ತುಮಕೂರು ಮಹಾನಗರ ಪಾಲಿಕೆ ಚುನಾವಣೆ : ಗುರಿ ಇಲ್ಲ.. ರೂಪು ರೇಷೆಗಳಿಲ್ಲ : ಪ್ರಚಾರಕ್ಕಷ್ಟೇ ಸೀಮಿತ

ತುಮಕೂರು:

      ತುಮಕೂರು ಮಹಾನಗರ ಪಾಲಿಕೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇರುವ ಕೆಲವೇ ದಿನಗಳ ಅವಧಿಯಲ್ಲಿ ಪ್ರಚಾರದ ಕಸರತ್ತುಗಳ ಕಡೆಯೇ ಅಭ್ಯರ್ಥಿಗಳು ಗಮನ ಹರಿಸುತ್ತಿದ್ದಾರೆ. ಈ ಚುನಾವಣೆಯಲ್ಲಿ ಪಕ್ಷಗಳ ಸೈದ್ಧಾಂತಿಕ ನಿಲುವು ಏನು ಎಂಬುದು ಈವರೆಗೂ ಪ್ರಕಟವಾಗಿಲ್ಲ. ಅಂದರೆ, ಚುನಾವಣಾ ಪ್ರಣಾಳಿಕೆಯ ಬಗ್ಗೆ ಗಮನ ಹರಿಸಿಲ್ಲ.

      ಮೂರೂ ಪಕ್ಷಗಳ ಅಭ್ಯರ್ಥಿಗಳು ನಗರ ಪಾಲಿಕೆ ಚುನಾವಣೆಯಲ್ಲಿ ಪೈಪೋಟಿ ನಡೆಸಿದ್ದಾರೆ. ಪಕ್ಷಗಳ ಜೊತೆ ಬಂಡಾಯ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ. ಇವರ ಜೊತೆ ಪಕ್ಷೇತರರು ಮತ್ತು ಇತರೆ ಕೆಲವು ಪಕ್ಷಗಳ ಅಭ್ಯರ್ಥಿಗಳು ಇದ್ದಾರೆ. ಪ್ರಮುಖ ಪಕ್ಷಗಳು ಈ ಚುನಾವಣೆಯ ಪ್ರಚಾರ ಸಮಯದಲ್ಲಿ ಬಹುಮುಖ್ಯವಾಗಿ ಬೇಕಾಗಿದ್ದ ತಮ್ಮ ಸೈದ್ಧಾಂತಿಕ ನಿಲುವುಗಳನ್ನು ಪ್ರದರ್ಶಿಸಬೇಕಿತ್ತು. ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ ನಗರಕ್ಕೆ ಏನೇನು ಸೌಲಭ್ಯಗಳನ್ನು ಕೊಡಬಹುದು ಎಂಬುದರಿಂದ ಹಿಡಿದು ನಗರದ ವಾರ್ಡ್‍ವಾರು ಚಿತ್ರಣದ ಒಂದಷ್ಟು ರೂಪುರೇಶೆಗಳನ್ನು ಪ್ರಕಟಿಸಬೇಕಿತ್ತು. ವಿವಿಧ ಪಕ್ಷಗಳಿಗೆ ಅವರದ್ದೇ ಆದ ನಿಲುವುಗಳಿವೆ. ಒಂದೊಂದು ಪಕ್ಷಕ್ಕೂ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿವೆ. ಅಭಿವೃದ್ಧಿಯ ವಿಷಯದಲ್ಲಿಯೂ ಪಕ್ಷವಾರು ವಿಭಿನ್ನ ನಿಲುವುಗಳಿವೆ. ಇಂತಹ ನಿಲುವುಗಳನ್ನು ಮತದಾರನ ಮುಂದೆ ಪ್ರದರ್ಶಿಸಬೇಕು. ಈ ಕಾರಣಕ್ಕಾಗಿ ನಮಗೆ ಮತ ನೀಡಿ ಎಂದು ಪಕ್ಷಗಳು ಭಿನ್ನವಿಸಿಕೊಳ್ಳಬೇಕು. ಆದರೆ ಇಂತಹ ಪ್ರಯತ್ನಗಳೇ ನಡೆದಿಲ್ಲ.

      ನಗರದ ಸಮಗ್ರ ಚಿತ್ರಣ, ತಮ್ಮ ಪಕ್ಷಗಳ ಪರಿಕಲ್ಪನೆ, ಅಭಿವೃದ್ಧಿಗೆ ಯಾವ ರೀತಿಯ ಒತ್ತು ನೀಡಲಾಗುತ್ತದೆ ಎಂಬ ಸ್ಪಷ್ಟ ಸಂದೇಶ ಸಾರುವ ಚುನಾವಣಾ ಪ್ರಣಾಳಿಕೆ ಸರ್ವಕಾಲಕ್ಕೂ ಅತ್ಯಂತ ಮುಖ್ಯ ಎಂದೇ ಭಾವಿಸಲಾಗುತ್ತಿದೆ. ಆದರೆ ಪ್ರಚಾರದ ಭರಾಟೆ ತೀವ್ರಗೊಂಡಿರುವ ಈ ಸಮಯದಲ್ಲಿ ಯಾರೊಬ್ಬರೂ ಪ್ರಣಾಳಿಕೆಯ ಬಗ್ಗೆ ಮಾತನಾಡುತ್ತಿಲ್ಲ. ಪಕ್ಷಗಳು, ಅಭ್ಯರ್ಥಿಗಳು ಮಾತನಾಡುವುದಿರಲಿ ಮತದಾರರು ಆ ಬಗ್ಗೆ ಪ್ರಶ್ನಿಸುತ್ತಿಲ್ಲ. ಹೀಗಾದರೆ ನಗರ ಪಾಲಿಕೆಗೆ ಪ್ರತಿನಿಧಿಯಾಗಿ ಆಯ್ಕೆಯಾಗಿ ಬರುವ ವಾರ್ಡ್ ಸದಸ್ಯನ ಒಂದು ದೂರದೃಷ್ಟಿತ್ವ ಏನು ಎಂದು ತಿಳಿಯುವುದಾದರೂ ಹೇಗೆ?

      ಚುನಾವಣೆಯಲ್ಲಿ ಸ್ಪರ್ಧಿಸಿರುವ ಪ್ರತಿಯೊಬ್ಬರೂ ಒಂದೊಂದು ನಿಲುವು ತಾಳಿರುತ್ತಾರೆ. ಅವರದ್ದೇ ಆದ ವೈಯಕ್ತಿಕ ನಿಲುವುಗಳಿರುತ್ತವೆ. ಇದು ಒಟ್ಟಾರೆ ಮತದಾರನ ಪರಿಕಲ್ಪನೆ ಆಗಿರಲಾರದು. ಗೆಲ್ಲಬೇಕೆಂಬ ಹಠದಲ್ಲಿ ಪ್ರಚಾರದ ಭರಾಟೆಗೆ ಬಿದ್ದು ಅಥವಾ ಮತ್ತಿನ್ನಾವುದೋ ಮಾರ್ಗಗಳನ್ನು ಹಿಡಿದು ಆರಿಸಿ ಬಂದರೆ ಅಂತಹವರಲ್ಲಿ ಚುನಾವಣೆಯ ಅರ್ಥ, ಪಕ್ಷಗಳ ಸಿದ್ಧಾಂತ ಮತ್ತು ನಿಲುವು ಅರ್ಥವಾಗುವುದಾದರೂ ಹೇಗೆ?

      ಪ್ರಸ್ತುತ ತುಮಕೂರು ನಗರದಲ್ಲಿ ಸಮಸ್ಯೆಗಳು ಹಲವಾರಿವೆ. ಒಂದೊಂದು ಬಡಾವಣೆಯಲ್ಲಿಯೂ ಒಂದೊಂದು ಸಮಸ್ಯೆಗಳು ಬೃಹದಾಕಾರವಾಗಿ ತೆರೆದುಕೊಳ್ಳುತ್ತವೆ. ಕೆಲವು ಸಮಸ್ಯೆಗಳನ್ನು ತಕ್ಷಣಕ್ಕೆ ಪರಿಹರಿಸಲು ಸಾಧ್ಯವಾಗದೇ ಇರಬಹುದು. ಆದರೆ ಪ್ರಯತ್ನಪಟ್ಟರೆ ಸಮಸ್ಯೆಗಳ ಸರಮಾಲೆಯನ್ನು ಸರಿಪಡಿಸಲು ಸಾಧ್ಯವಿದೆ. ಬೀದಿದೀಪ, ರಸ್ತೆ, ಚರಂಡಿ ವ್ಯವಸ್ಥೆ, ನೀರಿನ ವ್ಯವಸ್ಥೆ ಇವಿಷ್ಟೇ ವಿಷಯಗಳಲ್ಲ. ಇದರಾಚೆ ಇನ್ನೂ ಹಲವು ಸಮಸ್ಯೆಗಳಿವೆ. ಪಾರ್ಕ್‍ಗಳನ್ನು ಅಭಿವೃದ್ಧಿಪಡಿಸುವುದರಿಂದ ಹಿಡಿದು ನಿಸರ್ಗ ಸ್ನೇಹಿ ಬಡಾವಣೆಗಳನ್ನಾಗಿಸುವ ನಿಟ್ಟಿನಲ್ಲಿ ಆಲೋಚನೆಗಳು ರೂಪುಗೊಳ್ಳಬೇಕು. ಸ್ಮಾರ್ಟ್‍ಸಿಟಿಯಾಗುತ್ತಿರುವ ನಗರದ ಸರ್ವಾಂಗೀಣ ಪ್ರಗತಿಯ ಸ್ಪಷ್ಟ ಚಿತ್ರಣ ಇರಬೇಕು.

      ಚುನಾವಣೆ ಮುಗಿದು ಯಾವುದಾದರೊಂದು ಪಕ್ಷ ಸರಳ ಬಹುಮತದ ಮೂಲಕ ಅಧಿಕಾರಕ್ಕೆ ಬರಬಹುದು. ಅಥವಾ ಇದುವರೆಗಿನ ರೀತಿಯಲ್ಲಿಯೇ ಸಮ್ಮಿಶ್ರ ಪಕ್ಷಗಳ ಆಡಳಿತ ನಡೆಯಬಹುದು. ಅದೇನೇ ಇರಲಿ. ಆಡಳಿತ ಚುಕ್ಕಾಣಿ ಹಿಡಿದ ಸಂದರ್ಭದಲ್ಲಿ ಮುಂದಿನ 5 ವರ್ಷಗಳವರೆಗಿನ ಆಡಳಿತ ಹೇಗಿರುತ್ತದೆ ಎಂಬ ಒಂದು ಸ್ಥೂಲ ನೀಲಿನಕ್ಷೆ ಇರಲೇಬೇಕು. ಅಂತಹ ನಕ್ಷೆ ಸಿದ್ಧವಾಗಬೇಕಿರುವುದು ಚುನಾವಣೆಯ ಸಂದರ್ಭದಲ್ಲಿಯೇ. ಮತದಾರನ ಮುಂದೆ ಹೋಗುವಾಗ ನಾವು ನಗರವನ್ನು ಈ ರೀತಿ ಅಭಿವೃದ್ಧಿಪಡಿಸಲು ಬಯಸಿದ್ದೇವೆ ಎಂಬುದರಿಂದ ಹಿಡಿದು ಮುಂದಿನ 5 ವರ್ಷಗಳ ಆಡಳಿತ ಹೇಗಿರುತ್ತದೆ ಎಂಬ ಸಂಕ್ಷಿಪ್ತ ವಿವರವನ್ನು ಪ್ರಣಾಳಿಕೆಯ ಮೂಲಕವೇ ಪ್ರಕಟಿಸಬೇಕು. ಆಗ ಮಾತ್ರ ಪ್ರಜ್ಞಾವಂತ ಮತದಾರರು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿಕೊಳ್ಳಲು ಸಾಧ್ಯವಾಗಲಿದೆ.

      ಈಗ ನಡೆಯುತ್ತಿರುವುದು ಗೊತ್ತುಗುರಿಗಳಿಲ್ಲದ ಚುನಾವಣೆ. ಬದ್ಧತೆ ಮತ್ತು ದೂರದೃಷ್ಟಿತ್ವ ಎರಡೂ ಕಾಣುತ್ತಿಲ್ಲ. ಒಟ್ಟಾರೆ ಅಧಿಕಾರಾವಧಿಯ ಗುರಿಯ ಬಗ್ಗೆ ಯಾರಲ್ಲೂ ಸ್ಪಷ್ಟ ನಿಲುವು ಇಲ್ಲ. ಗೆಲ್ಲಬೇಕು ಎಂಬ ಹಠ ಒಂದೇ ಅವರ ಮುಂದೆ ಕಾಣುತ್ತಿದೆ. ಚುನಾವಣೆ ಸಂದರ್ಭದಲ್ಲಿ ಚರ್ಚೆಗೆ ಬರಬೇಕಾಗಿರುವುದು ಅಭಿವೃದ್ಧಿ ಕುರಿತ ವಿಷಯಗಳು. ಇದನ್ನು ಹೊರತುಪಡಿಸಿ ಮಿಕ್ಕೆಲ್ಲಾ ವಿಷಯಗಳು ಚರ್ಚೆಗೆ ಒಳಪಡುತ್ತಿವೆ. ನಾಳೆ ಯಾವುದೇ ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬಂದಾಗ ಅವರ ಬದ್ಧತೆ ಏನು ಎಂಬುದಕ್ಕೆ ಈಗಂತೂ ಸ್ಪಷ್ಟತೆ ಇಲ್ಲ.

      ಪಕ್ಷಗಳಿಂದ ಅಭ್ಯರ್ಥಿಗಳ ಆಯ್ಕೆ ಆತನ ಆರ್ಥಿಕ ಸದೃಢತೆ, ಜಾತಿ ಮತ್ತು ಮುಂದಿನ ಶಾಸನ ಸಭೆ ಚುನಾವಣೆಗೆ ಅಭ್ಯರ್ಥಿಯಿಂದ ಎಷ್ಟು ಮತ ಗಳಿಸಿ ಕೊಡಬಲ್ಲ ಎಂಬಿತ್ಯಾದಿ ಮಾನದಂಡ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ನಗರವನ್ನು ಸರ್ವಸ್ವ ಅಭಿವೃದ್ಧಿಪಡಿಸುವ ಸೊಲ್ಲು ಯಾವ ಪಕ್ಷ ಅಥವಾ ಸ್ವತಂತ್ರ ಅಭ್ಯರ್ಥಿಗಳಿಂದ ಬಾರದಿರುವುದು ಈ ಚುನಾವಣೆಯ ದೌರ್ಭಾಗ್ಯ.

      ಮತದಾರರು ಅಷ್ಟೇ ಬೇಜವಾಬ್ದಾರಿಯಿಂದ ಮತ ಚಲಾಯಿಸುವುದು ನಗರಾಭಿವೃದ್ಧಿಗೆ ತೊಡಕಾಗುತ್ತದೆ. ಅಭ್ಯರ್ಥಿ ಎಷ್ಟು ವಿನಯವಂಥ, ನಾವು ಆದೇಶಿಸಿದ ಕೆಲಸ ಕಾರ್ಪೋರೇಷನ್‍ನಲ್ಲಿ ಸಮರ್ಥವಾಗಿ ನಿಭಾಯಿಸುವನೆ ಮತ್ತು ವಿನಯಶೀಲನಾಗಿ ನಡೆದುಕೊಳ್ಳುವನೆ ಎಂಬುದನ್ನು ಮತದಾರರು ಯೋಚಿಸದೇ ಇರುವುದು ದೌರ್ಭಾಗ್ಯ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link