ಹಿರಿಯೂರು :
ಚಿನ್ನಬೆಳ್ಳಿ ಆಭರಣ ತಯಾರಿಸುವುದು ಒಂದು ದೈವದತ್ತ ಕಲೆ. ಜನರ ಆಧುನಿಕ ಮನೋಭಾವಕ್ಕೆ ತಕ್ಕಂತೆ ಆಭರಣಗಳ ವಿನ್ಯಾಸ ರೂಪಿಸಲು ಸೂಕ್ತ ತರಬೇತಿ ಅತ್ಯಗತ್ಯ ಎಂಬುದಾಗಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ಸಿ.ನಾರಾಯಣಾಚಾರ್ ಹೇಳಿದರು
ನಗರದ ಕಾಳಿಕಾಂಬ ಮತ್ತು ವೀರಭದ್ರ ದೇಗುಲಗಳ ಆವರಣದಲ್ಲಿ ವಿಶ್ವಕರ್ಮ ಸಮಾಜದ ನೇತೃತ್ವದಲ್ಲಿ ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆಯಡಿ ಹಮ್ಮಿಕೊಳ್ಳಲಾಗಿದ್ದ ಆಭರಣ ತಯಾರಿಕೆ ಕೌಶಲ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ತರಬೇತಿಪತ್ರ ವಿತರಿಸಿ ಅವರು ಮಾತನಾಡಿದರು.
ಈ ದೇಶದಲ್ಲಿ ಪ್ರಥಮ ಬಾರಿಗೆ ಪ್ರಧಾನಿ ನರೇಂದ್ರಮೋದಿ ಚಿನ್ನ-ಬೆಳ್ಳಿ ಕೆಲಸಗಾರರಿಗೆ ತರಬೇತಿಯ ಅಗತ್ಯ ಇರುವುದನ್ನು ಮನಗಂಡು 5ಲಕ್ಷ ಜನರಿಗೆ ತರಬೇತಿ ಕೊಡಿಸಿದ್ದಾರೆ. ರಾಜ್ಯದಲ್ಲಿ 15 ಸಾವಿರಕ್ಕೂ ಹೆಚ್ಚುಜನರಿಗೆ ಈ ತರಬೇತಿ ನೀಡಲಾಗಿದೆ, ಎನ್.ಎಸ್.ಡಿ.ಸಿ ಹಾಗೂ ಸ್ಕಿಲ್ ಇಂಡಿಯಾ ಜಿಜೆಎಸ್‍ಸಿಐಗೆ ಸೇರಿದ 8 ತರಬೇತಿದಾರರು ಮೂರು ದಿನ ನಿಮಗೆ ತರಬೇತಿ ನೀಡಿದ್ದಾರೆ ಎಂದರು.
ಆಭರಣ ತಯಾರಕರು ಚಿನ್ನ-ಬೆಳ್ಳಿ ವರ್ತಕರ ವಿಶ್ವಾಸ ಉಳಿಸಿಕೊಳ್ಳಬೇಕು. ಜಿಜೆಎಸ್‍ಸಿಐ ವತಿಯಿಂದ ತರಬೇತಿ ಪ್ರಮಾಣಪತ್ರ ನೀಡುವ ಕಾರಣ ಪ್ರತಿಷ್ಠಿತ ಕಂಪನಿಗಳಲ್ಲಿ ಆಭರಣ ತಯಾರಿಸಲು, ಬ್ಯಾಂಕುಗಳಲ್ಲಿ ಆಭರಣ ಪರೀಕ್ಷೆ ಮಾಡಲು ನೇಮಕ ಮಾಡಿಕೊಳುತ್ತಾರೆ. ಈ ಶಿಬಿರದಲ್ಲಿ ಮಹಿಳೆಯರೂ ಸೇರಿದಂತೆ 112 ಜನ ತರಬೇತಿ ಪಡೆದದ್ದು, ಸ್ವಯಂ ಉದ್ಯೋಗಿಗಳಾಗಲು ಇದು ನೆರವಾಗಲಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ತರಬೇತುದಾರರಾದ ಮಣಿವಾಸಗಂ, ಗಂಗಾಧರ್, ಚಂದ್ರಶೇಖರ್, ರಾಜೇಂದ್ರನ್, ಮುರುಗವೇಲ್, ಸುನೀಲ್ ಅಂಗಡಿ, ಕರುಣಾಕರನ್ ಹಾಗೂ ತರಬೇತಿ ಪಡೆದ ಕುಶಲಕರ್ಮಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ