ದಾವಣಗೆರೆ:
ಬಾಕಿ ಇರುವ ವೇತನ ಅನುದಾನ ಬಿಡುಗಡೆ ಮಾಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ನೇತೃತ್ವದಲ್ಲಿ ಗ್ರಾ.ಪಂ. ನೌಕರರು ಸೋಮವಾರ ಜಿಲ್ಲಾ ಪಂಚಾಯತ್ ಚಲೋ ನಡೆಸಿದರು.
ನಗರದ ವಿಮಾನ ಮಟ್ಟಿಯ ಲೋಕಿಕೆರೆ ಕ್ರಾಸ್‍ನ ಶ್ರೀ ಗಣೇಶ ದೇವಸ್ಥಾನದ ಬಳಿಯಿಂದ ಪಾದಯಾತ್ರೆಯ ಮೂಲಕ ಜಿಲ್ಲಾ ಪಂಚಾಯತ್ ಚಲೋ ನಡೆಸಿದ ಗ್ರಾ.ಪಂ. ನೌಕರರು, ಜಿಪಂ ಕಚೇರಿಗೆ ತೆರಳಿ ಗ್ರಾ.ಪಂ. ನೌಕರರ ಬಗ್ಗೆ ತಾತ್ಸಾರ ವಹಿಸಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಜಿ.ಪಂ. ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಕೆ.ಎಂ.ಉಮೇಶ್, ನಮ್ಮ ಸಂಘದ ಹೋರಾಟದ ಫಲವಾಗಿ ಮೊದಲು, ಗ್ರಾಮ ಪಂಚಾಯಿತಿಯಲ್ಲಿಯೇ ಸಂಗ್ರಹ ಆಗುವ ಕರದಲ್ಲಿ ವೇತನ ಪಡೆಯುತ್ತಿದ್ದ ಗ್ರಾಮ ಪಂಚಾಯತ್ ನೌಕರರು 2018ರಿಂದ ಸರ್ಕಾರದಿಂದ ನೇರವಾಗಿ ವೇತನ ಪಡೆಯಲು ಸಾಧ್ಯವಾಗಿದೆ. ಆದರೆ, ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಕಳೆದ ಆರು ತಿಂಗಳಿನಿಂದ ಗ್ರಾ.ಪಂ. ನೌಕರರಿಗೆ ವೇತನ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.
ಗ್ರಾಮ ಪಂಚಾಯತ್‍ಗಳಲ್ಲಿ ಕೆಲಸ ಮಾಡುತ್ತಿರುವ ಬಿಲ್ ಕಲೆಕ್ಟರ್, ನೀರು ಗಂಟಿ, ಕಂಪ್ಯೂಟರ್ ಆಪರೇಟರ್ ಸೇರಿದಂತೆ ಇತರೆ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಗ್ರಾ.ಪಂ. ನೌಕರರಿಗೆ ಪ್ರತಿ ವರ್ಷವು 830 ಕೋಟಿ ವೇತನ ಅನುದಾನ ಬೇಕಾಗಿದೆ. ಆದರೆ, ವೇತನಕ್ಕಾಗಿ ಕಳೆದ ವರ್ಷ ನಿಗದಿಯಾಗಿದ್ದ ವೇತನ ಅನುದಾನ 312 ಕೋಟಿ ರೂ.ಗಳನ್ನು ರೈತರ ಸಾಲ ಮನ್ನಾದ ನೆಪ ಹೇಳಿ ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ ಗ್ರಾ.ಪಂ. ನೌಕರರು ಕಳೆದ ಆರು ತಿಂಗಳುಗಳಿಂದ ವೇತನ ಇಲ್ಲದೇ, ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಕ್ಷಣವೇ ಗ್ರಾ.ಪಂ. ನೌಕರರ ವೇತನ ಅನುದಾನ ಬಿಡುಗಡೆ ಮಾಡಬೇಕು. ಅಪರ ಕಾರ್ಯದರ್ಶಿ ಸ್ವಾಮಿಯವರ ವರದಿಯಂತೆ, ಎಲ್ಲ ನೌಕರರನ್ನು ಏಕಕಾಲಕ್ಕೆ ಅನುಮೋದನೆ ನೀಡಬೇಕು. ಬಿಲ್ ಕಲೆಕ್ಟರ್ ಹುದ್ದೆಯಿಂದ ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗೆ ಬಡ್ತಿ ನೀಡಬೇಕು.
ಇಎಫ್‍ಎಂಎಸ್ ಸೇರದಿರುವ ನೌಕರರನ್ನು ಪಂಚತಂತ್ರದಲ್ಲಿ ಸೇರಿಸಬೇಕು. ನೆನೆಗುದಿಗೆ ಬಿದ್ದ ಸೇವಾ ನಿಯಮಾವಳಿ ರಚಿಸಬೇಕು. ನಿವೃತ್ತಿ ವೇತನ, ಗಳಿಕೆ ರಜೆ, ವಾರಕ್ಕೊಂದು ವೇತನ ಸಹಿತ ರಜೆ, ವೈದ್ಯಕೀಯ ವೆಚ್ಚ ಸರ್ಕಾರಿ ನೌಕರರಿಗೆ ನೀಡುವಂತೆ ಗ್ರಾಪಂಗಳ ಎಲ್ಲಾ ನೌಕರರಿಗೂ ವಿಸ್ತರಿಸಬೇಕು. ಪವಿತ್ರಾ ಕೇಸ್‍ನಲ್ಲಿ ಸುಪ್ರೀಂ ಕೋರ್ಟ್‍ಗೆ ತೀರ್ಪು ಬಂದಿದ್ದರಿಂದ ಪಿಡಿಓ ಬಡ್ತಿ, ಗ್ರೇಡ್ 4 ಬಡ್ತಿ ನೀಡಿ ಖಾಲಿಯಾದ ಗ್ರೇಡ್ 2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗೆ ನೇಮಕಾತಿ ಮಾಡುವಂತಾಗಬೇಕು. ಕ್ಲರ್ಕ್, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್‍ಗಳನ್ನು ಬಡ್ತಿಗೆ ಪರಿಗಣಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಗ್ರಾ.ಪಂ. ನೌಕರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಮುಖಂಡರಾದ ಎಸ್.ಸಿ.ಶ್ರೀನಿವಾಸಾಚಾರ್, ಆರ್.ಎಸ್.ಬಸವರಾಜ, ಸಿ.ಎಂ.ಚೇತನ್, ಭೀಮಾನಾಯ್ಕ, ಹನುಮಂತಪ್ಪ, ಗುಡಾಳ್ ತಿಪ್ಪಣ್ಣ, ಬೇತೂರು ಬಸವರಾಜ, ಬಾತಿ ರಾಜು, ಎಸ್.ಓಂಕಾರಪ್ಪ, ಕರಿಬಸಪ್ಪ, ಅತ್ತಿಗೆರೆ ತಿಪ್ಪೇಶ, ಚನ್ನಗಿರಿಯ ಕೃಷ್ಣಮೂರ್ತಿ, ಭೀಮಾನಾಯ್ಕ, ಎಸ್.ಓಂಕಾರಪ್ಪ, ಸಿ.ಎಂ.ಚೇತನ್, ಪ್ರಸನ್ನ, ಗೋವಿಂದರಾಜ, ಮಂಜುನಾಥ, ಜಗಳೂರಿನ ಸಂಪತ್ ಕುಮಾರ, ಹೇಮಣ್ಣ, ಶ್ರೀನಿವಾಸ ದೇವಿಕೆರೆ, ಮಾಲತೇಶ, ನಾಗರಾಜ, ಟಿ.ಮಾಲತೇಶ, ಹರಿಹರದ ಹನುಮಂತಪ್ಪ, ಉಮೇಶ, ಹೊನ್ನಾಳಿಯ ಶೇಖರಪ್ಪ ಮತ್ತಿತರರು ಭಾಗವಹಿಸಿದ್ದರು.