ರಾಜ್ಯದಲ್ಲಿ ಓಮಿಕ್ರಾನ್ ಸೋಂಕು ಪತ್ತೆ: ತುರ್ತು ಸಭೆ ಕರೆದ ಸಿಎಂ ಬೊಮ್ಮಾಯಿ

ಬೆಂಗಳೂರು:

ರಾಜ್ಯದಲ್ಲಿ ಓಮಿಕ್ರಾನ್ ಸೋಂಕು ಪತ್ತೆ: ತುರ್ತು ಸಭೆ ಕರೆದ ಸಿಎಂ ಬೊಮ್ಮಾಯಿ

     ಡಿಸೆಂಬರ್ 3  ಕರ್ನಾಟಕದಲ್ಲಿ ಗುರುವಾರ ಇಬ್ಬರಿಗೆ ಓಮಿಕ್ರಾನ್​ ರೂಪಾಂತರಿ ಸೋಂಕು ದೃಢಪಟ್ಟ

ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಡಿ.3 ಮಧ್ಯಾಹ್ನ 1 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ತುರ್ತು ಸಭೆ ಕರೆದಿದ್ದಾರೆ.

 

ಕೊವಿಡ್- 19 ನಿಯಂತ್ರಣ ಕ್ರಮಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದ್ದು, ಕಂದಾಯ ಸಚಿವರು, ಆರೋಗ್ಯ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಬಿಬಿಎಂಪಿ ಮುಖ್ಯ ಆಯುಕ್ತರು, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ವಿಪತ್ತು ನಿರ್ವಹಣಾ ಇಲಾಖೆ ಪ್ರಧಾನ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ, ಕೆಐಎಬಿ ಕೋವಿಡ್ ನೋಡಲ್ ಅಧಿಕಾರಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕರು, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರ ಹಾಜರಿಗೆ ಸೂಚನೆ ನೀಡಲಾಗಿದೆ.ಸಭೆಯಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರಿಗೂ ಹಾಜರಿರುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಚೇರಿಯಿಂದ ಸೂಚನೆ ಕೊಡಲಾಗಿದೆ.

 

ಕರ್ನಾಟಕದ ಇಬ್ಬರಿಗೆ ಓಮಿಕ್ರಾನ್ ರೂಪಾಂತರದ ಸೋಂಕು ದೃಢಪಟ್ಟಿರುವ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಒಮಿಕ್ರಾನ್ ಹರಡಿದ್ದರೂ ದೊಡ್ಡಮಟ್ಟದ ಆತಂಕವಿಲ್ಲ. ಕೇಂದ್ರ ಆರೋಗ್ಯ ಸಚಿವರೊಂದಿಗೆ ಈ ಕುರಿತು ಸ್ವತಃ ಚರ್ಚಿಸಿದ್ದೇನೆ. ಬೆಂಗಳೂರಿಗೆ ಹಿಂದಿರುಗಿದ ನಂತರ ತಜ್ಞರ ಜತೆ ತುರ್ತು ಸಭೆ ಮಾಡಿ ಚರ್ಚೆ ನಡೆಸುತ್ತೇನೆ. ನಂತರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡುತ್ತೇವೆ. ಕರ್ನಾಟಕದ ಓಮಿಕ್ರಾನ್ ಸ್ಥಿತಿಗತಿಯ ಬಗ್ಗೆ ನಾಳೆ ಸಂಪೂರ್ಣ ವಿವರ ನೀಡುತ್ತೇವೆ. ಕೋವಿಡ್ ಎದುರಿಸಿದ ರೀತಿಯಲ್ಲಿಯೇ ಓಮಿಕ್ರಾನ್ ಪರಿಸ್ಥಿತಿಯನ್ನೂ ನಿಭಾಯಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಇಬ್ಬರಿಗೆ ಓಮಿಕ್ರಾನ್ ದೃಢಪಟ್ಟಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ವಿವರ ಸಿಕ್ಕಿಲ್ಲ. ನಮ್ಮ ಆರೋಗ್ಯ ಸಚಿವರು ಮತ್ತು ಮುಖ್ಯ ಕಾರ್ಯದರ್ಶಿಯೊಂದಿಗೆ ನಾನು ಚರ್ಚಿಸಿದೆ. ಕೇಂದ್ರ ಸರ್ಕಾರದಿಂದ ಅಗತ್ಯ ಮಾಹಿತಿ ಪಡೆಯಲು ಸೂಚಿಸಿದ್ದೇನೆ. ಶುಕ್ರವಾರ ಡಿ.3 ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನಲ್ಲಿ ತಜ್ಞರ ಜತೆ ತುರ್ತು ಸಭೆ ನಡೆಯಲಿದೆ. ಹೈರಿಸ್ಕ್ ದೇಶಗಳ ಪ್ರಯಾಣಿಕರಿಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುವುದು. ವಿಮಾನ ನಿಲ್ದಾಣಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ಓಮಿಕ್ರಾನ್ ಪ್ರಕರಣಗಳ ಕುರಿತು ಮಾಹಿತಿ ನೀಡಿರುವ ಕೇಂದ್ರ ಸರ್ಕಾರವು, ಕೊರೊನಾ ರೂಪಾಂತರದ ಸೋಂಕು ಪತ್ತೆಯಾಗಿರುವ ಇಬ್ಬರೂ ಕರ್ನಾಟಕದವರು ಎಂದಿದೆ. ಕೇಂದ್ರ ಸರ್ಕಾರದ ಪ್ರಮುಖರು ಮತ್ತು ತಜ್ಞರ ಜೊತೆ ಈ ಸಂಬಂಧ ಚರ್ಚೆ ಮಾಡಬೇಕಿದೆ. ಪೂರ್ಣ ವರದಿ ಬಂದ ಬಳಿಕ ಪರಿಸ್ಥಿತಿಯ ಯಥಾಸ್ಥಿತಿಯ ಬಗ್ಗೆ ಸಮಗ್ರ ಮಾಹಿತಿ ಲಭ್ಯವಾಗಲಿದೆ.

 

ವಿಮಾನ ನಿಲ್ದಾಣಗಳಲ್ಲಿ ಸೋಂಕಿತರ ತಪಾಸಣೆ ಮತ್ತು ಕ್ವಾರಂಟೈನ್ ಬಗ್ಗೆ ಮತ್ತಷ್ಟು ಮಾಹಿತಿ ಪಡೆದುಕೊಳ್ಳುವ ಅವಶ್ಯಕತೆ ಇದೆ. ಈ ವಿಚಾರದ ಬಗ್ಗೆ ತಜ್ಞರ ಜೊತೆ ಮಾತನಾಡಿ ತೀರ್ಮಾನ ಮಾಡಲಾಗುತ್ತದೆ ಎಂದರು.

ಸಭೆ ಚರ್ಚೆ ಆಗಲಿರುವ ಪ್ರಮುಖ ವಿಚಾರಗಳು

  1.  ವಿಮಾನ ನಿಲ್ದಾಣಗಳಲ್ಲಿ ಏನೆಲ್ಲಾ ಕಠಿಣ ಕ್ರಮಗಳನ್ನು ಕೈಗೊಳ್ಳಬಹುದು?

2. ಓಮಿಕ್ರಾನ್ ಸೋಂಕಿತರನ್ನು ಹೇಗೆ ನೋಡಿಕೊಳ್ಳಬೇಕು?

3. ಸದ್ಯಕ್ಕೆ ಇರುವ ಆಸ್ಪತ್ರೆ, ವೈದ್ಯಕೀಯ ಸೌಲಭ್ಯಗಳು, ವೈದ್ಯರ ಸೌಲಭ್ಯ ಎಷ್ಟರ ಮಟ್ಟಿಗೆ ಇದೆ?

4.ವ್ಯಾಕ್ಸಿನೇಷನ್ ಹೆಚ್ಚು ಮಾಡುವುದು. ಟೆಸ್ಟ್‌ಗಳನ್ನು ಎಷ್ಟು ಹೆಚ್ಚಿಸುವುದು.

5. ಹೊಸ ವರ್ಷದ ಆಚರಣೆ, ಕ್ರಿಸ್‌ಮಸ್ ಆಚರಣೆಗೆ ಮಾರ್ಗಸೂಚಿ.

6. ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಮಾಡಬೇಕಾ? ಅಥವಾ ಬೆಂಗಳೂರಿನಲ್ಲಿ ಮಾಡಬೇಕಾ?

7. ಈ ಹಿಂದೆ ಕೊರೊನಾ ಮೊದಲ ಹಂತದಲ್ಲಿ ಹಾಗೂ ಎರಡನೇ ಹಂತದಲ್ಲಿ ತಂದ ಟಫ್ ರೂಲ್ಸ್‌ಗಳನ್ನು ತರಬೇಕಾ?

8. ಸಭೆ, ಸಮಾರಂಭಗಳಿಗೆ ಬ್ರೇಕ್ ಹಾಕಬೇಕಾ?

9. ಮದುವೆ, ನಾಮಕರಣ, ಗೃಹ ಪ್ರವೇಶಕ್ಕೆ ಎಷ್ಟು ಜನ ಸೇರಬೇಕು?

10.ಸ್ವಿಮಿಂಗ್ ಫೂಲ್, ಜಿಮ್, ಸ್ಪೋರ್ಟ್ಸ್ ಕ್ಲಬ್‌ಗಳಲ್ಲಿ ಎಷ್ಟು ಜನರಿಗೆ ಮಿತಿ ಮಾಡಬೇಕು?

11. ರಾಜಕೀಯ ಸಮಾವೇಶ, ಜಾತ್ರೆಗಳು, ಹಬ್ಬಗಳು, ದೇವರ ಉತ್ಸವಗಳು, ಪ್ರತಿಭಟನೆಗಳಿಗೆ ನಿಯಂತ್ರಣ ತರಬೇಕೇ?

12. ಸಿನಿಮಾ ಮಂದಿರಗಳು, ಮನರಂಜನಾ ಕಾರ್ಯಕ್ರಮಗಳು, ಮಾಲ್‌ಗಳು, ಪಬ್‌ಗಳು, ರೆಸ್ಟೋರೆಂಟ್‌ಗಳು, ಬಾರ್‌ಗಳು, ಆರ್ಕೆಸ್ಟ್ರಾಗಳ ಕಾರ್ಯಕ್ರಮಗಳಿಗೆ ನಿಯಂತ್ರಣ ಬೇಕೇ?

13. ಫ್ಯಾಕ್ಟರಿ, ಗಾರ್ಮೆಂಟ್ಸ್, ಐಟಿ-ಬಿಟಿ ಕಂಪನಿಗಳು, ಸರ್ಕಾರಿ ಕಚೇರಿಗಳಲ್ಲಿ ಉದ್ಯೋಗಿಗಳನ್ನು ಎಷ್ಟು ಪ್ರಮಾಣದಲ್ಲಿ ಬಳಸಿಕೊಳ್ಳಬೇಕು?

14. ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಪಾಠಗಳು ಯಾವ ಮಟ್ಟದಲ್ಲಿ ನಡೆಸಬೇಕು?. ಹೀಗೆ ಹಲವು ವಿಚಾರಗಳು ಶುಕ್ರವಾರದ ಸಭೆಯಲ್ಲಿ ಚರ್ಚೆಯಾಗಲಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap