ಹೊನ್ನಾಳಿ:
ತಾಲೂಕಿನ ಬಿದರಗಡ್ಡೆ ಗ್ರಾಮದ ಸಂತೋಷ್ ಬಿದರಗಡ್ಡೆ ಅವರಿಗೆ ಪ್ರಸಕ್ತ ಸಾಲಿನ ಸೂಪರ್ ಅಚೀವರ್ಸ್ ಅವಾರ್ಡ್ ಲಭಿಸಿದೆ. ಹಾವೇರಿಯ ಜನಮನ ಫೌಂಡೇಷನ್ ಸಂಸ್ಥಾಪಕಿ ಅಂಬಿಕಾ ಹಂಚಾಟೆ ಈ ಪ್ರಶಸ್ತಿ ಘೋಷಿಸಿದ್ದಾರೆ.ಸಂತೋಷ್ ಬಿದರಗಡ್ಡೆ ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ಪ್ರಸ್ತುತ ಹಾನಗಲ್ ತಾಲೂಕಿನ ದೇವರಹೊಸಪೇಟೆ ಗ್ರಾಮದ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಸೃಜನಶೀಲ ಕನ್ನಡ ಸಾಹಿತ್ಯ ಬಳಗದ ಹಾವೇರಿ ಜಿಲ್ಲಾಧ್ಯಕ್ಷ, ಕವಿವೃಕ್ಷ ಬಳಗದ ಹಾನಗಲ್ ಘಟಕದ ಗೌರವ ಸಲಹೆಗಾರ, ವಿವೇಕ ಜಾಗೃತ ಬಳಗದ ಹಾನಗಲ್ ಘಟಕದ ಸೇವಾಶ್ರೀ, ಹಾವೇರಿ ನಗರ ಶರಣ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತನ್ಮೂಲಕ ಹಾವೇರಿ ಜಿಲ್ಲೆಯ ಕವಿ ಮನಸುಗಳನ್ನು, ಯುವ ಬರಹಗಾರರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಕವಿಗೋಷ್ಠಿ, ಚಿಂತನ-ಮಂಥನ, ಉಪನ್ಯಾಸ ಕಾರ್ಯಕ್ರಮ, ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ, ಯುವ ಕವಿಗೋಷ್ಠಿ, ಚರ್ಚಾಸ್ಪರ್ಧೆಗಳನ್ನು ಏರ್ಪಡಿಸುತ್ತ ಸದಾ ಸೃಜನಶೀಲ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.
ಎಳ್ಳುಬೆಲ್ಲ, ಯಶೋಗಾಥರು, ಸೃಜನಶೀಲ ಕಾವ್ಯಸಿರಿ, ವಿವೇಕ ಕಾವ್ಯಸಿರಿ ಮತ್ತಿತರ ಕೃತಿಗಳನ್ನು ಬರೆದಿದ್ದು, “ಕ್ಷಣಹೊತ್ತು ಅನುಭವಗಳ ಮುತ್ತು” ಎಂಬ ಶೀರ್ಷಿಕೆಯ ಲೇಖನಗಳ ಕೃತಿಯನ್ನು ಪ್ರಕಟಣೆಗೆ ಅಣಿಗೊಳಿಸಿದ್ದಾರೆ. ಇವರ ಲಲಿತ ಪ್ರಬಂಧಗಳು, ಲೇಖನಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವಿವಿಧ ಪುಸ್ತಕಗಳಿಗೆ ಮುನ್ನುಡಿ, ಬೆನ್ನುಡಿ ಬರಹ ಬರೆಯುವ ಮೂಲಕ ತಾನೂ ಬೆಳೆಯುತ್ತಾ ಯುವ ಸಾಹಿತಿಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ.
“ಸಾಹಿತ್ಯ ಸಿರಿ” ರಾಜ್ಯ ಪ್ರಶಸ್ತಿ, “ಯುವಕವಿ” ಪ್ರಶಸ್ತಿ, “ರಾಜ್ಯಮಟ್ಟದ ಉತ್ತಮ ಸಂಘಟನಾ ಶಿಕ್ಷಕ” ಪ್ರಶಸ್ತಿ, “ಉತ್ತಮ ನಿರೂಪಕ” ಪ್ರಶಸ್ತಿ, ಬೆಂಗಳೂರಿನ ಕವಿವೃಕ್ಷ ಬಳಗ ನೀಡುವ “ಕವಿವೃಕ್ಷ ರಾಜ್ಯೋತ್ಸವ” ಪ್ರಶಸ್ತಿ, ಬೆಳಕು ಶೈಕ್ಷಣಿಕ ಮತ್ತು ಸಾಂಸ್ಕøತಿಕ ಟ್ರಸ್ಟ್ ವತಿಯಿಂದ ನೀಡುವ ರಾಜ್ಯಮಟ್ಟದ “ಬೆಳಕು ಕನ್ನಡದ ಕಣ್ವ” ಪ್ರಶಸ್ತಿ, “ಸಾಹಿತ್ಯ ಕಲಾ ಸಾಮ್ರಾಟ್” ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಸಂತೋಷ್ ಬಿದರಗಡ್ಡೆ ಅವರ ಸಾಹಿತ್ಯ ಸೇವೆ ಇನ್ನೂ ಎತ್ತರೆತ್ತರಕ್ಕೆ ಬೆಳೆಯಲಿ. ಕನ್ನಡಮ್ಮನ ಸೇವೆ ಸದಾ ಸಾಗಲಿ ಎಂದು ಹಿರಿಯ ಸಾಹಿತಿಗಳಾದ ಯು.ಎನ್. ಸಂಗನಾಳಮಠ, ಡಾ.ನಾ. ಕೊಟ್ರೇಶ್ ಉತ್ತಂಗಿ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಪ್ರಮುಖರು ಶುಭ ಹಾರೈಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ