ವ್ಯರ್ಥವಾಗುತ್ತಿರುವ ಆಹಾರ : ಇರಲಿ ಎಚ್ಚರ

ತುಮಕೂರು :

      ಮದುವೆ, ನಾಮಕರಣ, ಗೃಹ ಪ್ರವೇಶ ಹೀಗೆ ವಿವಿಧ ರೀತಿಯ ಔತಣಕೂಟಗಳಲ್ಲಿ ಭಾಗಿಯಾಗಿ ಅಲ್ಲಿನ ದೃಶ್ಯಗಳನ್ನು ಒಮ್ಮೆ ಕಣ್ಣಾಡಿಸಿದರೆ ಊಟದ ಎಲೆಯ ಮೇಲೆ ತಿನ್ನದೆ ಉಳಿಸಿದ ಆಹಾರ ಪದಾರ್ಥಗಳೆ ಹೆಚ್ಚು ಕಂಡುಬರುತ್ತವೆ. ಸಭೆ ಸಮಾರಂಭಗಳ ಊಟೋಪಚಾರದ ಆತಿಥ್ಯದ ಸಂದರ್ಭಗಳಲ್ಲಿ ಇದೊಂದು ಸಹಜ ಪ್ರಕ್ರಿಯೆಯಾಗಿದೆ.

    ಬಡಿಸಿದ್ದೆಲ್ಲವನ್ನೂ ತಿಂದರೆ ಹೊಟ್ಟೆಬಾಕ ಎನ್ನುತ್ತಾರೆ ಎಂತಲೋ, ಪ್ರೆಸ್ಟೀಜ್‍ಗೋಸ್ಕರವೋ, ಇತರರು ಬಿಡುತ್ತಾರೆ ನಾನೂ ಬಿಡಬೇಕು ಎಂಬ ಅನುಕರಣೆಯೋ, ಸಿರಿವಂತಿಕೆಯ ಅಹಮಿಕೆಯೋ… ಒಂದಲ್ಲಾ ಒಂದು ಕಾರಣಗಳಿಂದ ಎಲೆಯಲ್ಲಿ ಊಟ ಬಿಡುತ್ತಿರುವವರ ಸಂಖ್ಯೆ ಅಧಿಕವೇ ಇದೆ. ಊಟದ ಪಂಕ್ತಿಗಳಲ್ಲಿ ಸಂಪೂರ್ಣ ಊಟ ಖಾಲಿ ಮಾಡುವವರ ಸಂಖ್ಯೆ ತೀರಾ ವಿರಳ. ಎಷ್ಟು ಬೇಕೋ ಅಷ್ಟು ಮಾತ್ರ ಬಡಿಸಿಕೊಳ್ಳುವ ಮನಸ್ಥಿತಿಗಳೇ ಇಲ್ಲ.

    ಕಾಲ ಬದಲಾದಂತೆ ಮನುಷ್ಯರಿಗೆ ನಾನಾ ರೀತಿಯ ರೋಗಗಳು ಅಂಟಿಕೊಳ್ಳುತ್ತಿವೆ. ಇವುಗಳಲ್ಲಿ ಬಿ.ಪಿ., ಷುಗರ್ ಸಾಮಾನ್ಯ ಕಾಯಿಲೆಯಾಗಿವೆ. ಸಿಹಿ ಪದಾರ್ಥ ತಿನ್ನುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಸಿಹಿ ಬೇಡ ಎಂದು ಹೇಳದೆ, ಬಡಿಸುವ ತನಕ ಸುಮ್ಮನಿದ್ದು, ಬೇಕಾದಷ್ಟು ಮಾತ್ರವೇ ತಿಂದು ಎದ್ದು ಹೋಗುತ್ತಾರೆ. ಸಿಹಿ ಪದಾರ್ಥಗಳು ಸೇರಿದಂತೆ ಅನ್ನವೂ ಎಲೆಯಲ್ಲಿ ಇರುತ್ತದೆ. ಒಂದು ಪಂಕ್ತಿಯಲ್ಲಿ ಮಿಕ್ಕುಳಿದಿರುವ ಅನ್ನವನ್ನು ಗುಡ್ಡೆ ಹಾಕಿದರೆ ಅಷ್ಟರಲ್ಲಿಯೇ ಹತ್ತಾರು ಜನರಿಗೆ ಊಟ ಬಡಿಸಬಹುದು.

   ಒಂದು ಕಡೆ ಒಪ್ಪೊತ್ತಿನ ಊಟ ತಿಂದು ಮಲಗುವವರು, ಮತ್ತೊಂದೆಡೆ ಮೂರು ಹೊತ್ತು ಬೇಕಾದಷ್ಟು ತಿಂದು ಬಿಸಾಡುವವರು, ಕೆಲವರು ಹಸಿವಿನಿಂದ ನರಳುತ್ತಿದ್ದರೆ ಮತ್ತೆ ಕೆಲವರು ಹೊಟ್ಟೆ ಬಿರಿಯುವಷ್ಟು ತಿಂದು ಉಳಿದದ್ದನ್ನು ಬಿಸಾಡುವವರು. ಹೀಗೆ ಸಮಾಜದಲ್ಲಿ ಎರಡೂ ರೀತಿಯ ಜನರನ್ನು ನಾವು ಕಾಣುತ್ತೇವೆ. ದಿನಕ್ಕೆ ಎರಡು ಹೊತ್ತು ಊಟಕ್ಕಾಗಿಯೇ ಶ್ರಮಿಸುವ ಮಂದಿ ನಮ್ಮ ನಡುವೆ ಇದ್ದಾರೆ. ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುವವರು ಇದ್ದಾರೆ. ಇನ್ನು ಕೆಲವರು ತಿಂದು ಬಿಸಾಡಿದ ಆಹಾರವನ್ನೇ ನೆಚ್ಚಿಕೊಂಡವರೂ ಇದ್ದಾರೆ.

    ಒಂದು ಅಂದಾಜಿನ ಪ್ರಕಾರ ದೇಶದಲ್ಲಿ ಪ್ರತಿವರ್ಷ 6.7 ಕೋಟಿ ಟನ್‍ಗಳಷ್ಟು ಆಹಾರ ಪದಾರ್ಥ ಪೋಲಾಗುತ್ತಿದೆ. ಇದರ ಅಂದಾಜು ಮೌಲ್ಯ 92 ಸಾವಿರ ಕೋಟಿ ರೂ.ಗಳು. ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಕೃಷಿ ವಿ.ವಿ. ಸಂಶೋಧಕರು ಅಧ್ಯಯನ ಕೈಗೊಂಡಿದ್ದರು. ಅವರು ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಪ್ರತಿವರ್ಷ ಬೆಂಗಳೂರಿನಲ್ಲಿರುವ 531 ಕಲ್ಯಾಣ ಮಂಟಪಗಳಲ್ಲಿ ಸುಮಾರು 84,960 ವಿವಾಹಗಳು ನೆರವೇರುತ್ತವೆ.

   ಅಲ್ಲಿ ಉತ್ತಮ ಗುಣಮಟ್ಟದ 943 ಟನ್ ಆಹಾರ ವ್ಯರ್ಥವಾಗುತ್ತಿದೆ. ಅದರ ಬೆಲೆ ಸರಿ ಸುಮಾರು 339 ಕೋಟಿ ರೂಪಾಯಿ. ಇದನ್ನು ವ್ಯರ್ಥವಾಗಲು ಬಿಡದೆ ಸದುಪಯೋಗಪಡಿಸಿಕೊಂಡರೆ 2 ಕೋಟಿಗೂ ಹೆಚ್ಚು ಜನರ ಹಸಿವನ್ನು ತಣಿಸಬಹುದು ಎನ್ನುತ್ತಾರೆ ಸಂಶೋಧಕರು.

   ಭಾರತದಲ್ಲಿ ಶೇ.40 ರಷ್ಟು ಆಹಾರ ಉಪಯೋಗಕ್ಕೆ ಬಾರದೆ ಅನುಪಯುಕ್ತವಾಗಿ ಕಸ ಸೇರುತ್ತಿದೆ. ಪ್ರತಿದಿನ ಒಬ್ಬ ವ್ಯಕ್ತಿ 137 ಗ್ರಾಂ ಆಹಾರವನ್ನು ವ್ಯರ್ಥ ಮಾಡುತ್ತಿದ್ದಾನೆಂದು ವರದಿ ಹೇಳುತ್ತದೆ. ವಾರ್ಷಿಕ 50 ಕೆ.ಜಿ.ಯಷ್ಟು ಆಹಾರವನ್ನು ಒಬ್ಬ ವ್ಯಕ್ತಿ ಸಾಧಾರಣವಾಗಿ ವ್ಯರ್ಥ ಮಾಡುತ್ತಿರುವನೆಂದು ಅಂಕಿ ಅಂಶಗಳು ತಿಳಿಸುತ್ತವೆ. ಇದು ಸಾಧಾರಣ ಮತ್ತು ಸಾಮಾನ್ಯ ಅಂಕಿ ಅಂಶ. ಇದರ ಮೇಲ್ಪಟ್ಟು ಆಹಾರ ವ್ಯರ್ಥವಾಗುತ್ತಿದೆಯೇ ಹೊರತು ಕಡಿಮೆಯಂತೂ ಇಲ್ಲ.

    ತಿನ್ನುವ ಅನ್ನಕ್ಕಾಗಿ ಪರಿತಪಿಸುವ ಜನರನ್ನು ನಿತ್ಯ ನೋಡುತ್ತೇವೆ. ಅರೆಹೊಟ್ಟೆಯಲ್ಲಿ, ಖಾಲಿ ಹೊಟ್ಟೆಯಲ್ಲಿ ನೀರು ಕುಡಿದು ಮಲಗುವ ಮಂದಿಯನ್ನು ಕಾಣುತ್ತೇವೆ. ನಗರ ಪ್ರದೇಶಗಳಲ್ಲಿನ ಚಿತ್ರಣವನ್ನೇ ಗಮನಿಸಿದರೆ ಇಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುವವರು, ಹೊರ ಜಿಲ್ಲೆ, ರಾಜ್ಯಗಳಿಂದ ಬಂದು ಕೆಲಸ ಕಾರ್ಯ ಮಾಡುತ್ತಿರುವವರು, ಕಟ್ಟಡ ಕಾರ್ಮಿಕರು, ಜೀವನ ನಿರ್ವಹಣೆಗೆ ಎಷ್ಟು ಸಾಹಸ ಪಡುತ್ತಿದ್ದಾರೆ ಎಂಬುದನ್ನು ಗಮನಿಸಿದರೆ ಸಾಕು.

    ಅಷ್ಟೇ ಏಕೆ ಸಾಕಷ್ಟು ಮಂದಿ ಬಡವರು, ಮಧ್ಯಮ ವರ್ಗದವರೂ ಕೂಡ ಅನ್ನದ ಕಷ್ಟವನ್ನು ಅನುಭವಿಸುತ್ತಿದ್ದಾರೆ. ಮನೆಯಲ್ಲಿ ಕಷ್ಟ ಇದ್ದರೂ ಹೊರಗೆ ಹೋದಾಗ ಮಾತ್ರ ಆಡಂಬರದ ಅನುಕರಣೆಗೆ ಮುಂದಾಗುತ್ತಿರುವುದು ಅತ್ಯಂತ ಶೋಚನೀಯ ಸಂಗತಿ.

   ನಾವು ಸೇವಿಸುವ ಆಹಾರದ ಹಿಂದೆ ಹತ್ತಾರು ಮಂದಿಯ ಶ್ರಮ ಇರುತ್ತದೆ. ಈ ಶ್ರಮ ಏನೆಂಬುದು ಬೆಳೆಗಾರನಿಗೆ ಮಾತ್ರವೇ ಗೊತ್ತು. ರೈತ ಉತ್ಪಾದಿಸುತ್ತಾನೆ, ದಲ್ಲಾಳಿಗಳು ಕೊಳ್ಳುತ್ತಾರೆ, ವರ್ತಕರು ಮಾರಾಟ ಮಾಡುತ್ತಾರೆ. ಸಂಸ್ಕರಣೆಯಾಗುತ್ತದೆ. ಸಾಗಾಟ, ಶ್ರಮ, ವಿತರಣೆ ಇವೆಲ್ಲವನ್ನೂ ಗಮನಿಸುತ್ತಾ ಹೋದರೆ ಒಬ್ಬ ವ್ಯಕ್ತಿ ಒಂದು ದಿನಕ್ಕೆ ಊಟ ಮಾಡುವ ಅನ್ನದ ಅಗುಳಿನ ಹಿಂದೆ ಎಷ್ಟೆಲ್ಲಾ ಶ್ರಮ ಅಡಗಿರುತ್ತದೆ ಎಂಬ ಪ್ರಜ್ಞೆಯೆ ನಾಗರಿಕ ಸಮಾಜಕ್ಕೆ ಇಲ್ಲದೆ ಹೋಗಿರುವುದು ದುರಂತ.

   ಆಹಾರ ವ್ಯರ್ಥ ಮಾಡುವುದು ಪ್ರತಿಷ್ಠೆಗಾಗಿಯೋ ಅಥವಾ ತಿನ್ನಲು ಆಗುವುದಿಲ್ಲ ಎಂಬ ಕಾರಣಕ್ಕೋ ಏನೇ ಆಗಿರಲಿ, ಆದರೆ ಅದರ ಹಿಂದಿನ ಶ್ರಮವನ್ನು ಮಾತ್ರ ಮರೆಯಬಾರದು. ನಾವು ಸೇವಿಸುವ ಆಹಾರೋತ್ಪನ್ನವು ಒಂದು ಚಕ್ರದ ರೀತಿಯ ಪರಿಧಿಯನ್ನೊಳಗೊಂಡಿದೆ. ಭೂಮಿ, ನೀರು, ಗಾಳಿ ಇವೆಲ್ಲವೂ ಆಹಾರದ ಅವಲಂಬನೆಯಲ್ಲಿದೆ. ಬಳಸದ ಸಿದ್ಧಪಡಿಸಿದ ಆಹಾರ ಪರಿಸರ ಹಾನಿಯೂ ಹೌದು ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ.

  ನಾವು ವ್ಯರ್ಥ ಮಾಡುವ ಪ್ರತಿ ಆಹಾರದ ಕಣಕಣವೂ ಪರಿಸರ ನಾಶ ಮಾಡಿದಂತೆ, ನೀರನ್ನು ವ್ಯರ್ಥ ಮಾಡಿದಂತೆ ಆಗುತ್ತಿದೆ. ಇರುವ ಭೂಮಿ ಅಷ್ಟೇ ಇದೆ. ನೀರಿನ ಸಂಪತ್ತು ಕಡಿಮೆಯಾಗುತ್ತಿದೆ. ಜನಸಂಖ್ಯೆ ಮಾತ್ರ ನಾಗಾಲೋಟದಲ್ಲಿ ಸಾಗಿದೆ. ಇರುವ ಜನಸಂಖ್ಯೆಗೆ ಆಹಾರೋತ್ಪನ್ನಗಳು ಸಾಕಾಗುತ್ತಿಲ್ಲ. ಪರಿಣಾಮವಾಗಿ ಬೆಲೆಗಳು ಗಗನಕ್ಕೇರುತ್ತಿವೆ.

   ಮುಂದಿನ ದಿನಗಳು ಮತ್ತಷ್ಟು ಭಯಾನಕ ಪರಿಸ್ಥಿತಿ ಸೃಷ್ಟಿಸಬಹುದು. ಕೃಷಿ ಭೂಮಿ ಹಾಳಾಗುತ್ತಿದ್ದು, ಉದ್ಯಮ ಹಾಗೂ ಬೇರೆ ಬೇರೆ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ. ಕೃಷಿ ಸಂಕಷ್ಟದಿಂದ ರೈತರು ಆ ವೃತ್ತಿಯಿಂದಲೇ ಹೊರಬರುತ್ತಿದ್ದಾರೆ. ಇವೆಲ್ಲವೂ ಅತ್ಯಂತ ಅಪಾಯಕಾರಿ ಬೆಳವಣಿಗೆಗಳು.

   ನಮಗೆ ಬೇಕಾದ ಯಾವುದೇ ವಸ್ತುಗಳನ್ನು ಅಂಗಡಿಗಳಲ್ಲಿ ಕೊಳ್ಳಬಹುದು. ಆದರೆ ಕೃಷಿ ಉತ್ಪನ್ನಗಳು ಕ್ಷೀಣಿಸಿದರೆ ಎಲ್ಲಿಂದ ಖರೀದಿಸುವುದು. ಈ ಅಪಾಯಕಾರಿ ಬೆಳವಣಿಗೆಗಳ ಬಗ್ಗೆ ಇಂದಿನ ಪೀಳಿಗೆ ಯೋಚಿಸಬೇಕು. ಬೆಳೆಯುವ ವಿಧಾನ, ಅದರ ಕಷ್ಟ-ನಷ್ಟ ಅರಿತಾಗಲಷ್ಟೆ ಆಹಾರೋತ್ಪನ್ನಗಳ ಬೆಲೆ ತಿಳಿದೀತು. ಅಪ್ಪ ಮಾಡಿದ ಆಸ್ತಿ ಇದೆ, ಬೇಕಾದಷ್ಟು ಸಂಪಾದನೆ ಇದೆ, ತಿಂಗಳ ವರಮಾನವಿದೆ ಎಂದು ಗಂಟೆಗಟ್ಟಲೆ ಹೋಟೆಲ್‍ಗಳಲ್ಲಿ, ರೆಸ್ಟೋರೆಂಟ್‍ಗಳಲ್ಲಿ ಕಾಲ ಕಳೆಯುವ, ತಿಂದು ಬಿಸಾಕುವ ಇಂದಿನ ಪೀಳಿಗೆಗೆ ಆಹಾರದ ಬೆಲೆ ಏನೆಂಬುದು ಅರ್ಥವಾಗುತ್ತಿಲ್ಲ.

    ನಮ್ಮ ದೇಶ ಶೇ.70 ಭಾಗ ಗ್ರಾಮೀಣ ಪ್ರದೇಶದಿಂದಲೇ ಕೂಡಿದೆ. ಇಲ್ಲಿರುವವರೆಲ್ಲ ರೈತಾಪಿ ಜನಗಳೆ. ಈ ದೇಶದ ಬೆನ್ನೆಲುಬು ರೈತರು ಎಂದು ಹೇಳಲಾಗುತ್ತಿದೆ. ಆದರೆ ಅವರ ಸಂಕಷ್ಟಗಳು ಮಾತ್ರ ವರ್ಣನಾತೀತ. ತಾನು ಬೆಳೆದದ್ದನ್ನೆಲ್ಲಾ ಕಡಿಮೆ ದರಕ್ಕೆ ಮಾರುತ್ತಾರೆ. ಬೆಳೆದದ್ದರಲ್ಲಿ ಉಳಿಯುವ ಕಳಪೆ ದರ್ಜೆಯ ಆಹಾರೋತ್ಪನ್ನಗಳನ್ನು ಮಾತ್ರವೇ ತಮಗೆ ಇಟ್ಟುಕೊಳ್ಳುತ್ತಾರೆ. ಮಾರಾಟದಿಂದ ಇತರೆ ಬಾಬತ್ತುಗಳಿಗೆ ಹಣ ಸಿಗುವುದಲ್ಲ ಎಂಬ ಚಿಂತೆ ಅವರದ್ದು. ಹೊಲದಿಂದ ಮನೆಯವರೆಗೂ ಜೋಪಾನವಾಗಿ ಕಾಪಾಡಿಕೊಂಡು ಕಾಳು ತರುವ ರೈತರು ನಗರ ಪ್ರದೇಶಗಳಲ್ಲಿ ಆಹಾರ ವ್ಯರ್ಥ ಮಾಡುವವರನ್ನು ಕಂಡು ಮಮ್ಮಲ ಮರುಗುತ್ತಿದ್ದಾರೆ.

    ಆಹಾರ ವ್ಯರ್ಥವಾಗದಂತೆ ತಡೆಯಲು ನಾನಾ ಮಾರ್ಗಗಳಿವೆ. ಈ ಅರಿವು ಪ್ರತಿಯೊಂದು ಮನೆಯಿಂದಲೂ ಜಾಗೃತವಾಗಬೇಕು. ಮನೆಯಲ್ಲಿ ತಿಂದು ಉಳಿದ ಆಹಾರವನ್ನು ಕಸದ ಪಾಲು ಮಾಡದೆ ಪರ್ಯಾಯ ಮಾರ್ಗಗಳ ಬಗ್ಗೆ ಯೋಚಿಸಬೇಕು. ಅಡಿಗೆ ತಯಾರು ಮಾಡುವಾಗಲೇ ಎಷ್ಟು ಬೇಕು ಎಂಬ ಅಳತೆ ಇಟ್ಟುಕೊಳ್ಳಬೇಕು. ಒಂದು ವೇಳೆ ಮಿಕ್ಕುಳಿದರೆ ಪಕ್ಕದಲ್ಲೇ ಇರುವ ಬಡವರು, ಕೂಲಿ ಕಾರ್ಮಿಕರಿಗೆ ನೀಡಬೇಕು.

    ಮನೆಗಳಲ್ಲಿಯೂ ತಟ್ಟೆಯಲ್ಲಿ ಆಹಾರ ಬಿಡುವವರ ಸಂಖ್ಯೆ ಸಾಕಷ್ಟಿದೆ. ಮಕ್ಕಳು ಹೆಚ್ಚು ತಿನ್ನಲಿ ಎಂದು ಅಗತ್ಯಕ್ಕಿಂತ ಹೆಚ್ಚು ಬಡಿಸುವುದು, ತಮಗೆ ತಿನ್ನಲಾಗದಿದ್ದರೂ ಹೆಚ್ಚು ಬಡಿಸಿಕೊಳ್ಳುವುದು ಕೆಲವರಿಗೆ ರೂಢಿಗತವಾಗಿಬಿಟ್ಟಿದೆ. ಕೆಲವರು ವಾರಕ್ಕೊಮ್ಮೆ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿ ತಮ್ಮ ಫ್ರೀಜ್‍ನಲ್ಲಿ ಇಟ್ಟಿರುತ್ತಾರೆ. ಎಷ್ಟೋ ತರಕಾರಿ ಕೊಳೆತು ಹೋಗುತ್ತದೆ. ಕೆಲಸ ಕಾರ್ಯಗಳ ಒತ್ತಡದಲ್ಲಿ ಗಮನಿಸಲು ಸಾಧ್ಯವಾಗುತ್ತಿಲ್ಲ. ಇನ್ನು ಕೆಲವರು ತಿಂಡಿ-ತಿನಿಸು, ಊಟದ ಪದಾರ್ಥಗಳನ್ನು ಫ್ರಿಜ್‍ನಲ್ಲಿಯೇ ಬಹಳ ದಿನಗಳ ಕಾಲ ಬಿಟ್ಟು ಮರೆತಿರುತ್ತಾರೆ. ಇವೆಲ್ಲವೂ ವ್ಯರ್ಥವಾಗುವ ಆಹಾರಗಳು.

    ಇನ್ನು ಸಭೆ ಸಮಾರಂಭಗಳಲ್ಲಿ ಆಹಾರೋತ್ಪನ್ನ ಮಿಗುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ತಮ್ಮ ವ್ಯಾಪ್ತಿಯಲ್ಲಿರುವ ಅನಾಥಾಶ್ರಮಗಳನ್ನು ಸಂಪರ್ಕಿಸಬೇಕು. ಈಗ ಸಾಕಷ್ಟು ಸಂಖ್ಯೆಯಲ್ಲಿ ಅನಾಥಾಶ್ರಮ, ವೃದ್ಧಾಶ್ರಮಗಳಿವೆ. ಅಲ್ಲಿಗೆ ಆಹಾರವನ್ನು ತಲುಪಿಸಿದರೆ ಖುಷಿಯಾಗಿ ಊಟ ಸೇವಿಸುತ್ತಾರೆ. ಔತಣಕೂಟಗಳನ್ನು ಏರ್ಪಡಿಸುವ ಸಂದರ್ಭದಲ್ಲಿ ಅಂತಹ ಆಶ್ರಮಗಳ ಸಂಪರ್ಕ ಸಂಖ್ಯೆಗಳನ್ನು ಹೊಂದುವುದು ಉತ್ತಮ.

    ಅತಿ ಹೆಚ್ಚು ಆಹಾರ ಪದಾರ್ಥಗಳು ವ್ಯರ್ಥವಾಗುವ ಪ್ರಮುಖ ಸ್ಥಳಗಳೆಂದರೆ ಮದುವೆ ಮತ್ತು ಇತರೆ ಸಾಮೂಹಿಕ ಸಮಾರಂಭಗಳು. ಸಾಮಾನ್ಯವಾಗಿ ಮದುವೆಗಳಲ್ಲಿ ವಿವಿಧ ಬಗೆಯ ಭಕ್ಷ್ಯಗಳು ಇರುವ ಕಾರಣ ಅಗತ್ಯಕ್ಕಿಂತ ಹೆಚ್ಚಿನ ಆಹಾರವನ್ನು ಸೇವಿಸಲು ಸಾಧ್ಯವಾಗದು. ಆದರೆ ತಟ್ಟೆ ತುಂಬಾ ಆಹಾರ ಪದಾರ್ಥಗಳು ಇರುತ್ತವೆ. ಎಲ್ಲವನ್ನೂ ತಿನ್ನಲಾಗುವುದಿಲ್ಲ. ಬಹುಪಾಲು ಆಹಾರ ತಟ್ಟೆ ಅಥವಾ ಎಲೆಯಲ್ಲಿಯೇ ಉಳಿಯುತ್ತವೆ. ಒಂದು ಅಂದಾಜಿನ ಪ್ರಕಾರ ಬೆಂಗಳೂರು ಒಂದರಲ್ಲಿಯೇ ಪ್ರತಿವರ್ಷ ಸುಮಾರು 160 ಕೋಟಿ ರೂ. ಮೌಲ್ಯದ ಆಹಾರ ಮದುವೆ ಮನೆಗಳಿಂದ ವ್ಯರ್ಥವಾಗುತ್ತದೆ.

   ಬಾಯಿ ಚಪಲ, ಕಾಳಜಿ ಇಲ್ಲದ ನಡುವಳಿಕೆ, ದುಡ್ಡಿನ ಅಹಂ, ಉದ್ಧಟತನ ಮತ್ತು ಪ್ರಜ್ಞೆಯ ಕೊರತೆ ಇವು ಆಹಾರ ವ್ಯರ್ಥವಾಗಲು ಪ್ರಮುಖ ಕಾರಣಗಳು. ಊಟದ ತಟ್ಟೆಯಲ್ಲಿ ಅನ್ನ ಬಿಡಬಾರದು, ಆಹಾರ ಎಂದರೆ ದೇವರು. ಅದನ್ನು ಹಾಳು ಮಾಡಬಾರದು. ಇಂತಹ ಹಲವಾರು ಕಲ್ಪನೆಗಳು ನಮ್ಮ ಹಿರಿಯರಲ್ಲಿ ಇದ್ದವು. ಇಂದಿನ ತಲೆಮಾರಿನ ಕೆಲವರು ಇಂತಹ ಕಲ್ಪನೆಗಳಿಗೆ ಬೆಲೆ ಕೊಡುವುದಿಲ್ಲ. ಆದರೆ ಇಂತಹ ಕಲ್ಪನೆಗಳ ಹಿಂದೆ ಎಂತಹ ಉನ್ನತ ಉದ್ದೇಶವಿದೆ ಎನ್ನುವುದನ್ನು ನಾವು ಅರಿತುಕೊಳ್ಳಬೇಕು.

   ನಾವು ಉಳಿಸಿದ ಆಹಾರದಿಂದ ಊಟ ಸಿಗದಿರುವ ಜನಕ್ಕೆ ಲಾಭವಾಗಬೇಕು. ಇದು ಸಾಧ್ಯವಾದಾಗ ಮಾತ್ರ ನಾವು ಆಹಾರ ಉಳಿಸಿದ್ದಕ್ಕೆ ಹೆಚ್ಚು ಮೌಲ್ಯ ಬರುತ್ತದೆ. ಇದು ನಮ್ಮ ನಿಮ್ಮಂತಹ ಸಾಮಾನ್ಯ ಜನರಿಂದ ಮಾತ್ರ ಸಾಧ್ಯವಿಲ್ಲ. ಸರ್ಕಾರ ಹಾಗೂ ವ್ಯವಸ್ಥೆ ಇದನ್ನು ಸಾಧ್ಯವಾಗಿಸಬೇಕು.

    ಆಹಾರ ವ್ಯರ್ಥ ಮಾಡುವುದರಿಂದ ಹಲವಾರು ದುಷ್ಪರಿಣಾಮಗಳು ಉಂಟಾಗುತ್ತವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಆಹಾರೋತ್ಪನ್ನಗಳ ಕೊರತೆ, ಬೆಲೆ ಏರಿಕೆ ಮತ್ತು ಪರಿಸರ ಹಾನಿ. ತಿಂದು ಬಿಸಾಡುವ ಆಹಾರ ತ್ಯಾಜ್ಯವಾಗಿ ಪರಿವರ್ತಿತ ವಾಗುತ್ತದೆ. ದನ ಕರುಗಳು ತಿನ್ನಲಿ ಎಂದೋ ಅಥವಾ ಅಕ್ಕ ಪಕ್ಕದಲ್ಲಿ ಖಾಲಿ ಜಾಗ ಇದೆಯೆಂತಲೋ ಮಿಕ್ಕ ಆಹಾರ ಸುರಿಯಲಾಗುತ್ತದೆ. ಅದು ತ್ಯಾಜ್ಯವಾಗಿ ಪರಿವರ್ತಿತಗೊಂಡು ವಾಸನೆ ಶುರುವಾಗುತ್ತದೆ.

   ಇದರಿಂದ ಕ್ರಿಮಿಕೀಟಗಳು ಹೆಚ್ಚುವುದಲ್ಲದೆ ರೋಗ ರುಜಿನಗಳಿಗೂ ಕಾರಣವಾಗುತ್ತದೆ. ಇದೇ ತ್ಯಾಜ್ಯ ಚರಂಡಿಗಳಿಗೆ ಹರಿದು ನೀರು ಕಟ್ಟಿಕೊಳ್ಳಲು ಕಾರಣವಾಗುತ್ತದೆ. ಆಹಾರದ ತ್ಯಾಜ್ಯದೊಳಗೆ ಇತರೆ ವಸ್ತುಗಳೂ ಸೇರಿಕೊಂಡು ಯುಜಿಡಿ ಸಮಸ್ಯೆ ಉಂಟಾಗುತ್ತದೆ. ಚರಂಡಿಯಲ್ಲಿ ಕಲ್ಮಷ ಕಟ್ಟಿಕೊಳ್ಳುವುದು, ನೀರು ಸರಾಗವಾಗಿ ಹರಿಯದಂತೆ ಅಡ್ಡಿಯಾಗುವುದು, ಸುತ್ತಮುತ್ತ ವಾಸನೆ ಉಂಟಾಗುವುದು, ಒಟ್ಟಾರೆ ಪರಿಸರ ಅನೈರ್ಮಲ್ಯ ಇಲ್ಲಿಂದಲೇ ಆರಂಭವಾಗುತ್ತದೆ.

     ಮನೆಗಳ ಸುತ್ತಲೂ ಎಸೆಯುವ ಆಹಾರದಿಂದ ಉಂಟಾಗುವ ವಾಸನೆ ಮತ್ತು ಕೊಳೆತವು ಅಲ್ಲಿ ವಾಸಿಸುವವರಿಗೆ ತೊಂದರೆ ಉಂಟುಮಾಡುವುದಲ್ಲದೆ ಕೊಳೆತ ಆಹಾರದಿಂದಾಗಿ ಅನೇಕ ಬಾರಿ ಪ್ರಾಣಿಗಳ ಅನಾರೋಗ್ಯಕ್ಕೂ ಕಾರಣವಾಗುತ್ತದೆ.

    ತ್ಯಾಜ್ಯ ಹೆಚ್ಚಿತೆಂದರೆ ಅಲ್ಲಿ ನಾಯಿ ಮತ್ತು ಹಂದಿಗಳ ಕಾಟ ಶುರುವಾಗುತ್ತದೆ. ಎಲ್ಲೆಲ್ಲಿ ಇಂತಹ ತ್ಯಾಜ್ಯ ಸಂಗ್ರಹಣೆ ಆಗುವುದೋ ಅಂತಹ ಕಡೆಗಳಲ್ಲಿಯೇ ಇವುಗಳ ಆವಾಸ ಸ್ಥಾನ ಎಂಬುದು ತಿಳಿಂiÀiದ ವಿಷಯವೇನಲ್ಲ. ಕೋಳಿ ಅಂಗಡಿಗಳು, ಮಟನ್ ಸ್ಟಾಲ್‍ಗಳವರ ನಿರ್ಲಕ್ಷ್ಯ ಇಲ್ಲಿ ಎದ್ದು ಕಾಣುತ್ತದೆ. ಹಸಿ ಮಾಂಸದ ರುಚಿ ಕಂಡುಕೊಂಡ ನಾಯಿಗಳು ಅಲ್ಲಿಯೇ ಬೀಡು ಬಿಡುತ್ತವೆ. ತ್ಯಾಜ್ಯ ಎಸೆಯುವುದನ್ನೆ ಕಾಯುತ್ತಿರುತ್ತವೆ.

    ಹಿಂಡು ಹಿಂಡಾಗಿ ಓಡಾಡುವ ನಾಯಿಗಳು ಕ್ರಮೇಣ ಮನುಷ್ಯರ ಮೇಲೂ ಎರಗುತ್ತವೆ. ಹೋಟೆಲ್‍ಗಳಿರಲಿ, ಚಿಕನ್, ಮಟನ್ ಸ್ಟಾಲ್‍ಗಳಿರಲಿ ಆಹಾರ ತಯಾರಿಕೆಯ ವಹಿವಾಟು ನಡೆಸುವ ಎಲ್ಲರೂ ಸ್ವಚ್ಛತೆಯ ಒಂದಷ್ಟು ಮಾನದಂಡ ಹೊಂದುವ ಅಗತ್ಯವಿದೆ.

   ಉಳಿದ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಎಸೆಯುವುದರಿಂದ ಪರಿಸರ ಹಾನಿಗೂ ಕಾರಣವಾಗುತ್ತಿದೆ. ಪ್ಲಾಸ್ಟಿಕ್ ನಿಂದಾಗುವ ಅನಾಹುತ ತಿಳಿದೇ ಅದನ್ನು ನಿಷೇಧ ಮಾಡಲಾಗಿದೆ. ಆದರೆ ಮನೆಗಳಿಂದ ಹಿಡಿದು ಅಂಗಡಿ, ಬೀದಿ ಬದಿ ತಿನಿಸು ಮಾರುವವರು ಇವರೆಲ್ಲ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಇನ್ನೂ ಮುಂದುವರೆಸಿದ್ದಾರೆ.

   ಉಳಿಕೆ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಹಾಕಿ ಎಸೆಯುವುದರಿಂದ ಕೆಟ್ಟ ವಾಸನೆ ಬರುವುದಲ್ಲದೆ, ಪರಿಸರದ ಮೇಲೂ ದುಷ್ಪರಿಣಾಮ ಬೀರಲಿದೆ.ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯ ವಾರ್ಷಿಕ ವರದಿ ಪ್ರಕಾರ ಭಾರತದಲ್ಲಿ ಒಟ್ಟು ಜನಸಂಖ್ಯೆಯ ಶೇ.15 ರಷ್ಟು ಅಂದರೆ, 19 ಕೋಟಿ 46 ಲಕ್ಷ ಮಂದಿ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ.

   ಆಹಾರದ ಅಪೌಷ್ಟಿಕತೆಗೆ ಸಂಬಂಧಿಸಿದ ರೋಗಗಳಿಂದ ಲಕ್ಷಾಂತರ ಮಕ್ಕಳು ಸಾಯುತ್ತಿದ್ದಾರೆ. ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅನ್ನಭಾಗ್ಯ, ಶಿಶು ಆಹಾರದಂತಹ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಹಸಿವಿನ ಸಂಕಟದಿಂದ ಜನರನ್ನು ಪಾರು ಮಾಡಬೇಕು ಎಂಬುದು ಇದರ ಉದ್ದೇಶ. ಇಷ್ಟೆಲ್ಲಾ ಪರಿಸ್ಥಿತಿ ಇದ್ದರೂ ಎಲ್ಲೆಂದರಲ್ಲಿ ಆಹಾರ ಪದಾರ್ಥಗಳು ಪೋಲಾಗುವುದನ್ನು ತಡೆಯಲು ಸಾಧ್ಯವಾಗುತ್ತಿಲ್ಲ.

    ಅನ್ನಕ್ಕೆ ಅದರದ್ದೇ ಆದ ಗುಣ ವಿಶೇಷಣಗಳಿವೆ. ಆಹಾರ, ಊಟ, ಉಪಾಹಾರ ಎಂದೆಲ್ಲಾ ನಾವು ಕರೆಯಬಹುದು. ಆದರೆ ಮನುಷ್ಯನ ಜೀವಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಅನ್ನ ಮತ್ತು ನೀರನ್ನು ಬಹಳಷ್ಟು ಜನ ದೇವರಿಗೆ ಹೋಲಿಕೆ ಮಾಡಿದ್ದಾರೆ. ಅನ್ನಬ್ರಹ್ಮ ಎಂಬುದರಲ್ಲಿ ಅದೆಷ್ಟು ಅರ್ಥವಿದೆ? ಅನ್ನದಾತ ಸುಖೀಭವ ಎಂದು ಹರಸುತ್ತಾರೆ.

   ತ್ರಿವಿಧ ದಾಸೋಹಕ್ಕೆ ಪ್ರಸಿದ್ಧಿಯಾಗಿರುವ ಸಿದ್ಧಗಂಗಾ ಕ್ಷೇತ್ರಕ್ಕೆ ಭೇಟಿ ನೀಡಿದರೆ ಅಲ್ಲಿ ಬಹಳಷ್ಟು ಕಡೆ ಪ್ರಸಾದದ ಬಗ್ಗೆ ಘೋಷ ವಾಕ್ಯಗಳು ಕಂಡುಬರುತ್ತವೆ. ಒಂದು ತುತ್ತು ಅನ್ನದ ಹಿಂದೆ ಸಾವಿರಾರು ಜನರ ಶ್ರಮವಿದೆ ಎಂಬುದನ್ನು ಅಲ್ಲಿನ ಬರಹಗಳು ನಮಗೆ ತಾಕುತ್ತವೆ. ಪ್ರಸಾದ ವ್ಯರ್ಥ ಮಾಡಲು ಅಲ್ಲಿ ಅವಕಾಶ ನೀಡುವುದಿಲ್ಲ. ಮಕ್ಕಳೂ ಅಷ್ಟೆ. ಬರುವ ಯಾತ್ರಾರ್ಥಿಗಳಿಗೆ ಸೂಚನೆ ಕೊಡುತ್ತಾರೆ. ಎಷ್ಟು ಬೇಕೋ ಅಷ್ಟೂ ಹಾಕಿಸಿಕೊಳ್ಳಿ. ಆದರೆ ವ್ಯರ್ಥ ಮಾಡಬೇಡಿ ಎಂದು ದಾಸೋಹದ ಉಸ್ತುವಾರಿ ಹೊತ್ತವರು ಪದೆ ಪದೆ ಜ್ಞಾಪಿಸುತ್ತಾರೆ. ಇಂತಹ ಎಚ್ಚರಿಕೆಯ ಮಾತುಗಳು ಎಲ್ಲ ಕಡೆ ಕೇಳುವಂತಾಗಬೇಕು. ಅನ್ನದ ಮಹತ್ವ ಪ್ರತಿಯೊಬ್ಬರಿಗೂ ಅರ್ಥವಾಗಬೇಕು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap