ಮೊಟ್ಟೆ ಪೂರೈಕೆಯಲ್ಲಿ ಕೊರತೆ: ಶೇ.40 ರಷ್ಟು ಬೆಲೆ ಏರಿಕೆ!

0
27

ನವದೆಹಲಿ: ಬಹುತೇಕ ಕಡೆಗಳಲ್ಲಿ ಕೋಳಿ ಮೊಟ್ಟೆ ಬೆಲೆ ಚಿಲ್ಲರೆ ಮಾರುಕಟ್ಟೆಯಲ್ಲಿ ಏರಿಕೆಯಾಗಿದ್ದು ಪ್ರತಿ ಮೊಟ್ಟೆಗೆ 7ರಿಂದ 7.50 ರೂಪಾಯಿಯಿದೆ. ಮೊಟ್ಟೆ ಬೆಲೆ ಶೇಕಡಾ 40ರಷ್ಟು ಹೆಚ್ಚಾಗಿದೆ ಎಂದು ಭಾರತೀಯ ಕೋಳಿ ಒಕ್ಕೂಟದ ಅಧ್ಯಕ್ಷ ರಮೇಶ್ ಕಾತ್ರಿ ತಿಳಿಸಿದ್ದಾರೆ.

ಈ ವರ್ಷ ಮೊಟ್ಟೆ ಉತ್ಪಾದನೆ 25ರಿಂದ 30ರಷ್ಟು ಕಡಿಮೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಮೊಟ್ಟೆ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ರಮೇಶ್ ಕಾತ್ರಿ ಹೇಳಿದ್ದಾರೆ. ಈ ವರ್ಷ ಅನೇಕ ಕೋಳಿ ಫಾರಂಗಳಲ್ಲಿ ಮೊಟ್ಟೆ ಉತ್ಪಾದನೆ ಕಡಿಮೆಯಾಗಿರುವುದರಿಂದ ಮೊಟ್ಟೆ ಬೆಲೆ ಅಧಿಕವಾಗಿದೆ ಎಂದು ಅವರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಕಳೆದ ವರ್ಷ ಮೊಟ್ಟೆ ಉತ್ಪಾದನೆ ಅಧಿಕವಾಗಿದ್ದರಿಂದ ಸಗಟು ಮಾರುಕಟ್ಟೆಯಲ್ಲಿ ಮೊಟ್ಟೆಯೊಂದರ ಬೆಲೆ 4 ರೂಪಾಯಿಗಳಿದ್ದರೆ, ಉತ್ಪಾದನೆಯ ವೆಚ್ಚ ಸುಮಾರು 3.50 ರೂಪಾಯಿಗಳಷ್ಟಾಗಿತ್ತು. ಕಳೆದ ವರ್ಷ ಉಂಟಾಗಿದ್ದ ನಷ್ಟಕ್ಕೆ, ಕಡಿಮೆ ಬೆಲೆ ಸಿಗಬಹುದೆಂಬ ಭೀತಿ ಮತ್ತು ಪ್ರಾಣಿ ಅಭಿವೃದ್ಧಿ ಕಾರ್ಯಕರ್ತರ ಭಯದಿಂದ ಅನೇಕರು ಈ ವರ್ಷ ಮೊಟ್ಟೆಗಳ ಉತ್ಪಾದನೆಯನ್ನು ಕಡಿಮೆ ಮಾಡಿದ್ದಾರೆ. ಇನ್ನು ಕೆಲವರು ಕೋಳಿ ಫಾರಂನ್ನು ಮುಚ್ಚಿದ್ದಾರೆ ಎಂದು ರಮೇಶ್ ಹೇಳಿದರು.

ದೆಹಲಿಯಲ್ಲಿ ಪ್ರತಿ ಮೊಟ್ಟೆಯ ಬೆಲೆ 7ರಿಂದ 7.50 ರೂಪಾಯಿಗಳಿವೆ. ಇಲ್ಲಿ ಕಳೆದ ವರ್ಷ 4ರಿಂದ 5ರೂಪಾಯಿಗಳಿತ್ತು ಎಂದು ಉದ್ಯಮ ಅಂಕಿಅಂಶಗಳು ಹೇಳುತ್ತವೆ. ದೇಶದ ಇತರ ನಗರಗಳಲ್ಲಿ ಕೂಡ ಮೊಟ್ಟೆ ಬೆಲೆ ಹೀಗೆಯೇ ಇದೆ. 2015-16ರಲ್ಲಿ ಮೊಟ್ಟೆ ಉತ್ಪಾದನೆ ದೇಶದಲ್ಲಿ ಸುಮಾರು 83 ಶತಕೋಟಿಯಿದ್ದರೆ 2016-17ರಲ್ಲಿ ಜಾಸ್ತಿಯಾಗಿತ್ತು ಎಂದು ಸರ್ಕಾರದ ಅಂಕಿಅಂಶ ಹೇಳುತ್ತದೆ.

LEAVE A REPLY

Please enter your comment!
Please enter your name here