ಚಿತ್ರದುರ್ಗ:
ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗಬೇಕಾದರೆ ಸ್ವಚ್ಚತೆಯಿಂದ ಮಾತ್ರ ಸಾಧ್ಯ ಎಂದು ಡಿಜಿಟಲ್ ವಲ್ರ್ಡ್‍ನ ಮಾಲೀಕ ದಾದಾಪೀರ್ ಹೇಳಿದರು. ನೆಹರು ಯುವ ಕೇಂದ್ರ, ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದಿಂದ ಕುರುಬರ ಹಾಸ್ಟೆಲ್‍ನಲ್ಲಿ ಇತ್ತೀಚೆಗೆ ನಡೆದ ಸ್ವಚ್ಚತಾ ಅಭಿಯಾನ ಹಾಗೂ ಶ್ರಮದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ವೈಯಕ್ತಿಕವಾಗಿ ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳನ್ನು ಹೇಗೆ ಸ್ವಚ್ಚವಾಗಿಟ್ಟುಕೊಳ್ಳುತ್ತಾರೋ ಅದೇ ರೀತಿಯಲ್ಲಿ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡುವುದು ಅಸಾಧ್ಯವಾಗುತ್ತದೆ. ಜಗತ್ತಿನ ನೂರು ಸ್ವಚ್ಚ ಮತ್ತು ಸುಂದರ ನಗರಗಳಲ್ಲಿ ಭಾರತವೂ ಒಂದಾಗಬೇಕು. ಅಮೇರಿಕಾ, ಆಸ್ಟ್ರೇಲಿಯಾ, ನ್ಯೂಜಿಲಾಂಡ್, ಸಿಂಗಾಪುರ್ ದೇಶಗಳಿಗೆ ಹೋಲಿಸಿದರೆ ಭಾರತ ಸ್ವಚ್ಚತೆಯಲ್ಲಿ ಅತ್ಯಂತ ಹಿಂದುಳಿದಿದೆ. ಹಾಗಾಗಿ ಪ್ರಾಥಮಿಕ ಹಂತದಲ್ಲಿಯೇ ಶಾಲಾ ಮಕ್ಕಳಿಗೆ ಸ್ವಚ್ಚತೆ ಕುರಿತು ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಕಾಲ್ಕೆರೆ ಚಂದ್ರಪ್ಪ ಮಾತನಾಡಿ ಶತ ಶತಮಾನಗಳಿಂದಲೂ ಮಾನವ ಸ್ವಚ್ಚತೆಗೆ ಆದ್ಯತೆ ನೀಡುತ್ತಾ ಬರುತ್ತಿದ್ದಾನೆ. ವಿಪರ್ಯಾಸವೆಂದರೆ ಪಾಲನೆ ಮಾಡಲು ಆಗುತ್ತಿಲ್ಲ. ಶಿಸ್ತು, ಸಂಯಮ, ಕರ್ತವ್ಯ ಪ್ರಜ್ಞೆ ಪ್ರತಿಯೊಬ್ಬರಲ್ಲಿಯೂ ಮೂಡಬೇಕಾಗಿದೆ ಎಂದರು.
ವಿದ್ಯಾರ್ಥಿನಿಲಯದ ನಿಲಯಪಾಲಕರಾದ ಶೇಖರ್ ಮಾತನಾಡುತ್ತ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜೊತೆಯಲ್ಲಿಯೇ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವುದರ ಕಡೆಗೆ ಹೆಚ್ಚಿನ ಗಮನ ಕೊಡಬೇಕು ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
