ಬೆಂಗಳೂರು
ಹಣದಾಸೆಗಾಗಿ ಸ್ನೇಹಿತನ ಮಗುವನ್ನು ಅಪಹರಿಸಿ ಕಾರಿನಲ್ಲಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಸುಮಾರು 250 ಕಿಲೋಮೀಟರ್ ವರೆಗೆ ಬೆನ್ನಟ್ಟಿ ಜ್ಞಾನಭಾರತಿ ಪೊಲೀಸರು ಬಂಧಿಸಿ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ತರ ಭಾರತ ಮೂಲದ ದಂಪತಿಯ 11 ತಿಂಗಳ ಹೆಣ್ಣು ಮಗುವನ್ನು ಅಪಹರಿಸಿದ್ದ ಕುಮಾರ್ ಬಂಧಿತ ಆರೋಪಿಯಾಗಿದ್ದಾನೆ,ಬಂಧಿತನಿಂದ ಕೃತ್ಯಕ್ಕೆ ಬಳಸಿದ ಕಾರು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ಉತ್ತರ ಭಾರತ ಮೂಲದ ಚಂದನ್ ಮತ್ತು ರಾಣಿ ದಂಪತಿ ಉದ್ಯೋಗ ಅರಸಿ ನಗರಕ್ಕೆ ಬಂದು ಮಲ್ಲತ್ತಹಳ್ಳಿಯಲ್ಲಿ ನೆಲೆಸಿದ್ದು ದಂಪತಿಗೆ ಆರೋಪಿ ಕುಮಾರ್ ಕುಟುಂಬ ಸ್ನೇಹಿತ ಆಗಿದ್ದನು.ಆಗಾಗ ಸ್ನೇಹಿತನ ಮನೆಗೆ ಬರುತ್ತಿದ್ದ ಆರೋಪಿ ಕುಮಾರ್ ಚಂದನ್ ರಾಣಿ ದಂಪತಿಯ 11 ತಿಂಗಳ ಹೆಣ್ಣು ಮಗುವನ್ನು ನೋಡಿದ್ದಾನೆ. ಬಳಿಕ ಜ. 16ರಂದು ಚಂದನ್ ಮನೆ ಖಾಲಿ ಮಾಡುವ ವೇಳೆ ಸಹಾಯಕ್ಕಾಗಿ ಕುಮಾರನನ್ನು ಕರೆದಿದ್ದರು.
ಮಲಗಿದ್ದಾಗ ಅಪಹರಣ
ಮನೆ ವಸ್ತುಗಳನ್ನು ಸಾಗಿಸುವ ವೇಳೆ ಹಣ ಚಿನ್ನಾಭರಣವಿರುವುದನ್ನು ಗಮನಿಸಿದ ಕುಮಾರ್ ಅವುಗಳನ್ನು ದೋಚಲು ಸಂಚು ರೂಪಿಸಿ ಮಲಗಿದ್ದ ಮಗುವನ್ನು ಎತ್ತಿಕೊಂಡು ಕಾರಿನಲ್ಲಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ
ಅಪಹರಿಸಿದ್ದ ಮಗುವನ್ನು ತಮಿಳುನಾಡಿಗೆ ಕರೆದೊಯ್ದಿದ್ದ ಆರೋಪಿಯು ಚಂದನ್ ದಂಪತಿಗೆ ಮೊಬೈಲ್ ಕರೆ ಮಾಡಿ ಮಗು ಸುರಕ್ಷಿತವಾಗಿ ಬಿಡುಗಡೆ ಮಾಡಲು 2 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದನು ಆತಂಕಗೊಂಡ ದಂಪತಿಯು ಈ ಸಂಬಂಧ ನೀಡಿದ ದೂರು ಆಧರಿಸಿ ಮೊಬೈಲ್ ಜಾಡು ಹಿಡಿದು ಕಾರ್ಯಪ್ರವೃತ್ತರಾದ ಜ್ಞಾನಭಾರತಿ ಪೊಲೀಸರು ಆರೋಪಿಯು ಮಗುವಿನೊಂದಿಗೆ ಬೆಂಗಳೂರು-ತಮಿಳುನಾಡು ಹೆದ್ದಾರಿಯಲ್ಲಿ ಕಾರಿನಲ್ಲಿ ಹೋಗುತ್ತಿರುವ ಮಾಹಿತಿ ಪತ್ತೆಯಾಯಿತು.
ಕೂಡಲೇ ಕಾರನ್ನು ಹಿಂಬಾಲಿಸಿ ಸುಮಾರು 250 ಕಿ.ಮೀ ವರೆಗೆ ಕಾರನ್ನು ಬೆನ್ನಟ್ಟಿ ಆರೋಪಿಯನ್ನು ತಮಿಳುನಾಡಿನಲ್ಲಿ ಬಂಧಿಸಿ ಮಗುವನ್ನು ರಕ್ಷಿಸಿದ್ದಾರೆ ಕಾರ್ಯಾಚರಣೆ ನಡೆಸಿದ ಪೊಲೀಸರನ್ನು ಡಿಸಿಪಿ ರವಿ ಚೆನ್ನಣ್ಣನವರ್ ಅಭಿನಂದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ