ವ್ಯಥೆ-ಕಥೆ

0
102
ಅಜ್ಜ ಅಜ್ಜ ಮೊದ್ಲು ನನ್ನ ವ್ಯಥೆ ಕೇಳಜ್ಜಾ

ಆಮ್ಯಾಗೆ ನಿನ್ನ ಬಾಳಿನ ಕಥೆ ಹೇಳಜ್ಜಾ
ನಾ ಕೆಜಿ ಕೆಜಿ ಭಾರ ಹೊತ್ತು ಮನಿಗೆ ಬರ್ವಾಗ ಸುಸ್ತು
ಸಾಲದೆಂಬಂತೆ ಹೊಂ ವರ್ಕ್, ಟ್ಯೂಷನ್ ಗಳಿಗೆ ಬೆಸ್ತು
ಕಂತೆ ಕಂತೆ ಬುಕ್ಸ್ ಓದಿ ಉರು ಹೊಡದು ಬರದು
ಹೆಚ್ಚ ಅಂಕ ಗಳಿಸಿದ್ರೆ ನಾ ಭಾರಿ ಬುದ್ಧಿವಂತ ಅಂತೆ
ಲಕ್ಷ ಲಕ್ಷ ಸಂಬಳ ತಗಳೋ ದೊಡ್ಡ ಕೆಲಸ
ಗಿಟ್ಟಿಸಿಕೊಂಡ್ರೆ ಅದೇ ದೊಡ್ಡ ಸಾಧನೆ ಅಂತೆ
ನಮ್ಮಪ್ಪ ಹೇಳವ್ನಾ ..ಮಗಾ ಈ ಜಗತ್ತಿನ ವೇಗಕ್ಕೆ
ಹೆಜ್ಜೆ ಹಾಕ್ತಾ ಓಡ್ಲಿಲ ಅಂದ್ರೆ ಹಿಂದೆ ತಳ್ಬಿಡುತೆ ಕಣ್ಲಾ
ಸುತ್ತಮುತ್ತ ಇರೋ ಜಗತ್ತಿನ ಜೊತೆ ಬೆರೆಯೋದ  ಬಿಟ್ಟು
ನಾ ಹೆಂಗ್ ಓಡೋಣ ನೀನೇ ಹೇಳೋ ಅಜ್ಜಾ

Image result for ಬದುಕು


ಏನಂತಾ ಹೇಳ್ಲಿ ಮಗುವೆ  ಆ ಸಿಹಿಕಹಿಯ ನಲಿವಾ
ಆಡಂಬರದ ಬದುಕಿಲ್ದಿದ್ರೂ ಸಂಯಮದ ಬದುಕಿತ್ತು
ಮನಸಾರೆ ಆಡ್ಕೊಂಡು ಊರೆಲ್ಲಾ ಸುತ್ಕೊಂಡು
ತುಂಬಿದ ಮನಿಯೊಳಗ ಎಲ್ಲರೊಂದೊಳಗಾಗಿ ಬೆಳುದ್ವಿ
ಹಾರೋ ಹಕ್ಕಿ,ಅರಳೋ ಹೂ,ಬೀಳೋ ಮಳೆರಾಯ
ಗಿಡಮರ ನೋಡನೋಡ್ತಾನೆ ಪರಿಸರಪಾಠ ಕಲಿತ್ವಿ
ಆಟೋಟ ನಾಟಕ ಹಬ್ಬ ಸರ್ಕಸ್  ಅಂದ್ರಾ
ಮನಸು ಹಾರಾಡ್ತಿತ್ತೋ ಕೈಕಾಲು ಕುಣಿತಿತ್ತೋ
ಕಲ್ಲೇ ದೇವರ ಹಾಳುಮಂಟಪದ ಮ್ಯಾಗೆ ಕುತ್ಕೊಂಡು  
ಈರುಳ್ಳಿ ಉಪ್ಪು ಬೆಲ್ಲದ ಜೊತೆ ಹುಣಸೆಕಾಯಿ ಕಿತ್ಕೊಂಡು
ಗುಂಡಕಲ್ಲಲ್ಲಿ ರುಬ್ಬಿ ಕಡ್ಡಿ ಸಿಗಸಕೊಂಡು ಸವಿತಿದ್ರೆ
ಈಗಿನ ಲಾಲಿಪಪ್ಪು ಅದ್ರ ಮುಂದೆ ಬೆಪ್ಪು
ಹಬ್ಬದಾಗೆ ಸಂಸ್ಕೃತಿ ಸಂಪ್ರದಾಯಗಳ ಮೆರವಣಿಗೆ
ಹನುಮನ ಗುಡಿಯ ಭಜನೆ, ವೀರಭದ್ರನ ವೀರಗಾಸೆ ಆಗಾಗ್ಗೆ
ಅನ್ನ ಬೆಳೀಯೋ ರೈತ,ಕಮ್ಮಾರ ,ಕುಂಬಾರ,ಬಡಗಿ
ಇವರನ ನೋಡ ನೋಡ್ತಾನೆ ಬದುಕೋದ ಕಲಿತ್ವಿRelated image
ಕಟ್ಪೆ, ಕಪಿಲೆ, ದಿನ್ನೆಗಳ ಹೊಲದಾಗೆ ಶೇಂಗಾ ನವಣೆ ರಾಗಿ
ಬೆಳುದ್ವಿ, ಜೊತೆಗೆ ನಾವೂನೂ ಬೆಳುದ್ವಿ,
ರಾಗಿ ಅಂಬಲಿ ಕುಡ್ಕೊಂಡು ಭೂಮ್ತಾಯಿ ನಂಬ್ಕೊಂಡು
ಕಷ್ಟ ಇದ್ರೂನೂ ಅಳುಕದಂಗೆ ಜೀವನ  ಸಾಗುಸ್ತಿದ್ವಿ
ಊರಾಗ ಹತ್ತಾರು ಜಾತಿ ಇದ್ರೂ ಸಣ್ಣ ಜಗಳ ಆದ್ರೂ
ಅಣ್ತಮ್ಮ ನೆಂಟ ಅಂದ್ಕೋತಾ ಕೆಲಸ ಮಾಡ್ಕೋಡ್ತಿದ್ವಿ
ಬದುಕಾಕೆ ಹೆಚ್ಚು ಕಾಸು ಬೇಕಿರ್ಲಿಲ.ಬೆಳೆದಿದ್ದ ತಿಂತಿದ್ವಿ
ಸರಳವಾಗಿ ಜೀವಿಸ್ತಿದ್ವಿ. ಜನಪದದಲ್ಲಿ ಮೈಮರೀತಿದ್ವಿ
ನನ್ನ ಹಾರೈಕೆ ಇಷ್ಟೇ ಮಗುವೇ…
ಪ್ರೀತಿ ಸ್ನೇಹ ಆತ್ಮಗೌರವದಿ ಬದುಕೋ
ಕಾಯಕ ಮಾಡ್ಕೋತಾ ಒಂದೊಳ್ಳೆ ಬಾಳ್ವೆ ಕಟ್ಕೋತಾ
ಹಿತಮನುಷ್ಯನಾಗಿ ಬಾಳೋ ಕಂದಾ..
ಅದೇ ನಿನ್ನ ಜೀವನದ ಅಂದ ಆನಂದಾ..
                                           
                                          –ಡಿ ಜಿ ನಾಗರಾಜ್ ಹರ್ತಿಕೋಟೆ
ಹರ್ತಿಕೋಟೆ ಅಂಚೆ
ಹಿರಿಯೂರು ತಾಲುಕು
ಚಿತ್ರದುರ್ಗ ಜಿಲ್ಲೆ-577545
ಮೊಬೈಲ್ 9480160728

LEAVE A REPLY

Please enter your comment!
Please enter your name here