ತುಮಕೂರು:
ನಗರದ ಶ್ರೀ ಸಪ್ತಗಿರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಅನನ್ಯ ಆರ್ ಹಾಗೂ ರಮ್ಯ ಯು ಅವರನ್ನು ಐಐಟಿ-ಗೌಹಾಟಿಯಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.
ಪ್ರತಿವರ್ಷ ಐಐಟಿ ಗೌಹಾಟಿಯಿಂದ ಆಯೋಜನೆಗೊಳ್ಳುವ ರಾಷ್ಟ್ರಮಟ್ಟದ ಟೆಕ್ನೋತೆಲಾನ್ ವಿಜ್ಞಾನ ಸ್ಪರ್ಧೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಅತ್ಯುನ್ನತ ಶ್ರೇಣಿಯನ್ನು ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ. ವಿಜ್ಞಾನದ ಕೌತುಕದ ವಿಚಾರವಾಗಿ ನಡೆಯುವ ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಅಭಿನಂದನೆಗೆ ಅರ್ಹರಾಗಿದ್ದಾರೆ.
ಈ ವಿಶೇಷ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಗೌಹಾಟಿಯ ವಿಶೇಷ ವಿಜ್ಞಾನ ಸಮ್ಮೇಳನಕ್ಕೆ ಆಹ್ವಾನಿಸಿ ಅವರಿಗೆ ಪ್ರಶಸ್ತಿ ಫಲಕದೊಂದಿಗೆ ಅಭಿನಂದಿಸಿರುವುದು ಹೆಮ್ಮೆಯ ವಿಚಾರ. ಸಮ್ಮೇಳನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಬೆಳೆಸಿದ ಕೀರ್ತಿ ಕಾಲೇಜಿಗೆ ಸಲ್ಲುತ್ತದೆ.
ವಿಶೇಷ ಸಂಪನ್ಮೂಲ ವ್ಯಕ್ತಿಗಳಾಗಿ ಎನ್‍ಎಎಸ್‍ಎದ ಖಗೋಳಯಾನಿ ಮೈಕಲ್ ಬ್ಯಾರಟ್, ಡಾ.ವಿ.ಕೆ. ಸರಸ್ವತ್, ಮಾಜಿ ನಿರ್ದೇಶಕರು, ಡಿಆರ್‍ಡಿಓ, ಜೆ.ಸತ್ಯನಾರಾಯಣ, ಛೇರ್ಮನ್ ಯುಐಡಿಎಐ, ಮರ್ಜಿ ಜಿಬವಾಲಾ, ಎನ್‍ಎಎಸ್‍ಎ ಚೀಪ್ ಇಂಜಿನಿಯರ್, ಡಾ.ದೀಪೇಂದ್ರನ್, ಪ್ರಾಜೆಕ್ಟ್ ಡೈರೆಕ್ಟರ್ ಇಸ್ರೋ ಮತ್ತು ವಾಲ್ಟ್ ಡಿಸ್ನೆ ಇವರುಗಳು ವಿದ್ಯಾರ್ಥಿಗಳ ಸಾಧನೆ ಹಾಗೂ ಕಾಲೇಜಿನ ಪ್ರೋತ್ಸಾಹವನ್ನು ಪ್ರಶಂಶಿಸಿದರು. ಸಮ್ಮೇಳನಕ್ಕೆ ಆಹ್ವಾನಿತರಾಗಿ ಭಾಗವಹಿಸಿದ್ದ ವಿದ್ಯಾರ್ಥಿಗಳು 21ನೇ ಶತಮಾನದ ಜಾಗತಿಕ ಬದಲಾವಣೆಯ ಹೊಸ ಹೊಸ ಆವಿಷ್ಕಾರಗಳು ಹಾಗೂ ತಂತ್ರಜ್ಞಾನಗಳನ್ನು ಕಣ್ತುಂಬಿಸಿಕೊಂಡರು.