜವಾಬ್ದಾರಿ ಕೊಟ್ಟ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಬೆಳಗಾವಿ ರಾಜಕಾರಣದಲ್ಲಿ ಗೊಂದಲ ವಿಚಾರವಾಗಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ರಾಜಕೀಯ ಪಕ್ಷದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರುವುದು ಸಹಜ. ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಲ್ಲೇ ಹೊಂದಾಣಿಕೆ ಇರುವುದಿಲ್ಲ ಎಂದ ಮೇಲೆ ಇವೆಲ್ಲವೂ ಸಹಜ. ಪಕ್ಷದ ನಾಯಕರು ಕೈಗೊಂಡ ನಿರ್ಧಾರದಂತೆ ನಡೆದುಕೊಳ್ಳುವುದಾಗಿ ಸ್ಪಷ್ಟಪಡಿಸಿದರು.
ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದೆಲ್ಲ ಹೈಕಮಾಂಡ್ ಗೆ ಬಿಟ್ಟ ನಿರ್ಧಾರ. ಸದ್ಯಕ್ಕೆ ಈ ಬಗ್ಗೆ ಮಾತನಾಡುವುದು ಸರಿಯಲ್ಲ . ಬೆಳಗಾವಿ ಗ್ರಾಮೀಣ ಜನತೆ ತಮ್ಮನ್ನು ವಿಧಾನಸಭೆಗೆ ಆಶೀರ್ವದಿಸಿದ್ದು, ಅವರ ಸೇವೆಯನ್ನು ಮಾಡಿಕೊಂಡಿರುತ್ತೇನೆ. ಮುಂದೆ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧಳಾಗಿರುತ್ತೇನೆ ಎಂದು ಹೇಳಿದರು.
ಬೇನಾಮಿ ಆಸ್ತಿ ಹಿನ್ನೆಲೆ ಐಟಿ ದೂರು ದಾಖಲು ವಿಚಾರಕ್ಕೆ ಪ್ರತಿಕ್ರಿಯಿಸಿ, ತಾವು ಯಾವ ಬೇನಾಮಿ ಆಸ್ತಿ ಕೂಡ ಮಾಡಿಲ್ಲ. ತಾವಿನ್ನೂ ಶಾಸಕಿಯಾಗಿರದ ಸಮಯದಲ್ಲಿ ರಾಜಕೀಯ ದುರುದ್ದೇಶಕ್ಕೆ ಐಟಿ ದಾಳಿ ಆಗಿತ್ತು. ಈ ವಿಚಾರವನ್ನು ಲೆಕ್ಕಪರಿಶೋಧಕರು ಮತ್ತು ತಮ್ಮ ಸಹೋದರ ನೋಡಿಕೊಳ್ಳುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು.