ನವದೆಹಲಿ:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಶಿಕ್ಷೆಗೆ ತಡೆ ನೀಡಲು ಗುಜರಾತ್ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ. ನ್ಯಾಯಮೂರ್ತಿ ಹೇಮಂತ್ ಪ್ರಚ್ಚಕ್ ಅವರಿದ್ದ ನ್ಯಾಯಾಲಯ ಈ ತೀರ್ಪು ನೀಡಿದೆ.
ಮಾನಹಾನಿ ಪ್ರಕರಣದಲ್ಲಿ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ರಾಹುಲ್ ಗಾಂಧಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಗುಜರಾತ್ ಹೈಕೋರ್ಟ್ ಮದ್ಯ ಪ್ರವೇಶಿಸುವ ಅಗತ್ಯವಿಲ್ಲ ಎಂದು ಹೇಳಿದೆ, ಈ ಮೂಲಕ ರಾಹುಲ್ ಗಾಂಧಿಗೆ ಹಿನ್ನಡೆಯಾಗಿದೆ.
ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ನ್ಯಾಯಮೂರ್ತಿ ಹೇಮಂತ್ ಪ್ರಚ್ಚಕ್ ಅವರು ಎಪ್ರಿಲ್ ಮತ್ತು ಮೇನಲ್ಲಿ ಅರ್ಜಿಯನ್ನು ಆಲಿಸಿದ್ದರು ಹಾಗೂ ಮೇ 2 ರಂದು ವಾದವನ್ನು ಮುಕ್ತಾಯಗೊಳಿಸಲಾಯಿತು. ರಾಹುಲ್ ಗಾಂಧಿ ಪರ ವಾದಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, , ಕ್ರಿಮಿನಲ್ ಮಾನನಷ್ಟದ ಆರೋಪದ ಪ್ರಕರಣದಲ್ಲಿ ಶಿಕ್ಷೆಗೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದರು.
‘ಮೋದಿ ಉಪನಾಮ ಹೊಂದಿರುವವರೆಲ್ಲರೂ ಕಳ್ಳರು’ ಎಂದಿದ್ದ ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿನ ಶಿಕ್ಷೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಗುಜರಾತ್ ಹೈಕೋರ್ಟ್ ಈ ತೀರ್ಪು ನೀಡಿದೆ.
ಮಾರ್ಚ್‌ನಲ್ಲಿ ಸೂರತ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ದೋಷಿ ಎಂದು ಆದೇಶ ನೀಡಿತ್ತು. ಐಪಿಸಿ 499, 500ರಡಿ ಎರಡು ವರ್ಷ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಶಿಕ್ಷೆ ಪ್ರಕಟಗೊಂಡ ಮರುದಿನವೇ, ಲೋಕಸಭೆಯ ಸ್ಪೀಕರ್ ಕಾರ್ಯಾಲಯ ಸಂಸದ ಸ್ಥಾನದಿಂದ ಅನರ್ಹಗೊಳಿಸಿತ್ತು.
ನ್ಯಾಯಮೂರ್ತಿ ಹೇಮಂತ್ ಪ್ರಚ್ಚಕ್, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 2ರಂದೇ ವಿಚಾರಣೆ ಪೂರ್ಣಗೊಳಿಸಿದ್ದು ಆದೇಶವನ್ನು ಕಾಯ್ದಿರಿಸಿದ್ದರು. ಮಧ್ಯಂತರ ಪರಿಹಾರದ ಆದೇಶ ನೀಡಲು ನಿರಾಕರಿಸಿದ್ದರು. ಬೇಸಿಗೆ ರಜೆ ಮುಗಿದ ಬಳಿಕವೇ ಆದೇಶ ಪ್ರಕಟಿಸುವುದಾಗಿ ತಿಳಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
