ಬ್ಯಾಡಗಿ:
ಖಾಸಗಿ ಹಣಕಾಸು ಸಂಸ್ಥೆಗಳು ಬಹುಬೇಗ ಎತ್ತರಕ್ಕೆ ಬೆಳೆಯುವ ಆತುರದಲ್ಲಿ ಮುಗ್ಗರಿಸಿದ ಉದಾಹರಣೆಗಳಿವೆ, ಈ ನಿಟ್ಟಿನಲ್ಲಿ ಆದಾಯಕ್ಕಿಂತಲೂ ಹೆಚ್ಚಾಗಿ ಜನರ ವಿಶ್ವಾಸವನ್ನು ಗಳಿಸಿಕೊಂಡಲ್ಲಿ ಮಾತ್ರ ತಡವಾಗಿಯಾದರೂ ಸಂಪೂರ್ಣ ಪ್ರಗತಿ ಕಾಣಲು ಸಾಧ್ಯವೆಂದು ಹಾವೇರಿ ಹುಕ್ಕೇರಿಮಠದ ಸದಾಶಿವಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಬ್ಯಾಡಗಿ ಚಿಲ್ಲೀಸ್ ಚಿಟ್ ಫಂಡ್ ಪ್ರೈವೇಟ್ ಲಿಮಿಟೆಡ್ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾರ್ವಜನಿಕರಿಂದ ಹಣ ಸಂಗ್ರಹಿಸುವ ಬಹುತೇಕ ಸಂಸ್ಥೆಗಳು ಜನರ ವಿಶ್ವಾಸಾರ್ಹತೆ ಗಳಿಸುವುದೇ ಬಹುದೊಡ್ಡ ಕೆಲಸವಾಗಿದೆ, ಜನರು ಹೂಡಿಕೆ ಮಾಡಿದ ಹಣವನ್ನು ಅಸಲು ಸೇರಿದಂತೆ ಬಡ್ಡಿ, ಬೋನಸ್ ಅಥವಾ ಲಾಭದೊಂದಿಗೆ ಮರಳಿಸಿದ್ದೇ ಆದಲ್ಲಿ ಗ್ರಾಹಕರು ಸರತಿ ಸಾಲಿನಲ್ಲಿ ನಿಂತು ಹಣ ಹೂಡಲಿದ್ದಾರೆ ಎಂದರು.
ಆಡಳಿತ ಮಂಡಳಿಯಲ್ಲಿ ಸ್ಥಳೀಯರೇ ಇರಲಿ: ಖಾಸಗಿ ಹಣಕಾಸು ಸಂಸ್ಥೆಗಳು ಹೆಚ್ಚು ಬೆಳೆದಂತೆಲ್ಲಾ ಗುರ್ತ ಪರಿಚಯ ಇಲ್ಲದವರು ಆಡಳಿತ ಮಂಡಳಿ ಸೇರಿಕೊಳ್ಳುತ್ತಾರೆ ಇಂತಹವರ ಬಗ್ಗೆ ಹೆಚ್ಚು ನಿಗಾ ವಹಿಸುವ ಮೂಲಕ ಸ್ಥಳಿಯ ಮಟ್ಟದಲ್ಲಿರುವ ವ್ಯಕ್ತಿಗಳು ಬಂಢವಾಳ ಶಾಹಿಗಳಿಂದಲೇ ಹಣ ಹೂಡಿಕೆ ಸೇರಿದಂತೆ ಆಡಳಿತ ಮಂಡಳಿ ನಿರ್ದೇಶಕರನ್ನಾಗಿ ಮಾಡಿಕೊಳ್ಳುವುದು ಈ ಸಂದರ್ಭದಲ್ಲಿ ಹೆಚ್ಚು ಸೂಕ್ತ ಎಂದರು.
ಕಾನೂನುಗಳನ್ನು ಗೌರವಿಸಬೇಕು: ಖಾಸಗಿ ಹಣಕಾಸು ಸಂಸ್ಥೆಗಳ ನಿಯಂತ್ರಣಕ್ಕಾಗಿ ಸರ್ಕಾರ ಹಲವಾರು ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸಿದೆ, ಹೀಗಿದ್ದರೂ ಸಹ ಪ್ರತಿ ವರ್ಷ ದೇಶದ ಯಾವುದಾದರೊಂದು ಭಾಗದಲ್ಲಿ ಒಂದಿಲ್ಲೊಂದು ಸಂಸ್ಥೆ ಜನರಿಗೆ ಮೋಸವೆಸಗಿದ ಕುರಿತು ಮಾದ್ಯಮಗಳಲ್ಲಿ ಕಾಣ ಸಿಗುತ್ತವೆ, ಸರ್ಕಾರರ ಕಾನೂನುಗಳನ್ನು ಗೌರವಿಸುವ ಮೂಲಕ ಇವೆಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬ್ಯಾಡಗಿ ಚಿಲ್ಲೀಸ್ ಚಿಟ್ ಫಂಡ್ ಸಂಸ್ಥೆಯು ಗ್ರಾಹಕರೊಂದಿಗೆ ಉತ್ತಮ ಸಂಬಂಧವನ್ನು ಬೆಳಿಸಿಕೊಂಡು ಉತ್ತರೋತ್ತರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಸ್ವಾತಂತ್ರ್ಯಕ್ಕೂ ಮುನ್ನ ಮೊನಿ ಲ್ಯಾಂಡಿಂಗ್ ಲೈಸನ್ಸ್: ವರ್ತಕರ ಸಂಘದ ಕಾರ್ಯದರ್ಶಿ ರಾಜು ಮೋರಿಗೇರಿ ಮಾತನಾಡಿ, ಎಲ್ಲವನ್ನೂ ಸರ್ಕಾರದಿಂದಲೇ ನಿರೀಕ್ಷಿಸಲು ಸಾಧ್ಯವಿಲ್ಲ ಇವೆಲ್ಲಾ ಕಾರಣಗಳಿಂದಲೇ ಬ್ರಿಟಿಷರ ಆಳ್ವಿಕೆಯಲ್ಲಿಯೇ ಬ್ಯಾಂಕಿಂಗ್ ವ್ಯವಸ್ಥೆ ಸೇರಿದಂತೆ ಖಾಸಗಿ ವ್ಯಕ್ತಿಗಳಿಗೆ ಮೊನಿ ಲ್ಯಾಂಡಿಂಗ್ ಲೈಸನ್ಸ್ ವಿತರಿಸಿದ ಉದಾಹರಣೆಗಳಿವೆ ಹೀಗಾಗಿ ಇಂದು ಆರಂಭವಾಗುತ್ತಿರುವ ಬ್ಯಾಡಗಿ ಚಿಲ್ಲೀಸ್ ಚಿಟ್ ಫಂಡ್ ಹಣಕಾಸು ಸಂಸ್ಥೆಯು ಬ್ಯಾಡಗಿ ಪಟ್ಟಣದ ಜನತೆಗೆ ಆಶಾದಾಯಕವಾಗಿ ಸಾಗಲಿ ಎಂದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಬಿ.ಎಸ್.ಚೂರಿ, ರುದ್ರೇಶ ಚನ್ನಗೌಡ್ರ, ಭರತೇಶ್ ಚೂರಿ ಗುರುರಾಜ ಅಂಕಲಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಅನ್ನಪೂರ್ಣ ಬೇತೂರಮಠ ಕಾರ್ಯಕ್ರಮ ನಿರ್ವಹಿಸಿದರು.