ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ವಿದ್ಯಾಭ್ಯಾಸದಲ್ಲೂ ಮುಂದಿದ್ದಾರೆ

 ಹರಿಹರ:

      ಮರಿಯಾ ನಿವಾಸ ಶಾಲೆಯ ವಿದ್ಯಾರ್ಥಿಗಳು ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ವಿದ್ಯಾಭ್ಯಾಸದಲ್ಲೂ ತುಂಬಾ ಮುಂದಿದ್ದಾರೆ ಎಂದು ಶಾಸಕ ಎಸ್.ರಾಮಪ್ಪ ತಿಳಿಸಿದರು.

      ನಗರದ ಮರಿಯಾ ನಿವಾಸ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಈ ಶಾಲೆಯ ವಿದ್ಯಾರ್ಥಿಗಳಲ್ಲಿ ಶಿಸ್ತು, ಉತ್ತಮ ನಡತೆ ತುಂಬಿದೆ, ಶಾಲೆ ವಾರ್ಷಿಕೋತ್ಸವವನ್ನು ಕುಟುಂಬೋತ್ಸವ ಧ್ಯೇಯದೊಂದಿಗೆ ಆಚರಿಸುತ್ತಿರುವುದು ನನಗೆ ಸಂತಸ ತಂದಿದೆ. ಮರಿಯಾ ನಿವಾಸ ಶಾಲೆಯಲ್ಲಿ ಒಳ್ಳೆಯ ವಿದ್ಯಾಭ್ಯಾಸ ಸಿಗುತ್ತಿದೆ. ಮಕ್ಕಳು ಓದಿನ ಕಡೆ ಗಮನಹರಿಸಿ ಶಿಕ್ಷಕರಿಗೆ ಗೌರವ ನೀಡಿ ಉತ್ತಮ ಅಂಕಗಳಿಸಿ ಸತ್ಪ್ರಜೆಗಳಾಗಬೇಕೆಂದರು

      ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ನರಸಿಂಹಪ್ಪ ಮಾತನಾಡಿ, ಕುಟುಂಬೋತ್ಸವ ಕಾರ್ಯಕ್ರಮ ಈಗ ಹದಗೆಟ್ಟಿರುವ ಕುಟುಂಬ ವ್ಯವಸ್ಥೆಯನ್ನು ಸರಿಪಡಿಸಲು ಮತ್ತು ಎಲ್ಲಾ ಕುಟುಂಬಗಳನ್ನು ಗಟ್ಟಿಗೊಳಿಸುವ ಉದ್ದೇಶ ಹೊಂದಿದೆ. ಇಂತಹ ಕಾರ್ಯಕ್ರಮದ ಅವಶ್ಯಕತೆ ಇತ್ತು. ಮರಿಯಾ ನಿವಾಸ ಶಾಲೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ತುಂಬಾ ಒಳ್ಳೆಯ ಕಾರ್ಯ ಮಾಡಿದ್ದಾರೆ. ವಾರ್ಷಿಕೋತ್ಸವಕ್ಕೆ ಅತ್ಯಂತ ಸೂಕ್ತವಾದ ಹೆಸರು ಇಟ್ಟಿದ್ದಾರೆ ಎಂದರು.

      ಈ ಕಾರ್ಯಕ್ರಮದ ಧ್ಯೇಯ ಮತ್ತು ಉದ್ದೇಶ ಸಮಾಜಕ್ಕೆ ಮಾದರಿಯಾಗಿದೆ. ದೊಡ್ಡ ನಗರಗಳಲ್ಲಿ ಈ ರೀತಿಯ ಧ್ವನಿ-ಬೆಳಕು ಕಾರ್ಯಕ್ರಮ ನಡೆಯುತ್ತದೆ. ಹರಿಹರದಲ್ಲಿ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿರುವುದು ತುಂಬಾ ಶ್ಲಾಘನೀಯವಾದುದು. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮರಿಯಾ ನಿವಾಸ ಶಾಲೆಯ ಎಲ್ಲಾ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸುವುದಾಗಿ ತಿಳಿಸಿದರು.

      ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಸಿಇಒ ನಾಗೇಂದ್ರ ಮಾತನಾಡಿ, ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ತುಂಬುವ ಕುಟುಂಬೋತ್ಸವದಂತಹ ಕಾರ್ಯಕ್ರಮಗಳು ಕುಟುಂಬಗಳನ್ನು ಒಗ್ಗೂಡಿಸುತ್ತವೆ. ಕುಟುಂಬ ವ್ಯವಸ್ಥೆ ಸರಿಯಿದ್ದರೆ ಮಾತ್ರ ಮಕ್ಕಳು ಸರಿಯಿರುತ್ತಾರೆ. ಅದರಿಂದಲೇ ಸ್ವಾಸ್ಥ್ಯ ಸಮಾಜ ಸಾಧ್ಯ ಎಂದರು.

      ವಾರ್ಷಿಕೋತ್ಸವವನ್ನು ಕುಟುಂಬೋತ್ಸವ ಎಂಬ ಶೀರ್ಷಿಕೆ ಅಡಿ ಮಕ್ಕಳಲ್ಲಿ ಹೊಸ ಚೈತನ್ಯ ತುಂಬುತ್ತಿರುವುದು ಸಮಂಜಸವಾಗಿದೆ. ನೈತಿಕತೆ, ಮಾನವೀಯ ಮೌಲ್ಯಗಳಿಂದ ಮಕ್ಕಳು ಸುಂದರ ಬದುಕು ಕಟ್ಟಿಕೊಳ್ಳಬಹುದು. ಮುಂದಿನ ಪೀಳಿಗೆಯ ಬೆಳವಣಿಗೆ ಬಗ್ಗೆ ನಾವೆಲ್ಲಾ ಅತ್ಯಂತ ಜವಾಬ್ದಾರಿಯಿಂದ ಚಿಂತಿಸಬೇಕಿದೆ ಎಂದರು.

      ಮರಿಯಾ ನಿವಾಸ ಶಾಲೆಯಲ್ಲಿ ವ್ಯಾಸಂಗ ಮಾಡಿ ಎಂಬಿಬಿಎಸ್ ಪದವಿಗಳಿಸಿ ಹರಿಹರದ ಇಎಸ್‍ಐ ಆಸ್ಪತ್ರೆಯಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಪ್ರೀತಿ ಜೆನಿಫರ್ ಮಾತನಾಡಿ, ನಾನು ಮುಂದೆ ಬರಲು ಈ ಶಾಲೆಯ ಶಿಕ್ಷಕ ಸಿಬ್ಬಂದಿ ನನಗೆ ಉತ್ತಮ ಬುನಾದಿ ಹಾಕಿದ್ದೇ ಹಾಕಿರುವ ಕಾರಣ, ನಾನು ಉನ್ನತ ಹುದ್ದೆ ಗಳಿಸಲು ಈ ಶಾಲೆಯಲ್ಲಿನ ಸಾಂಸ್ಕೃತಿಕ ವಾತಾವರಣ ಸಹಾಯ ಮಾಡಿತು ಎಂದರು.

      ನಾನು ನನ್ನ ಜೀವನದ ಕೊನೆಯ ಉಸಿರು ಇರುವವರೆಗೂ ಮರಿಯಾ ನಿವಾಸ ಶಾಲೆಯನ್ನು ಮರೆಯುವಂತಿಲ್ಲ. ನೀವೂ ಕೂಡಾ ಒಳ್ಳೆಯ ಹೆಸರು ಗಳಿಸಿ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಸಾಧನೆ ಮಾಡಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

      ಸಮಾರಂಭದ ಅಧ್ಯಕತೆವಹಿಸಿದ್ದ ಶಿವಮೊಗ್ಗದ ಬಿಷಪ್ ಡಾ.ಫ್ರಾನ್ಸಿಸ್ ಸೆರಾವೋ ಮಾತನಾಡಿ, ಕುಟುಂಬೋತ್ಸವ ವಿಶೇಷ ಹಬ್ಬದ ವಾತಾವರಣ ಇಲ್ಲಿದೆ. ಈ ಶಾಲೆಯಲ್ಲಿ ಗುಣಮಟ್ಟದ ವಿದ್ಯಾಭ್ಯಾಸ ದೊರಕುತ್ತಿದೆ. ಈ ಕಾರ್ಯಕ್ರಮವನ್ನು ವೀಕ್ಷಿಸಿ ತುಂಬಾ ಸಂತೋಷವಾಗುತ್ತಿದೆ. ಇದಕ್ಕೆಲ್ಲಾ ಕಾರಣರಾದ ಸಿಸ್ಟರ್ ಎಲಿಜಬತ್ ಮತ್ತು ಸಿಸ್ಟರ್ ಅಮಲಾ ಮತ್ತು ಶಿಕ್ಷಕ ಸಿಬ್ಬಂದಿಯನ್ನು ಅಭಿನಂದಿಸಿದರು.

      ತಾಯಿ ಮೊದಲ ಗುರು ಇದರ ಜೊತೆಗೆ ತಂದೆಯ ಜವಾಬ್ದಾರಿ ಇರುತ್ತದೆ. ತಂದೆ-ತಾಯಿಯರ ಸಂಬಂಧಗಳನ್ನು ತಿಳಿಸುವುದೇ ಮಗುವಿಗೆ ಮೊದಲ ಪುಸ್ತಕ. ತಾಯಿಯ ತೊಡೆಯೇ ಮಗುವಿಗೆ ಮೊದಲ ಬೆಂಚು. ತಂದೆ-ತಾಯಿಯರ ಗುಣ, ಸಾಂಸ್ಕøತಿಕ ಹಿನ್ನಲೆ, ವಿದ್ಯಾಭ್ಯಾಸ, ಮನೆಯ ವಾತಾವರಣ ಎಲ್ಲವೂ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಕುಟುಂಬ ವ್ಯವಸ್ಥೆ ಸರಿ ಇರಬೇಕು ಎಂದರು.

      ಧರ್ಮಗುರು ಡಾ.ಅಂತೋನಿ ಪೀಟರ್, ಸಿಸ್ಟರ್ ಅಮಲಾ,. ಸಿಸ್ಟರ್ ಎಲಿಜಬತ್, ಡಿ.ಫ್ರಾನ್ಸಿಸ್, ಮರಿಯಾ ನಿವಾಸ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ