ಕೊರಟಗೆರೆ
ಶ್ರೀಕ್ಷೇತ್ರ ಸಿದ್ದರಬೆಟ್ಟದ ಮಠ ಸಾಮಾಜಿಕ ಕಾರ್ಯಕ್ರಮ ಮತ್ತು ಜನಜಾಗೃತಿ ಕೆಲಸಗಳಲ್ಲಿ ಈಗಾಗಲೇ ಹೆಸರಾಗಿದೆ. ನಾಡಿನ ಭಕ್ತರ ಸಲಹೆ ಮತ್ತು ಸಹಕಾರದಿಂದ ಸಿದ್ದರಬೆಟ್ಟ ಕ್ಷೇತ್ರದಲ್ಲಿ ಶ್ರೀಗಳು ಇನ್ನೂ ಅನೇಕ ಅಭಿವೃದ್ದಿ ಕೆಲಸವನ್ನು ಮಾಡಲಿದ್ದಾರೆ ಎಂದು ಬಾಳೆಹೊನ್ನೂರು ರಂಭಾಪುರಿ ಮಠದ ಪೀಠಾಧ್ಯಕ್ಷ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.
ಅವರು ತಾಲ್ಲೂಕಿನ ತೋವಿನಕೆರೆ ಹೋಬಳಿ ವ್ಯಾಪ್ತಿಯ ಸಿದ್ದರಬೆಟ್ಟದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಶ್ರೀಮಠದ ವಾರ್ಷಿಕೋತ್ಸವ, ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಶ್ರೀಜಗಜ್ಯೋತಿ ಬಸವೇಶ್ವರ ಜಯಂತೋತ್ಸವ, ಸಾಮೂಹಿಕ ವಿವಾಹ ಮಹೋತ್ಸವ ಮತ್ತು ಜನಜಾಗೃತಿ ಧರ್ಮ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಯೋವೃದ್ದರ ರಕ್ಷಣೆಗಾಗಿ ವೃದ್ದಾಶ್ರಮ ನಿರ್ಮಾಣ ಮಾಡಬೇಕಾದ ಸಿದ್ದರಬೆಟ್ಟದ ಶ್ರೀಗಳ ಕನಸು ನನಸು ಆಗಲಿದೆ. ಸಿದ್ದರಬೆಟ್ಟಕ್ಕೆ ಭಕ್ತರು ಸುಲಭವಾಗಿ ಹತ್ತಿ ಇಳಿಯಲು ಮೆಟ್ಟಿಲು ನಿರ್ಮಾಣ ಕಾರ್ಯ ಈಗಾಗಲೇ ಪ್ರಾರಂಭವಾಗಿದೆ. ಸಿದ್ದರಬೆಟ್ಟ ಶ್ರೀಗಳ ಕನಸು ನನಸಾಗಲು, ರಾಜ್ಯ ಸರಕಾರ ಮತ್ತು ನಾಡಿನ ಭಕ್ತರ ಸಹಾಯ ಮತ್ತು ಸಹಕಾರ ಅಗತ್ಯವಾಗಿದೆ. ಸಿದ್ದೇಶ್ವರನ ಆಶೀರ್ವಾದದಿಂದ ಶ್ರೀಗಳ ಕನಸು ಈಡೇರಿಲಿದೆ ಎಂದು ಹೇಳಿದರು.
ಸಿದ್ದರಬೆಟ್ಟ ಬಾಳೆಹೊನ್ನೂರು ಖಾಸ ಶಾಖಾ ಮಠದ ಪೀಠಾಧ್ಯಕ್ಷ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬಾಳೆಹೊನ್ನೂರು ರಂಭಾಪುರಿ ಶ್ರೀಗಳ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ 13 ವರ್ಷ ಶ್ರೀಮಠ ಪೂರೈಸಿದೆ. ಭಕ್ತರಿಗೆ ಸಾಮಾಜಿಕ ಕಾರ್ಯದ ಜೊತೆ ಧರ್ಮದ ಜಾಗೃತಿ ಮೂಡಿಸುವ ಕೆಲಸವನ್ನು ಶ್ರೀಮಠ ಮಾಡುತ್ತಿದೆ. ಶ್ರೀಮಠದ ಅಭಿವೃದ್ದಿಗೆ ನಾಡಿನ ಭಕ್ತರು ಮತ್ತು ಗುರುವಿನ ಆಶೀರ್ವಾದ ಶ್ರೀರಕ್ಷೆಯಾಗಿದೆ ಎಂದರು.
ಭವಿಷ್ಯದಲ್ಲಿ ಎದುರಾಗುವ ನೀರಿನ ಸಮಸ್ಯೆಯ ನಿವಾರಣೆಗೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕು. ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತರು ಮತ್ತು ನೂತನ ವಧುವರರಿಗೆ ಉಚಿತವಾಗಿ 5ಸಾವಿರ ಸಸಿಗಳನ್ನು ನೀಡಲಾಗಿದೆ. ಸಸಿಗಳನ್ನು ಉತ್ತಮವಾಗಿ ಪೋಷಣೆ ಮಾಡಿ ಬೆಳೆಸುವ ರೈತರಿಗೆ 10ಸಾವಿರ ರೂ. ಬಹುಮಾನ ನೀಡಲು ತೀರ್ಮಾನ ಮಾಡಲಾಗಿದೆ. ಪರಿಸರ ರಕ್ಷಣೆಯಿಂದ ಮಾತ್ರ ನಾವೆಲ್ಲರೂ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು.
ಎಲೆರಾಂಪುರ ನರಸಿಂಹಗಿರಿ ಕ್ಷೇತ್ರದ ಡಾ.ಹನುಮಂತನಾಥ ಸ್ವಾಮೀಜಿ ಮಾತನಾಡಿ, ಭೂಲೋಕದ 84 ಲಕ್ಷ ಜೀವ ರಾಶಿಯಲ್ಲಿ ಮನುಷ್ಯನ ಜನ್ಮ ಶ್ರೇಷ್ಠವಾಗಿದೆ. ಸಿದ್ದರಬೆಟ್ಟ ಶ್ರೀಗಳು ಕೇವಲ ಮಠ ಕಟ್ಟೋದಿಕ್ಕೆ ಆದ್ಯತೆ ನೀಡದೆ ಮನುಷ್ಯನ ಮನಸ್ಸನ್ನು ಕಟ್ಟುವಂತಹ ಕೆಲಸ ಮಾಡಿದ್ದಾರೆ. ಸಿದ್ದರಬೆಟ್ಟ ಮಠದ ವೃದ್ದಾಶ್ರಮ ಕಾಮಗಾರಿಗೆ ಎಲೆರಾಂಪುರ ಮಠದಿಂದ 25 ಸಾವಿರ ನಗದು ಮತ್ತು 50 ಮೂಟೆ ಸಿಮೆಂಟ್ ನೀಡುತ್ತೇವೆ ಎಂದು ತಿಳಿಸಿದರು.
ಯಡಿಯೂರು ಶ್ರೀರೇಣುಕಾ ಶಿವಾಚಾರ್ಯ ಸ್ವಾಮಿ, ಸರಡಗಿ ಶ್ರೀರೇವಣ್ಣಸಿದ್ದ ಶಿವಾಚಾರ್ಯ ಸ್ವಾಮಿ, ಬೆಳ್ಳಾವಿ ಕಾರದೇಶ್ವರ ಮಠದ ಶ್ರೀ ಕಾರದ ವೀರಭದ್ರ ಸ್ವಾಮೀಜಿ, ಚಿಕ್ಕನಹಳ್ಳಿ ಶ್ರೀಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಹೊಳವನಹಳ್ಳಿ ನಂಜುಂಡೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಬ್ಬಿಗೆರೆ ಶ್ರೀಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಸಂಗೊಳ್ಳಿ ಶ್ರೀಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ತುಮಕೂರು ಸಂಸದ ಬಸವರಾಜು, ಮಧುಗಿರಿ ಶಾಸಕ ವೀರಭದ್ರಯ್ಯ, ತುಮಕೂರು ಡಿಸಿ ರಾಕೇಶ್‍ಕುಮಾರ್, ಪೋಲೀಸ್ ಅಧೀಕ್ಷಕ ಡಾ.ಕೋನ ವಂಶಿಕೃಷ್ಣ, ತಾಪಂ ಅಧ್ಯಕ್ಷ ಕೆಂಪರಾಮಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ವೀರಶೈವ ಸಂಘದ ತಾಲ್ಲೂಕು ಅಧ್ಯಕ್ಷ ಸಿದ್ದಮಲ್ಲಪ್ಪ, ಬಿಬಿಎಂಪಿ ಸಹಾಯಕ ಎಂಜಿನಿಯರ್ ನಟರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.