ಸಮಾಜ ಸುಧಾರಣೆಯಲ್ಲಿ ಮಠಗಳ ಪಾತ್ರ ಮಹತ್ವದ್ದು ಸಚಿವ ಡಿ.ಕೆ.ಶಿವಕುಮಾರ್ ಪ್ರತಿಪಾದನೆ

 ಚಿತ್ರದುರ್ಗ:

      ಸಮಾಜ ಸುಧಾರಣೆಯಲ್ಲಿ ನಾಡಿನ ಮಠಗಳ ಪಾತ್ರ ಮಹತ್ವದ್ದು. ಅದರಲ್ಲೂ ಮುರುಘಾ ಶರಣರು ತಮ್ಮ ಸಮಾಜಮುಖಿ ಕಾರ್ಯಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

      ಮುರುಘಾಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಡಾ.ಶಿವಮೂರ್ತಿ ಮುರುಘಾ ಶರಣರು ಶರಣ ಸಂಸ್ಕತಿ ಉತ್ಸವದ ಮುಖಾಂತರ ಜನತೆಗೆ ಜ್ಞಾನ ದಾಸೋಹ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.

      ಎಲ್ಲ ಧರ್ಮದ ಆಚಾರ-ವಿಚಾರಗಳು ಒಂದೆ. ಎಲ್ಲರು ಶಾಂತಿ ಮತ್ತು ತಾಳ್ಮೆಯಿಂದ ಬಾಳಬೇಕು. ಮನುಷ್ಯತ್ವ ಮೋಕ್ಷಕ್ಕೆ ಮೂಲ. ಬಸವಣ್ಣನವರು ದಯಯೇ ಧರ್ಮದ ಮೂಲವೆಂದು ಹೇಳಿದರು. ನಮ್ಮ ಧರ್ಮವನ್ನು ಕಾಪಾಡಿಕೊಂಡು ಹೋಗಬೇಕು ಎಂದರು
ಮಠಮಾನ್ಯಗಳು ಅಕ್ಷರ, ಅನ್ನ ದಾಸೋಹದ ಕ್ರಾಂತಿಯನ್ನು ಮಾಡುತ್ತಿರುವುದು ಅಭಿನಂದನಿಯ. ನೀನು ಒಬ್ಬರಿಗೆ ಸಹಕಾರ ನೀಡಿದರೆ, ನಿನಗೆ ಸಹಕಾರ ನೀಡುವವರು ಇರುತ್ತಾರೆ. ನಾವೆಲ್ಲರು ಬಸವಣ್ಣನವರ ತತ್ತ್ವ ಸಿದ್ದಾಂತವನ್ನು ಉಳಿಸಬೇಕು. ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಹಣ ಬಿಡುಗಡೆ ಮಾಡಲು ಮುಂದಾಗುತ್ತೇವೆ. ಸುತ್ತಮುತ್ತಲಿನ ಕೆರೆಗಳಿಗೆ ನೀರು ತುಂಬಿಸಲು ಶ್ರಮಿಸುತ್ತೇವೆ ಎಂದು ಸಚಿವರು ಭರವಸೆ ನೀಡಿದರು.

      ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಡಾ.ಶಿವಮೂರ್ತಿ ಮುರುಘಾ ಶರಣರು,ಬಸವ, ಬುದ್ದ, ಅಂಬೇಡ್ಕರ್ ಇವರೆಲ್ಲರ ಮುಖ್ಯ ಸಂದೇಶ ಎಂದರೆ ಯಾರು ಬೇಡುವವರು ಇರಬಾರದು ಎಂದು. 12ನೇ ಶತಮಾನದಲ್ಲಿ ಕಾಯಕ ಮಾಡುವವರು ಇದ್ದರು, ಅಂದು ಬೇಡುವವರು ಇರಲಿಲ್ಲ ಎಂದು ಹೇಳಿದರು.

      ಅಂದಿನ ಸಮಾಜ ಸ್ವಾಭಿಮಾನ ಪೂರ್ಣವಾದ ಸಮಾಜ. ಇಂದು ಯುವಕರು ದುಡಿಮೆ ಕಡೆ ಸಾಗಬೇಕಿದೆ. ಇಂದಿನ ಯುವಕರು ಸ್ವಾಭಿಮಾನಕ್ಕೆ ಒಳಗಾಗಬೇಕು. ತಮಗೆ ತಾವೇ ದುಡಿದು ಬದುಕುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಯುವಜನತೆ ಸ್ವಾಭಿಮಾನ ಬದುಕಿನ ಕಾಯಕ ಮಾಡುತ್ತ ಹೋದರೆ, ಪ್ರಗತಿ ಸಾದ್ಯ ಎಂದು ಶರಣರು ನುಡಿದರು.

      ಸರ್ಕಾರ ಮುಂದಿನ ಬಜೆಟ್ ನಲ್ಲಿ ಜಿಲ್ಲೆಯ ನೀರಾವರಿ ಯೋಜನೆಗಳಿಗೆ 5000 ಕೋಟಿ ಮೀಸಲಿಡಬೇಕು ಎಂದು ಸ್ವಾಮೀಜಿ ಸಚಿವರಲ್ಲಿ ಮನವಿ ಮಾಡಿದರು.

       ಪತ್ರಕರ್ತರು ಹಾಗೂ ಚಲನಚಿತ್ರ ನಿರ್ದೇಶಕರಾದ ಚಕ್ರವರ್ತಿ ಚಂದ್ರಚೂಡ ಮಾತನಾಡಿ, ರಾಷ್ಟ್ರಾಭಿಮಾನದ ವ್ಯಾಖ್ಯಾನ ಇತ್ತೀಚಿಗೆ ಬದಲಾಗಿದೆ. ದೇಶಾಭಿಮಾನದ ಬಗ್ಗೆ ಮಾತನಾಡುವಾಗ, ಸೈನಿಕರನ್ನು ತೋರಿಸುತ್ತಾರೆ. ಅವರಂತೆ ರೈತರು ಯೋಧರಲ್ಲವೇ. ರಾಮಮಂದಿರಕ್ಕಿಂತ ಹೆಚ್ಚು ಕಾಡುತ್ತಿರುವ ಸಮಸ್ಯೆ ರೈತರ ಬದುಕು. ರೈತರ ಬದುಕು ಸುಧಾರಣೆಯಾಗಬೇಕಿದೆ. ಜೀವನದಲ್ಲಿ ಹುಸಿರಾಜಕೀಯ ನಂಬಬೇಡಿ, ರಾಷ್ಟ್ರಾಭಿಮಾನವಿರಲಿ ಎಂದು ತಿಳಿಸಿದರು.

      ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಯುವಕರೇ ಈ ದೇಶದ ಸಂಪತ್ತು. ಇಸ್ರೇಲ್‍ನಲ್ಲಿ, ಹೆಣ್ಣುಮಕ್ಕಳಿರಲಿ, ಗಂಡು ಮಕ್ಕಳಿರಲಿ ಸೈನ್ಯದಲಿ ಕಡ್ಡಾಯವಾಗಿ ಸೇವೆಯನ್ನು ಸಲ್ಲಿಸಬೇಕೆಂಬ ಕಾನೂನಿದೆ. ಅದರಿಂದ ಅವರ ದೇಶಾಭಿಮಾನ ಕಾಣುತ್ತಿದೆ. ಯುವಕರು ರಾಷ್ಟ್ರಾಭಿಮಾನ ಹಾಗು ಸ್ವಾಭಿಮಾನದಿಂದ ಬಾಳಬೇಕು. ಪೋಷಕರು ತಮ್ಮ ಮಕ್ಕಳು ಶ್ರೀಮಂತರಾಗಲೆಂದು ಅಂದುಕೊಳ್ಳುವ ಬದಲು ದೇಶದ ಸಂಪತ್ತಾಗಿ ತಮ್ಮ ಮಕ್ಕಳನ್ನು ಬೆಳಸಬೇಕಿದೆ ಎಂದು ಅಭಿಪ್ರಾಯ ಪಟ್ಟರು.

      ನಿವೃತ್ತ ಪೊಲೀಸ್ ಅಧಿಕಾರಿ ಗೋಪಾಲ್ ಬಿ.ಹೊಸೂರ್ ಮಾತನಾಡಿ, ಹಲವಾರು ವರ್ಷಗಳ ಹಿಂದೆ ಮಠಮಾನ್ಯಗಳು ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯದಿದ್ದರೆ ಅನೇಕರು ಸ್ವಾಭಿಮಾನದ ಜೀವನ ದಿಂದ ವಂಚಿತರಾಗುತ್ತಿದ್ದರು ಸ್ವಾಭಿಮಾನವಿಲ್ಲದ ವ್ಯಕ್ತಿ ವ್ಯಕ್ತಿಯಲ್ಲ. ಸ್ವಾವಲಂಬನೆಯಿಂದ ಸ್ವಾಭಿಮಾನ ಸಾಧ್ಯ. ಅದು ವ್ಯಕ್ತಿಯಿಂದ ವ್ಯಕ್ತಿಗೆ ಹರಡಿ ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯುತ್ತದೆ. ನಾಡಿನ ಜನರೆಲ್ಲ ಸ್ವಾಭಿಮಾನಗಳಾದರೆ ರಾಷ್ಟ್ರಾಭಿಮಾನ ತಾನಾಗಿಯೇ ಬರುತ್ತದೆ. ನಾವು ಯಾವುದೇ ಕ್ಷೇತ್ರದಲ್ಲಿದ್ದರೂ ರಾಷ್ಟ್ರದ ವಿಚಾರ ಬಂದಾಗ ನಾವೆಲ್ಲರೂ ಒಗ್ಗೂಡಬೇಕು, ಅದರಿಂದ ರಾಷ್ಟ್ರ ಪ್ರಗತಿ ಕಾಣಲು ಸಾದ್ಯವೆಂದು ತಿಳಿಸಿದರು.

      ಕಾರ್ಯಕ್ರಮದಲ್ಲಿ ಕಾಗಿನೆಲೆ ಕನಕ ಗುರುಪೀಠದ ಶ್ರೀ ಜಗದ್ಗುರು ನಿರಂಜನಾನಂದಪುರಿ ಸ್ವಾಮಿಗಳು, ಭಾಲ್ಕಿ ಶ್ರೀ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರು, ಡಾ.ಚನ್ನಬಸವಸ್ವಾಮೀಜಿ, ಹರಗುರುಚರಮೂರ್ತಿಗಳು, ಸೇಡಂ ಶಾಸಕ ರಾಜ್‍ಕುಮಾರ್ ಪಾಟೀಲ್, ಚಳ್ಳಕರೆ ಶಾಸಕ ರಘುಮೂರ್ತಿ, ವಿಧಾನ ಪರಿಷತ್ ಸದಸ್ಯೆ ಶ್ರೀಮತಿ.ಜಯಮ್ಮ ಬಾಲರಾಜ್, ಮಾಜಿ ಶಾಸಕ ಸುಧಾಕರ್, ಬಿ.ಜಿ.ಗೋವಿಂದಪ್ಪ, ಕಾಂಗ್ರೆಸ್ ಮುಖಂಡ ಹನುಮಲಿ ಷಣ್ಮುಖಪ್ಪ, ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಪಟೇಲ್ ಶಿವಕುಮಾರ್,
ಕಾರ್ಯಕ್ರಮದಲ್ಲಿ ಪ್ರೆಸಿಡೆಂಟ್ ಎನ್‍ಬಿಇ ಚಿನ್ನದ ಪದಕ ವೀಜೇತರಾದ ಬೆಳಗಾವಿಯ ಡಾ| ಅವಿನಾಶ್ ಕವಿ ಹಾಗೂ ಚಿನ್ನದ ಪದಕ ವಿಜೇತ ಅಂತರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಪಟು ಈ ನಾಗರಾಜ ಇವರುಗಳನ್ನು ಸನ್ಮಾನಿಸಲಾಯಿತು.

      ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ಪ್ರಾರ್ಥಿಸಿ, ರುದ್ರಾಣಿ ಗಂಗಾಧರ್ ಸ್ವಾಗತಿಸಿ, ಪ್ರದೀಪ್ ಕುಮಾರ್.ಜಿ.ಟಿ ನಿರೂಪಿಸಿ ವಂದಿಸಿದರು.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link