ವಿಡಿಯೋ: ಕೂದಲೆಳೆ ಅಂತರದಲ್ಲಿ ಸಾವಿನ ಬಾಯಿಂದ ಪಾರಾದ ಚೀನಾ ವ್ಯಕ್ತಿ!

0
29

ಬೀಜಿಂಗ್: ಬೆಂಕಿಗಾಹುತಿಯಾಗಿದ್ದ ಬಹುಮಹಡಿ ಕಟ್ಟಡದಲ್ಲಿ ವ್ಯಕ್ತಿಯೋರ್ವ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚೀನಾದ ಚಾಂಗ್ ಜಿಂಗ್ ನಲ್ಲಿ ನಡೆದಿದೆ.

23 ಅಂತಸ್ತಿನ ಬಹುಮಹಡಿ ಕಟ್ಟಡದಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡಿದ್ದು, ಅದರಿಂದ ಪಾರಾಗಲು ವ್ಯಕ್ತಿ ಕಿಟಕಿ ಸಹಾಯದಿಂದ ಹೊರ ಬಂದಿದ್ದಾನೆ. ಆದರೆ ತಾನಿರುವ ಕೊಠಡಿಯ ಮೇಲೆಯೇ ಭಾರಿ ಪ್ರಮಾಣದಲ್ಲಿ ಕಟ್ಟಡಕ್ಕೆ ಬೆಂಕಿ ಹೊತ್ತಿದ್ದು, ಆತ ಕಿಟಕಿ ಮೇಲೆ ನೇತಾಡುತ್ತಿದ್ದರೆ ಅತ್ತ ಮೇಲಿನಿಂದ ಬೆಂಕಿಯ ಅವಶೇಷಗಳು ಕೆಳಗೆ ಬೀಳುತ್ತಿವೆ. ಕೆಲ ಅವಶೇಷಗಳು ಆತನ ಮೇಲೆಯೇ ಬಿದ್ದರೂ ಅದರಿಂದ ಹೇಗೋ ಆತ ಪಾರಾಗಿದ್ದ. ಕೊನೆಗೆ ಕಿಟಕಿ ಕನ್ನಡಿ ಒಡೆದು ಒಳಗೆ ಹೋಗುವ ಪ್ರಯತ್ನ ಮಾಡಿದನಾದರೂ ಒಂದಷ್ಟು ಸಮಯ ಅದು ಫಲನೀಡಲಿಲ್ಲ.

ಅಂತಿಮವಾಗಿ ಆತನ ನೆರವಿಗೆ ಧಾವಿಸಿದ ಕೆಲವರು ಬಹುಮಹಡಿ ಕಟ್ಟಡದೊಳಗೆ ನುಗ್ಗಿ ಆತನಿಂದ ಕೊಠಡಿಯ ಕಿಟಕಿಯ ಗಾಜನ್ನು ಒಳಗಿನಿಂದ ಒಡೆದು ಆತನನ್ನು ಒಳಗೆ ಎಳೆದುಕೊಂಡಿದ್ದಾರೆ. ಒಂದು ವೇಳೆ ಆತ ಇನ್ನೊಂದಷ್ಟು ಸಮಯ ಅಲ್ಲಿಯೇ ಕಿಟಕಿ ಬಳಿ ಇದ್ದಿದ್ದರೆ ಮೇಲೆ ಉರಿಯುತ್ತಿದ್ದ ಬೆಂಕಿ ಅವಶೇಷಗಳು ಆತನ ಮೇಲೆ ಬಿದ್ದು ಆತ ಪ್ರಾಣಾಪಾಯಕ್ಕೆ ಸಿಲುಕುವ ಸಾಧ್ಯತೆ ಇತ್ತು. ಆದರೆ ಅದೃಷ್ಟವಶಾತ್ ಆತ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆತನ ಮೇಲೆ ಬೆಂಕಿ ಅವಶೇಷಗಳು ಬಿದ್ದ ಪರಿಣಾಮ ಸಣ್ಣ ಪುಟ್ಟ ಸುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ಡಿಸೆಂಬರ್ 13ರಂದು ಈ ಘಟನೆ ನಡೆದಿದ್ದು, ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಈ ವಿಡಿಯೋ ಚಿತ್ರಿಸಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದೆ.

LEAVE A REPLY

Please enter your comment!
Please enter your name here