ಹಳೆಯಂಗಡಿ  ಗ್ರಾಮ ಪಂಚಾಯತಿ ಮೇಲೆ ಎಸಿಬಿ ದಾಳಿ

ಮಂಗಳೂರು:

               ಮಂಗಳೂರು ಜಿಲ್ಲೆಯ  ಹಳೆಯಂಗಡಿ  ಗ್ರಾಮ ಪಂಚಾಯತ್ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

               ಮಂಗಳವಾರ ಮುಂಜಾನೆ ಕಛೇರಿ ತೆರೆಯುತ್ತಿದ್ದಂತೆ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿ ತನಿಖೆ ಆರಂಭಿಸಿದೆ. ಗ್ರಾಮ ಪಂಚಾಯಿತಿಯಲ್ಲಿ 2015 – 16 ನೇ ಸಾಲಿನಲ್ಲಿ ಬೀದಿ ದೀಪ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆಸಲಾಗಿದೆ ಎಂದು ಆರೋಪ ಕೇಳಿಬಂದಿತ್ತು. ಈ ಅವ್ಯವಹಾರದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಅಬುಬುಕರ್ ಹಾಗೂ ಕಾರ್ಯದರ್ಶಿ ಕೇಶವ ಎಂಬುವವರು ಶಾಮೀಲಾಗಿದ್ದಾರೆ ಎಂದು ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಪ್ರಕರಣ ದಾಖಲಿಸಲಾಗಿತ್ತು.ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಲ ಭಾಗಗಳಲ್ಲಿ ಕೇವಲ ಎರಡು ತಿಂಗಳ ಹಿಂದೆ ಸುಮಾರು 700 ಸಿಎಫ್ಎಲ್ ಬಲ್ಬ್ ಗಳನ್ನೂ ಬದಲಾಯಿಸಲಾಗಿತ್ತು. ಸಿಎಫ್ಎಲ್ ಬಲ್ಬ್ ಗಳಿಗೆ ಒಂದು ವರ್ಷದ ವಾರಂಟಿ ಇದ್ದರೂ ಹೊಸ ದೀಪಗಳನ್ನು ಏಕೆ ಬದಲಾಯಿಸಲಾಗಿತ್ತು ಎಂದು ಅವರು ಪ್ರಶ್ನಿಸಿದ್ದಾರೆ . ಬಲ್ಬ್ ಖರೀದಿ ಬಗ್ಗೆ ಸರಿಯಾದ ಬಿಲ್ ದಾಖಲೆ ಇರಲಿಲ್ಲ. ಅಲ್ಲದೆ ಬದಲಾಯಿಸಿದ್ದಾರೆ ಎನ್ನಲಾದ ಹಳೆ ಬಲ್ಬ್ ಗಳು ಇರಲಿಲ್ಲ. ಈ ಬಗ್ಗೆ  ರಮೇಶ್ ಅಂಚನ್ ಎಂಬುವವರು ಎಸಿಬಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ದಾಳಿ ನಡೆಸಿರುವ  ಅಧಿಕಾರಿಗಳು  ಕಚೇರಿಯ ಕಡತಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ತನಿಖೆ ಸಂದರ್ಭದಲ್ಲಿ ಅಬುಬುಕರ್ ಹಾಗು ಕೇಶವ ಅವರನ್ನು ಎಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ