ಸತ್ಯದ ತಿರುಚುವಿಕೆ ಪ್ರಯತ್ನ ಮಾಡಿದ್ದಾರೆ :
ಬೆಂಗಳೂರು : ಬಿಜೆಪಿಯು ಶಾಲಾ ಪಠ್ಯ ಪುಸ್ತಕದಲ್ಲಿ ಟಿಪ್ಪು ಹಾಗೂ ಹೈದರಾಲಿ ಅವರ ಪಠ್ಯ ತೆಗೆಯುತ್ತೇವೆ ಎಂದು ಜನರಿಗೆ ನಂಬಿಸಿ, ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ, ಕುವೆಂಪು ಅವರ ವಿಚಾರ ತಿರುಚುವ ಪ್ರಯತ್ನ ಮಾಡಲಾಗಿದೆ. ಬಿಜೆಪಿ ಹೇಗೆ ನಮ್ಮ ದಾರಿ ತಪ್ಪಿಸುತ್ತಿದೆ ಎಂಬುದನ್ನು ನಾವು ಅರಿಯಬೇಕು. ಎಂದು ರಾಜ್ಯಸಭಾ ಸದಸ್ಯ ಎಲ್ ಹನುಮಂತಯ್ಯ ಹೇಳಿದರು.
ನಗರದ ಕೆಪಿಸಿಸಿ ಭವನದಲ್ಲಿ ರಾಜ್ಯಸಭಾ ಸದಸ್ಯ ಎಲ್ ಹನುಮಂತಯ್ಯ ಹಾಗೂ ಮಾಜಿ ಸಚಿವ ಬಿ.ಕೆ. ಚಂದ್ರಶೇಖರ್ ಅವರ ಜಂಟಿ ಪತ್ರಿಕಾಗೋಷ್ಠಿ ನಡೆಸಿ ರಾಜ್ಯಸಭಾ ಸದಸ್ಯ ಎಲ್ ಹನುಮಂತಯ್ಯ ಮಾತನಾಡಿದರು,
ಹಿಂದೂ ಮೂಲಭೂತವಾದ ಪಠ್ಯವನ್ನು ತಯಾರು ಮಾಡುವ ನಿರೀಕ್ಷೆ ಇತ್ತು. ಆದರೆ ಸತ್ಯದ ತಿರುಚುವಿಕೆ ಪ್ರಯತ್ನ ಮಾಡಿದ್ದಾರೆ.
ನಮ್ಮ ಮಕ್ಕಳಲ್ಲಿ ಕಂದಾಚಾರಗಳನ್ನು ವಿರೋಧಿಸುವ ದೃಷ್ಟಿಕೋನಗಳು ಬರಬೇಕು. ಆದರೆ ಈಗಿನ ಪಠ್ಯದಲ್ಲಿ ಯಜ್ಞಯಾಗಾದಿಗಳ ಪುನರ್ ಪ್ರತಿಷ್ಠಾಪಿಸುವ ಕೆಲಸ ಮಾಡಲಾಗಿದೆ, 6ನೇ ತರಗತಿ ಸಮಾಜ ವಿಜ್ಞಾನ ಭಾಗ 1ರ ಹಳೆ ಪಠ್ಯದಲ್ಲಿ ಹೊಸ ಧರ್ಮಗಳ ಉದಯ ಎಂಬ ವಿಷಯವನ್ನು ಕಲಿಕೆ ಮತ್ತು ಮೌಲ್ಯಮಾಪನಕ್ಕೆ ಪರಿಗಣಿಸಬಾರದು ಎಂದು ಸರ್ಕಾರ ಆದೇಶ ಹೊರಡಿಸಿದೆ. ಹೊಸ ಪಠ್ಯದಲ್ಲಿ ಕಂದಾಚಾರಗಳ ಬಗ್ಗೆ ಸಕಾರಾತ್ಮಕವಾಗಿ ಹೇಳುವ ಪ್ರಯತ್ನ ಮಾಡಲಾಗಿದೆ.
ಈ ಪರಿಷ್ಕರಣೆ ಸ್ತ್ರೀ ವಿರೋಧಿಯಾಗಿದೆ :
ಗಂಡು ಹಾಗೂ ಹೆಣ್ಣು ಸಮಾನರು ಎಂದು ಲಿಂಗ ಸಮಾನತೆ ಬಗ್ಗೆ ನಾವು ಮಕ್ಕಳಿಗೆ ಬೋದನೆ ಮಾಡಬೇಕು. ಆದರೆ ಮಕ್ಕಳಿಗೆ 10ನೇ ತರಗತಿ ಪಠ್ಯದಲ್ಲಿ ಮಹಿಳಾ ನಿಂದನೆ ಅಂಶಗಳಿವೆ. ಬನ್ನಂಜೆ ಗೋವಿಂದಾಚಾರ್ಯರ ಪಠ್ಯವನ್ನು ತಿರುಚಲಾಗಿದೆ. ಈ ಸಿರಿಯೆಂಬ ಹೊಸ ಹೆಣ್ಣನ್ನು ಕಂಡು ಮರುಳಾಗದವರನ್ನು ನಾನು ಕಂಡಿಲ್ಲ ಎಂಬ ಪದ್ಯವನ್ನು ಸೇರಿಸಲಾಗಿದೆ. ಎಲ್ಲರೂ ಹೆಣ್ಣಿಂದ ಮೋಸ ಹೋಗುವವರೆ. ಯಾವುದೇ ಒಬ್ಬನನ್ನು ನಿವರ್ಂಚನೆಯಿಂದ ಪ್ರೀತಿಸುವುದು ಆಕೆಯ ಜಾಯಮಾನಕ್ಕೆ ಸಲ್ಲದು. ಚಂಚಲೆ, ಮೋಸ ಮಾಡುವವರು, ಅವರು ಅನೇಕರನ್ನು ಪ್ರೀತಿಸುತ್ತಾರೆ ಎಂದು ಅಪಮಾನಿಸಲಾಗಿದೆ. ಇದರ ಮೂಲ ಮನುಸ್ಮೃತಿಯಲ್ಲಿದೆ ಎಂದು ಟೀಕಿಸಿದರು.
6ನೇ ತರಗತಿ ಸಮಾಜ ವಿಜ್ಞಾನದಲ್ಲಿ ಬಸವಣ್ಣನವರು ವೈದಿಕ ಮೌಡ್ಯಾಚರಣೆಗಳನ್ನು ವಿರೋಧಿಸಿ, ದೇಹವೇ ದೇಗುಲ ಎಂಬ ವಿಚಾರಗಳು, ವಚನಕಾರರ ಅಂಶಗಳನ್ನು ಈ ಪರಿಷ್ಕರಣೆಯಲ್ಲಿ ಕೈಬಿಡಲಾಗಿದೆ. ಇದರ ಉದ್ದೇಶ ಏನು ಎಂದು ಯೋಚಿಸಿದಾಗ, ಬಸವಣ್ಣನವರನ್ನು ವಿರಶೈವ ಧರ್ಮ ಸ್ಥಾಪಿಸಿದವರು ಎಂದು ಹೇಳದೇ, ವೀರಶೈವ ಧರ್ಮ ಅಭಿವೃದ್ಧಿಪಡಿಸಿದವರು ಎಂದು ಹೇಳಲಾಗಿದೆ. ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಿಸಿದವರೇ ಹೊರತು, ವೀರಶೈವ ಧರ್ಮವನ್ನು ಅಭಿವೃದ್ಧಿ ಪಡೆಸಲಿಲ್ಲ. ಹೊಸ ಪಂಥಗಳ ಮೂಲತತ್ವಗಳನ್ನು ಕೈಬಿಡಲಾಗಿದೆ. ಬಸವಣ್ಮನವರನ್ನು ವೈದಿಕೀಕರಣ ಮಾಡುವ ಪ್ರಯತ್ನ ಮಾಡಲಾಗಿದೆ ಎಂದರು.
ಸರ್ಕಾರ ಬಸವಣ್ಣನವರ ವಿಚಾರ ಪರಿಷ್ಕರಿಸುತ್ತೇವೆ ಎಂದು ಹೇಳಿದೆಯೇ ಹೊರತು ಯಾವ ವಿಚಾರವನ್ನು ಎಂದು ಹೇಳಿಲ್ಲ. ಪಠ್ಯದಲ್ಲಿರುವ ವಿಚಾರವನ್ನು ಶಿಕ್ಷಕರು ಮಕ್ಕಳಿಗೆ ಹೇಳಬೇಕೆ ಅಥವಾ ಬಸಣ್ಣನವರ ನಿಜವಾದ ವಿಚಾರಗಳನ್ನು ಹೇಳಬೇಕೆ. ಒಂದು ವೇಳೆ ಶಿಕ್ಷಕರು ಬಸವಣ್ಣನವರ ವಿಚಾರವನ್ನು ಹೇಳಿದರೆ, ನಾಳೆ ಶಿಕ್ಷಕರ ವಿರುದ್ಧ ಪುಸ್ತಕದಲ್ಲಿ ಇರದ ವಿಚಾರ ಬೋದನೆ ಮಾಡಿರುವುದಾಗಿ ದೂರು ಕೊಟ್ಟರೆ ಶಿಕ್ಷಕರ ವಿರುದ್ಧ ಕೇಸು ದಾಖಲಾದರೆ ದೇಶದ್ರೋಹ ಅಥವಾ ಧರ್ಮ ದ್ರೋಹ ಆರೋಪದಲ್ಲಿ ಜೈಲಿಗೆ ಹೋದರೆ ಅಚ್ಚರಿ ಇಲ್ಲ.
ಇನ್ನು ನಾರಾಯಣಗುರುಗಳ ವಿಚಾರಕ್ಕೆ ಬಂದರೆ, ಅವರು ವೈದಿಕ ಸಂಸ್ಕೃತ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ್ದರು ಎಂದು ಹೇಳಲಾಗಿದೆ. ಆದರೆ ನಾರಾಯಣಗುರುಗಳು ಒಂದು ದೈವ, ಒಂದು ಜಾತಿ, ಒಂದು ಧರ್ಮ ಎಂದು ಹೋರಾಟ ಮಾಡಿದವರು. ಅಸ್ಪೃಶ್ಯತೆ ವಿರುದ್ಧ ಬಹಳ ದೊಡ್ಡ ಹೋರಾಟ ಮಾಡಿದವರು. ಅವರ ಹೋರಾಟದಲ್ಲಿ ಗಾಂಧಿಜಿ, ಪೆರಿಯಾರ್ ಅವರು ಬಂದು ಭಾಗವಹಿಸಿದ್ದರು. ಅಂತಹ ವಿಚಾರ ಬಿಟ್ಟು, ಅವರು ಪ್ರತಿಪಾದನೆ ಮಾಡದ ವಿಚಾರವನ್ನು ಇದರಲ್ಲಿ ತಿಳಿಸಲಾಗಿದೆ. ಹೀಗಾಗಿ ನಾರಾಯಣ ಗುರುಗಳ ಕುರಿತ ಹಳೆಯ ಪಾಠವನ್ನೇ ಮುಂದುವರಿಸಿ ಎಂದು ಒಥ್ತಡ ಕೇಳಿಬಂದಿದೆ.
ಇನ್ನು ಅಂಬೇಡ್ಕರ್ ಅವರ ವಿಚಾರದಲ್ಲಿ ಅವರು ಸಂವಿಧಾನ ಶಿಲ್ಪಿ ಎಂಬ ಅಂಶ ತೆಗೆದುಹಾಕಲಾಗಿದೆ. ಕೆಲವು ಹಿಂದೂ ಮೂಲಭೂತವಾದಿಗಳು ಅಂಬೇಡ್ಕರ್ ಅವರು ಕೇವಲ ಕರಡು ಸಮಿತಿ ಅಧ್ಯಕ್ಷರು, ಅವರು ಸಂವಿಧಾನ ಬರೆದಿಲ್ಲ ಎಂದು ವಾದಿಸುತ್ತಾರೆ. ಅಂಬೇಡ್ಕರ್ ಅವರೇ ಸಂವಿಧಾನ ಶಿಲ್ಪಿ ಎಂದು ಒಫ್ಪಿದ ಕೋಟ್ಯಂತರ ಜನರಿದ್ದಾರೆ. ಇದರ ಉದ್ದೇಶ ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎಂದು ಹೇಳುವುದನ್ನು ಸಹಿಸಲಾಗದೇ ಇರುವ ಮನಸ್ಥಿತಿಗಳು ಈ ಕೆಲಸ ಮಾಡಿವೆ. ಇದು ಅಪಾಯಕಾರಿ. ರಾಜ್ಯ ವಿದ್ವಾಂಸರುಗಳನ್ನು ಅನುಮಾನದಿಂದ ನೋಡುವ ಸ್ಥಿತಿ ಬಂದಿದೆ.
ಇನ್ನು ಪಠ್ಯ ಪುಸ್ತಕದಲ್ಲಿ ಹಿಂದೂಗಳ ಮೇಲೆ ನಡೆದ ಹತ್ಯಾಕಾಂಡವನ್ನು ಮಕ್ಕಳ ಪಠ್ಯದಲ್ಲಿ ಸೇರಿಸಬೇಕು ಎಂಬ ಒತ್ತಡ ಹಾಕಲಾಗಿದೆ. ಅನೇಕ ಬೌದ್ಧ ಸ್ತೂಪಗಳನ್ನು ಶಂಕರಾಚಾರ್ಯರು ಒಢೆದು ಹಾಕಿದ್ದಾರೆ ಎಂದು ಸೇರಿಸಬೇಕಲ್ಲವೇ? ಮುಸಲ್ಮಾನರು, ಕ್ರೈಸ್ತರು ತಮ್ಮ ಮೇಲೆ ನಡೆದಿರುವ ದೌರ್ಜನ್ಯವನ್ನು ಪಠ್ಯದಲ್ಲಿ ಸೇರಿಸಿ ಎಂದು ಕೇಳುವುದಿಲ್ಲವೆ. ಇವರೆಲ್ಲರನ್ನು ಬಿಟ್ಟರೂ ಹಿಂದೂಗಳಲ್ಲೇ ದಲಿತರ ಮೇಲೆ ಹಿಂದೂಗಳೇ ನಡೆಸಿರುವ ಹತ್ಯಾಕಾಂಡಗಳನ್ನು ಪಠ್ಯದಲ್ಲಿ ಸೇರಿಸಬೇಕಾಗುವುದಿಲ್ಲವೇ? ಇವರ ಪ್ರಕಾರ ಕಾಶ್ಮೀರ ಪಂಡಿತರು ಮಾತ್ರ ಹಿಂದೂಗಳೇ? ದಲಿತರು ಹಿಂದೂಗಳಲ್ಲವೇ? ಎಂದು ಪ್ರಶ್ನಿಸಿದರು.
ಆಗ ನಮ್ಮ ಪಠ್ಯಗಳು ಹತ್ಯಾಕಾಂಡಗಳ ಸರಪಳಿಯಾಗುತ್ತವೆ. ನಮ್ಮ ಮಕ್ಕಳಿಗೆ ಇದನ್ನು ಕಲಿಸಬೇಕಾ? ಇದು ಸಾಧುವಾದ ಕೆಲಸವಲ್ಲ ಎಂದು ಅನೇಕ ಕುಲಪತಿಗಳು ಹಾಗೂ ಉಪಕುಲಪತಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ರೀತಿ ಕಲಿತ ಮಕ್ಕಳು ಮುಂದೆ ಕ್ರೂರ ಪ್ರಜೆಯಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಂತಹ ಪಠ್ಯವನ್ನೇ ಮುಂದುವರಿಸುವ ದುಸ್ಸಾಹಸಕ್ಕೆ ಸರ್ಕಾರ ಮುಂದಾಗಿದೆ. ಈಗಲಾದರೂ ಅದನ್ನು ಹಿಂಪಡೆಯಬೇಕು ಎಂಬುದು ನಮ್ಮ ಬೇಡಿಕೆ.