ಬೆಂಗಳೂರು: ಸಚಿವ ಸಂಪುಟವು ಕರ್ನಾಟಕ ಆರೋಗ್ಯ ಸಂಜೀವಿನಿ ನಗದು ರಹಿತ ಚಿಕಿತ್ಸಾ ಯೋಜನೆಗೆ ಅನುಮೋದನೆ ನೀಡಿದ್ದು, ಶೀಘ್ರದಲ್ಲಿಯೇ ರಾಜ್ಯದ ಸರ್ಕಾರಿ ನೌಕರರು ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೇವೆಯನ್ನು ಪಡೆಯಬಹುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕ್ರೀಡಾ ಮತ್ತು ಸಾಂಸ್ಕೃತಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕ ಪ್ರಗತಿಪರ ರಾಜ್ಯವಾಗಿದೆ. ಸರ್ಕಾರಿ ಸೇವೆಗಳು ಸಾಮಾಜಿಕ ವ್ಯವಸ್ಥೆಯಲ್ಲಿ ಕಟ್ಟಕಡೆಯ ವ್ಯಕ್ತಿಗೂ ತಲುಪುವ ಕೆಲಸವಾಗಬೇಕು ಎಂದು ಹೇಳಿದರು.
ಸರ್ಕಾರಿ ನೌಕರರು ಸಂತೋಷದಿಂದ ಇದ್ದಾಗ ಮಾತ್ರ ರಾಜ್ಯದ ಜನರಿಗೆ ಉತ್ತಮ ಸೇವೆಗಳನ್ನು ಸಲ್ಲಿಸಲು ಸಾಧ್ಯ. ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಯನ್ನು ಪರಿಷ್ಕರಿಸಲು 7 ನೇ ವೇತನ ಆಯೋಗವನ್ನು ರಚಿಸುವಲ್ಲಿ ಯಡಿಯೂರಪ್ಪ ಪ್ರಮುಖ ಪಾತ್ರ ವಹಿಸಿದ್ದರು ಎಂದರು.
