ಚಿತ್ರದುರ್ಗ:
ಅಸ್ಸಾಮ್‍ನಲ್ಲಿ ಜಾತಿಬೇಧ, ಮತಭೇದದ ಯಾವುದೇ ಕಟ್ಟಳೆಗಳಿಲ್ಲ. ಯಾವುದೇ ರೀತಿಯ ತಾರತಮ್ಯ ಕಂಡುಬರುವುದಿಲ್ಲ. ಅಲ್ಲಿನ ಆಹಾರ ಪದ್ಧತಿ ಎಲ್ಲರಲ್ಲೂ ಒಂದೆ ರೀತಿಯ ಆಹಾರ ಪದ್ಧತಿಯಾಗಿದೆ ಎಂದು ಭಾಗೀರತಿ ಬಾಯಿ ಹೇಳಿದರು.
ನಗರದ ತರಾಸು ರಂಗಮಂದಿರಲ್ಲಿ ಬಂಡಾಯ ಸಾಹಿತ್ಯ ಸಂಘಟನೆ: ಕರ್ನಾಟಕ ಆಯೋಜಿಸಿದ್ದ ಭಾರತೀಯ ಸಾಹಿತ್ಯ ಮತ್ತು ಬಂಡಾಯ ಪರಂಪರೆ ಪರಿಕಲ್ಪನಾತ್ಮಕ ಚಿಂತನೆ ಕುರಿತ ಎರಡು ದಿನಗಳ ಸಾಹಿತ್ಯ ಸಂವಾದದಲ್ಲಿ ಭಾನುವಾರ ಅಸ್ಸಾಮಿ ಸಾಹಿತ್ಯ ಕುರಿತು ವಿಚಾರ ಮಂಡಿದಸಿದರು.
ಅಸ್ಸಾಮಿ ಸಾಹಿತ್ಯದಲ್ಲಿ ಜಾತಿ, ಮತ, ಧರ್ಮದ ತಾರತಮ್ಯಗಳು ಕಂಡು ಬರುವುದಿಲ್ಲ. ಅಲ್ಲಿ ಯಾವ ಕಟ್ಟಳೆಗಳೂ ಕಂಡು ಬರದಿರುವುದರಿಂದ ಅಸ್ಸಾಮಿ ಸಾಹಿತ್ಯದಲ್ಲಿ ಬಂಡಾಯದ ಲೇಖನಗಳು, ಬರಹಗಳು ಕಂಡು ಬರುವುದಿಲ್ಲ. ಎಲ್ಲರ ಆಹಾರ ಪದ್ಧತಿ ಒಂದೇ ಆಗಿದೆ. ಅಸ್ಸಾಮ್‍ನಲ್ಲಿ ಮದುವೆ ಸಂದರ್ಭದಲ್ಲಿ ಉಡುಗೊರೆಯಾಗಿ ಮೀನನ್ನು ನೀಡಲಾಗುತ್ತದೆ. ಅದನ್ನು ಬ್ರಾಹ್ಮಣರು ಕೂಡ ಸ್ವೀಕರಿಸುತ್ತಾರೆ. ಹಾಗೆಯೇ ಅವರೂ ಕೂ ಮೀನನ್ನು ಉಡುಗೊರೆಯಾಗಿ ನೀಡುತ್ತಾರೆ ಎಂದರು.
ಅಸ್ಸಾಮ್‍ನಲ್ಲಿ ಮೌಖಿಕ ಪರಂಪರೆ ಸೃಷ್ಟಿಯಾಗಿ ಸಾಹಿತ್ಯ ರಚನೆಯಾಗಿದೆ. 1904ರಲ್ಲಿ ನೇಪಾಳದಲ್ಲಿ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಅಸ್ಸಾಮ್ ಸಾಹಿತ್ಯದ ಕವಿತೆ ಲಭಿಸಿತು. ಅವರ ಎಲ್ಲ ಹಾಡುಗಳು ಪ್ರಕೃತಿಯನ್ನು ಕುರಿತು ರಚಿಸಿದ ಹಾಡುಗಳಾಗಿವೆ ಎಂದರು.
ಮರಾಠಿ ಸಾಹಿತ್ಯದ ಕುರಿತು ವಿಚಾರ ಮಂಡಿಸಿದ ಸಾಹಿತಿ ಚಂದ್ರಕಾಂತ ಪೋಕಳೆ, ಬಂಡಾಯ ಸಾಹಿತ್ಯವು ಮರಾಠಿಯಲ್ಲಿ ವಿದ್ರೋಹ ಸಾಹಿತ್ಯವಾಗಿ 1990ರಲ್ಲಿ ರಚನೆಗೊಂಡಿತು. ಈ ವಿದ್ರೋಹ ಸಾಹಿತ್ಯ ಮಹಾರಾಷ್ಟ್ರದಲ್ಲಿನ ಪುರೋಹಿತಶಾಹಿಯ ವಿರುದ್ಧ ಪ್ರಬಲವಾಗಿ ಹೋರಾಟ ಮಾಡಿತು. ಅಲ್ಲಿ ಪುರೋಹಿತಶಾಹಿ ಸಾಹಿತ್ಯ ವಾತಾಪಿ ಗರ್ಭದಂತೆ ಬೆಳೆದಿತ್ತು. ಅದು ವಿದ್ರೋಹಿ ಸಾಹಿತ್ಯದ ಮೇಲೆ ಪ್ರಬಲವಾದ ಹಿಡಿತ ಸಾಧಿಸಿತ್ತು ಎಂದರು.
ಮಹಾರಾಷ್ಟ್ರದಲ್ಲಿ ಸಂತ ಪರಂಪರೆಯ ವ್ಯಕ್ತಿಗಳೂ ಕೂಡ ದೇವರನ್ನು ಪ್ರಶ್ನಿಸುವ ಮೂಲಕ ವಿದ್ರೋಹಿಗಳಾದರು. ಮಾಕ್ರ್ಸ್‍ನಿಂದ ವಿದ್ರೋಹಕ್ಕೆ ಖಚಿತವಾದ ಸಿದ್ಧಾಂತ ಮತ್ತು ತಾತ್ವಿಕತೆ ಲಭಿಸಿತು. ಭಕ್ತಿಪಂಥ ಅಧ್ಯಯನಮಾಡಲು ಸಮಾಜಶಾಸ್ತ್ರೀಯ ಅಧ್ಯಯನ ಅಗತ್ಯ. ವಿದ್ರೋಹ ಸಮಾಜದಲ್ಲಿನ ಮಾಲಿನ್ಯವನ್ನು ಹೋಗಲಾಡಿಸುತ್ತದೆ. ಶಿವಾಜಿಯ ಪ್ರಭಾವ ಹಾಗೂ ಪ್ರೇರಣೆ ಕೂಡ ಈ ವಿದ್ರೋಹದ ಮೇಲಿತ್ತು. ಆದ್ದರಿಂದ ಅದು ಮಹತ್ವದ್ದು ಎಂದರು.
ದಲಿತ ಸಾಹಿತ್ಯ ಕೂಡ ವಿದ್ರೋಹದ ನೆಲೆಯಲ್ಲೇ ಸಾಗುತ್ತಿತ್ತು. ಪುಲೆ, ಶಾಹು ಮಹಾರಾಜ ಹಾಗೂ ಅಂಬೇಡ್ಕರ್ ಅವರು ವಿದ್ರೋಹದ ಪ್ರೇರಕ ಶಕ್ತಿಯಾಗಿದ್ದರು. ಪುರೋಹಿತಶಾಹಿಗಳಿಗೆ ಬಾಲಗಂಗಾಧರ ತಿಲಕರ ನೇತೃತ್ವ ಸಿಕ್ಕಿತ್ತು. ದಲಿತರಿಗೆ ಶಾಹು ಮಹಾರಾಜರು ಬೆಂಬಲವಾಗಿ ತಿಲಕರಿಗೆ ಸವಾಲಾಗಿ ನಿಲ್ಲುತ್ತಾರೆ ಎಂದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಮೈಸೂರು ರಂಗಾಯಣದ ನಿರ್ದೇಶಕಿ ಸುಕನ್ಯಾ ಮಾರುತಿ ಮಾತನಾಡಿ, ನಮ್ಮ ಸಾಹಿತ್ಯ ಮೌಲಿಕವಾಗಿರಬೇಕು. ಸೈದ್ಧಾಂತಿಕ ವಿರೋಧಿಗಳಿಗೆ ನೀಡುವ ಉತ್ತರವೂ ಕೂಡ ಮೌಲಿಕವಾಗಿರಬೇಕು. ಭಾಷೆ ಬೇರೆ ಇದ್ದಾಗ ವಿಚಾರಗಳು ನಮ್ಮನ್ನು ಆಪ್ತವಾಗಿ ಬೆಸೆಯುತ್ತವೆ ಎಂದರು.
ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿರುವ ಮೀ ಟೂ ಚಳವಳಿ ಹೈಟೆಕ್ ಹೆಣ್ಣುಮಕ್ಕಳು ಉದ್ಯೋಗ ಕ್ಷೇತ್ರಗಳಲ್ಲಿ ನಡೆದ ಲೈಂಗಿಕ ದೌರ್ಜನ್ಯಗಳು ಹಾಗೂ ಶೋಷಣೆ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ದಲಿತ ಹಾಗೂ ಸಾಮಾನ್ಯ ಹೆಣ್ಣುಮಕ್ಕಳ ಮೇಲಿನ ಶೋಷಣೆ ಹಾಗೂ ದೌರ್ಜನ್ಯಕ್ಕೆ ಮೀ ಟೂ ಚಳವಳಿಗೂ ಬಹಳ ವ್ಯತ್ಯಾಸವಿದೆ. ಸುಲಭವಾಗಿ ಸಿಗುತ್ತಾರೆಂದು, ಸುಂದರವಾಗಿ ಹುಟ್ಟಿಇರುವ ಕಾರಣಕ್ಕೆ ಹಾಗೂ ಗಂಡ ದುರ್ಬಲನಾಗಿದ್ದಾನೆ ಎಂಬ ಕಾರಣಕ್ಕೆ ಗ್ರಾಮೀಣ ಭಾರತದಲ್ಲಿ ಹೆಣ್ಣುಮಕ್ಕಳ ಮೇಲೆ ಲೈಂಗಿಕವಾಗಿ ಶೋಷಿಸಲಾಗುತ್ತಿದೆ, ದೌರ್ಜನ್ಯ ಎಸಗಲಾಗುತ್ತಿದೆ. ದಲಿತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸಲಾಗುತ್ತದೆ. ತಕ್ಷಣವೇ ಅದರ ತನಿಖೆ ನಡೆಸಿ ಶೋಷಿತರ ಮೇಲೆಯೇ ತಪ್ಪಿತಸ್ಥರನ್ನಾಗಿ ಮಾಡಲಾಗುತ್ತದೆ ಎಂದರು.
ಹೈಟೆಕ್ ಹೆಣ್ಣುಮಕ್ಕಳು ಹೆಣ್ಣುಮಕ್ಕಳು ತಮ್ಮ ವಿವಿಧ ಅಜೆಂಡಾ ಇಟ್ಟಕೊಂಡು, ತಮ್ಮ ಕೆಲಸ ಸಾಧಿಸಿಕೊಂಡು 10-20 ವರ್ಷಗಳ ನಂತರ ತಮ್ಮ ಮೇಲೆ ನಡೆದ ಲೈಂಗಿಕ ಶೋಷಣೆಯಂತಹ ಘಟನೆಗಳ ಬಗ್ಗೆ ಚರ್ಚೆ ಮಾಡಿದರೆ ಎಷ್ಟು ಸರಿ ಎಂದು ಪ್ರಶ್ನಿಸಿದರು.ಹೆಣ್ಣು ಮಕ್ಕಳು ತಮ್ಮನ್ನು ತಾವು ವಿಶ್ಲೇಷಣೆ ಮಾಡಿಕೊಂಡು, ವಿವೇಚನೆಯಿಂದ ಆಲೋಚಿಸುವ ಮೂಲಕ ಮುನ್ನಡೆಯಬೇಕು. ಗಂಡು-ಹೆಣ್ಣು ಪರಸ್ಪರ ಹೆಗಲು ಕೊಟ್ಟು ದುಡಿಯಬೇಕು. ಈ ನಿಟ್ಟಿನಲ್ಲಿ ಹೋರಾಟವನ್ನು ಹೊಸ ರೀತಿಯಲ್ಲಿ ಕಟ್ಟಲು ಯುವಜನರು ಹಾಗೂ ವಿದ್ಯಾರ್ರ್ಥಿಗಳು ಬಂಡಾಯದ ಜೊತೆ ಕೈಜೋಡಿಸಬೇಕು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ