ಬೆಂಗಳೂರು : ಕಡತ ವಿಲೇವಾರಿ ಮಾಡುವುದಷ್ಟೇ ತಮ್ಮ ಜವಾಬ್ದಾರಿ ಎಂದು ಭಾವಿಸದೆ, ಅಧಿಕಾರಿಗಳು ಸರ್ಕಾರ ಕೈಗೊಂಡ ಜನಪರ ನಿರ್ಣಯಗಳು ಜನರನ್ನು ತಲುಪಿದೆಯೇ ಎಂದು ಖಾತರಿ ಪಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಲಹೆ ನೀಡಿದರು.
ತಮ್ಮ ಅಧಿಕಾರಾವಧಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ನಾವು ಈ ವರೆಗೆ ನಡೆದು ಬಂದ ಹಾದಿಯನ್ನು ಅವಲೋಕನ ಮಾಡಿಕೊಳ್ಳಬೇಕು ಹಾಗೂ ಮುಂದಿನ ಹೆಜ್ಜೆಯನ್ನು ಗುರುತಿಸಬೇಕು. ಕರ್ನಾಟಕದಲ್ಲಿ ಉತ್ತಮ ಆಡಳಿತದ ಪರಂಪರೆಯೇ ಇದೆ. ಕರ್ನಾಟಕದಲ್ಲಿ ಹುಟ್ಟಿದ ಅಥವಾ ವಾಸವಾಗಿರುವ ಅಥವಾ ಉದ್ಯೋಗ ನಿಮಿತ್ತ ಕರ್ನಾಟಕದಲ್ಲಿ ನೆಲೆಸಿರುವ ಎಲ್ಲರೂ ಸುದೈವಿಗಳು. ಆದ್ದರಿಂದ ನಾವು ಸಮಾಜಕ್ಕೆ ಏನನ್ನು ಹಿಂದಿರುಗಿಸುತ್ತೇವೆ ಎನ್ನುವುದೂ ಮುಖ್ಯವಾಗುತ್ತದೆ. ರಾಜಕಾರಣಿಗಳ ಅಧಿಕಾರಾವಧಿ ಐದು ವರ್ಷ; ಆದರೆ ಅಧಿಕಾರಿಗಳು ಶಾಶ್ವತವಾಗಿ ಇರುವವರು. ನಿಮ್ಮ ಸಾಮರ್ಥ್ಯ, ಅನುಭವಗಳನ್ನು ಅಭಿವೃದ್ಧಿಗೆ ಉಪಯೋಗವಾಗುವಂತೆ ಬಳಸಿಕೊಳ್ಳಿ ಎಂದು ತಿಳಿಸಿದರು.
ಪ್ರತಿಯೊಬ್ಬರಿಗೂ ಒಂದು ಸಾಮರ್ಥ್ಯವಿರುತ್ತದೆ. ಕ್ರಿಯಾಶೀಲ ಶಕ್ತಿ ಇರುತ್ತದೆ. ಆದರೆ ಅಧಿಕಾರಿಗಳಿಂದ ಅತ್ಯುತ್ತಮ ಫಲಿತಾಂಶ ಇನ್ನೂ ಬರಬೇಕಿದೆ ಎಂದು ನುಡಿದರು. ನಿಮ್ಮ ಇಲಾಖೆಯ ಸಮಸ್ಯೆಗಳು ನಿಮಗೇ ಚೆನ್ನಾಗಿ ತಿಳಿದಿರುತ್ತದೆ. ಈ ಕೊರತೆಯನ್ನು ನೀಗಿಸಲು ಶ್ರಮಿಸುವಂತೆ ಸಲಹೆ ನೀಡಿದರು.
ಇಂದಿನ ದಿನಗಳಲ್ಲಿ ಸರ್ಕಾರದಿಂದ ಜನರ ಆಕಾಂಕ್ಷೆ, ಅಪೇಕ್ಷೆಗಳೂ ಬದಲಾಗುತ್ತಿದೆ. ಇದನ್ನು ಅರಿತು ಸ್ಪಂದನಾಶೀಲ ಸರ್ಕಾರವಾಗಿ ನೀವು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿ ಪ್ರವಾಹ ಉಂಟಾದ ಸಂದರ್ಭದಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಗಳಲ್ಲಿ ಇಡೀ ಆಡಳಿತ ಯಂತ್ರ ಒಟ್ಟಾಗಿ ಶ್ರಮಿಸಿ, ಜನರ ಸಂಕಷ್ಟಕ್ಕೆ ಸ್ಪಂದಿಸಿ ಅದ್ಭುತ ಕೆಲಸ ಮಾಡಲಾಗಿದೆ. ಪರಿಹಾರ ವಿತರಣೆಯನ್ನೂ ಚುರುಕಾಗಿ ನಿರ್ವಹಿಸಲಾಗಿದೆ. ಕೋವಿಡ್ 19ರ ಸಂದರ್ಭದಲ್ಲಿಯೂ ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯದ ಹಣಕಾಸು ಪರಿಸ್ಥಿತಿಯಲ್ಲಿಯೂ ಹೆಚ್ಚಿನ ಸುಧಾರಣೆಯಾಗಿದ್ದು, ಕೋವಿಡ್ನಿಂದ ಚೇತರಿಸಿಕೊಂಡ ನಂತರ ಅಭಿವೃದ್ಧಿ ಇಲಾಖೆಗಳೂ ಕ್ರಿಯಾಶೀಲವಾಗಿವೆ. ಜಲಜೀವನ್ ಮಿಷನ್ನಲ್ಲಿ 17ನೇ ಸ್ಥಾನದಿಂದ 3ನೇ ಸ್ಥಾನಕ್ಕೇರಿದ್ದೇವೆ.
ಮನೆಗಳ ನಿರ್ಮಾಣ, ಲಸಿಕಾ ಅಭಿಯಾನ ಮೊದಲಾದುವುಗಳನ್ನುಯಶಸ್ವಿಯಾಗಿ ನಿರ್ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ತೀವ್ರಗೊಳಿಸಬೇಕು ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಅತ್ಯಂತ ಸವಾಲಿನ ಕೆಲಸ. ದುರ್ಬಲ ವರ್ಗದವರಿಗೆ ನ್ಯಾಯ ಒದಗಿಸುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಇದು ಪೊಲೀಸರಿಗೆ ಪರೀಕ್ಷಾ ಕಾಲವಾಗಿದೆ. ಪೊಲೀಸರು ಇನ್ನಷ್ಟು ಚುರುಕಾಗಿ ಈ ಸವಾಲುಗಳನ್ನು ಎದುರಿಸಬೇಕು. ಸರ್ಕಾರ ನಿಮ್ಮೊಂದಿಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ಸಾಧಿಸಿದ ಪ್ರಗತಿಯಲ್ಲಿ ನಿಮ್ಮ ಸಹಕಾರ, ಕೊಡುಗೆ ಇದೆ ಎಂದು ಶ್ಲಾಘಿಸಿದ ಮುಖ್ಯಮಂತ್ರಿಗಳು ಮುಂದಿನ ದಿನಗಳಲ್ಲಿ ಯೋಜನೆಗಳು ತಳಹಂತದವರೆಗೂ ತಲುಪುವಂತೆ ಮಾಡಲು ಒತ್ತು ನೀಡಿ ಎಂದು ತಿಳಿಸಿದರು.
ಸಭೆಯಲ್ಲಿ ಸಚಿವ ಸಂಪುಟದ ಸದಸ್ಯರು, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.