ಕ್ರಿಪ್ಟೊ ಕರೆನ್ಸಿಗೆ ಡಿಜಿಟಲ್ ರುಪಿ ಪೈಪೋಟಿ: ಭಾರತ ಸರ್ಕಾರದಿಂದಲೇ ಡಿಜಿಟಲ್ ಕರೆನ್ಸಿ ಜಾರಿ ಘೋಷಣೆ

ಬೆಂಗಳೂರು:

          ಡಿಜಿಟಲ್ ಇಂಡಿಯಾಗೆ ಒತ್ತು ಕೊಟ್ಟಿರುವ ಭಾರತ ಸರ್ಕಾರ ಹಣಕಾಸಿನ ವಹಿವಾಟಿನಲ್ಲೂ ಡಿಜಿಟಲ್​ಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ‘ಡಿಜಿಟಲ್ ರುಪಿ’ ಚಾಲನೆಗೆ ತರಲು ಮುಂದಾಗಿದೆ. ಸದ್ಯ ಡಿಜಿಟಲ್ ಕರೆನ್ಸಿ ಎಂದರೆ ಬಿಟ್ ಕಾಯಿನ್ ಮುಂತಾದ ಕ್ರಿಪ್ಟೊ ಕರೆನ್ಸಿಗಳೇ ಕಣ್ಮುಂದೆ ಬರುತ್ತವೆ.

    ಅವುಗಳ ಬದಲಿಗೆ ಸರ್ಕಾರದ್ದೇ ಆದ ಡಿಜಿಟಲ್ ಕರೆನ್ಸಿ ಹೊರತರುವ ಕುರಿತು ಈ ಬಜೆಟ್​ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದ್ದಾರೆ.

ಡಿಜಿಟಲ್ ಕರೆನ್ಸಿ ಮೂಲಕ ಪರಿಣಾಮಕಾರಿ ಹಣಕಾಸು ನಿರ್ವಹಣೆ ಜತೆಗೆ ಡಿಜಿಟಲ್ ಆರ್ಥಿಕತೆಗೆ ಒತ್ತು ಕೊಡುವುದು ಸರ್ಕಾರದ ಉದ್ದೇಶ. ಇದರಿಂದ ಮುದ್ರಿತ ನೋಟುಗಳಿಗಿಂತಲೂ ಕಡಿಮೆ ಖರ್ಚಿನಲ್ಲಿ ಹಣಕಾಸನ್ನು ಒದಗಿಸಬಹುದು. ಭಾರತೀಯ ರಿಸರ್ವ್ ಬ್ಯಾಂಕ್ ಮೂಲಕ ಬ್ಲಾಕ್​ಚೈನ್ ತಂತ್ರಜ್ಞಾನ ಬಳಸಿಕೊಂಡು ಡಿಜಿಟಲ್ ಕರೆನ್ಸಿ ಜಾರಿಗೆ ತರಲಿರುವುದರಿಂದ ನಕಲಿ ನೋಟು,

ಮೋಸ ತಡೆಯಬಹುದು. ಅಲ್ಲದೆ ಇದರ ಬಳಕೆಯಿಂದ ಪಾರದರ್ಶಕತೆ ಬರುವುದರಿಂದ ತೆರಿಗೆ ವಂಚನೆ ಆಗುವುದು ಕೂಡ ತಗ್ಗಲಿದೆ. ಹೀಗಾಗಿ ಡಿಜಿಧನ ರೂಪಿಸಿ ಜನರನ್ನು ಅದರಲ್ಲಿ ಬಿಜಿಗೊಳಿಸುವ ಮೂಲಕ ಡಿಜಿಟಲ್ ಇಂಡಿಯಾದತ್ತ ಮತ್ತೊಂದು ದಾಪುಗಾಲು ಇಡುವುದು ಸರ್ಕಾರದ ಗುರಿ.

ಏನಿದು ಡಿಜಿಟಲ್ ಕರೆನ್ಸಿ?

ಡಿಜಿಟಲ್ ರುಪೀ ಒಂದು ರೀತಿಯಲ್ಲಿ ಹಣಕಾಸು ಮಾಧ್ಯಮ. ಆದರೆ ನೋಟಿನ ಬದಲು ಡಿಜಿಟಲ್ ರೂಪದಲ್ಲಿ ಇರುವ ಇದನ್ನು ತಾಂತ್ರಿಕವಾಗಿ ಕ್ರಿಪ್ಟೊ ಕರೆನ್ಸಿ ಎಂದು ಕರೆಯಲಾಗುತ್ತದೆ. ಇದನ್ನು ಎನ್ಕ್ರಿಪ್ಷನ್ ತಂತ್ರಜ್ಞಾನದಿಂದ ಸೃಷ್ಟಿಸಲಾಗುತ್ತದೆ. ಇದರ ಒಂದು ಯುನಿಟ್ ಸೃಷ್ಟಿ, ವಿನಿಮಯ, ಪಾವತಿ ದಾಖಲೆ ಎಲ್ಲವೂ ಡಿಜಿಟಲ್ ಆಗಿರುತ್ತದೆ.

ಸಾಂಪ್ರದಾಯಿಕ ಹಣಕಾಸು ವ್ಯವಸ್ಥೆಯಲ್ಲಿ ಮೂರನೇ ಸಂಸ್ಥೆ ಅಂದರೆ ಸಾಮಾನ್ಯವಾಗಿ ಬ್ಯಾಂಕ್ ಈ ಹಣ ಅಧಿಕೃತ ಎಂದು ಹೇಳುವ ಜತೆಗೆ ವಿನಿಮಯವನ್ನು ದಾಖಲಿಸಿಕೊಳ್ಳುತ್ತದೆ. ಆದರೆ ಡಿಜಿಟಲ್ ಕರೆನ್ಸಿ ವ್ಯವಸ್ಥೆಯಲ್ಲಿ ಕ್ರಿಪ್ಟೊ ಕರೆನ್ಸಿಯು ಖಾಸಗಿ ಸರಣಿ ಕಂಪ್ಯೂಟರ್​ಗಳ ಜಾಲದ ಮೂಲಕ ನಿರ್ವಹಣೆ ಆಗುತ್ತದೆ ಹಾಗೂ ಕ್ರಿಪ್ಟೊಗ್ರಾಫಿಕ್ ಪಝುಲ್​ಗಳ ಮೂಲಕ ಇವುಗಳ ವಿನಿಮಯ ಅಧಿಕೃತಗೊಳ್ಳುತ್ತದೆ.

ಈ ಪ್ರಕ್ರಿಯೆಯನ್ನು ‘ಮೈನಿಂಗ್’ ಎನ್ನಲಾಗುತ್ತದೆ. ಎನ್ಕ್ರಿಪ್ಷನ್ ಮೂಲಕ ನಡೆಯುವ ಡಿಜಿಟಲ್ ಕರೆನ್ಸಿ ವಹಿವಾಟು ಬ್ಲಾಕ್​ಚೈನ್ ಮೂಲಕ ದಾಖಲಾಗುತ್ತದೆ. ಉದಾಹರಣೆಗೆ- ಒಂದು ಕ್ರಿಪ್ಟೊ ಕರೆನ್ಸಿ ಅರ್ಥಾತ್ ಬಿಟ್​ಕಾಯಿನ್​ನಲ್ಲಿ ಹಲವಾರು ಸಂಕೇತ(ಕೋಡ್)ಗಳು ಬ್ಲಾಕ್​ಚೈನ್​ನಲ್ಲಿ ದಾಖಲಾಗಿರುತ್ತವೆ. ಈ ಕರೆನ್ಸಿ ಹೆಚ್ಚುಹೆಚ್ಚು ವಿನಿಮಯ ಆಗುತ್ತಿದ್ದಂತೆ ನಿಗದಿತ ಬ್ಲಾಕ್​ಚೈನ್ ಉದ್ದವಾಗುತ್ತ ಹೋಗುತ್ತದೆ.

ಜನಪ್ರಿಯ ಕ್ರಿಪ್ಟೊ ಕರೆನ್ಸಿಗಳು: 

ಭಾರತದಲ್ಲಿ ಕ್ರಿಪ್ಟೊ ಕರೆನ್ಸಿ ಎಂದ ತಕ್ಷಣ ಸಾಮಾನ್ಯವಾಗಿ ನೆನಪಿಗೆ ಬರುವ ಹೆಸರೆಂದರೆ ಬಿಟ್​ಕಾಯಿನ್. ಸದ್ಯ ಕ್ರಿಪ್ಟೊಕರೆನ್ಸಿಗಳ ಪೈಕಿ ಬಿಟ್​ಕಾಯಿನ್ ಹೆಚ್ಚು ಜನಪ್ರಿಯ ಹಾಗೂ ಅಧಿಕ ಚಲಾವಣೆಯಲ್ಲಿ ಇರುವಂಥದ್ದು. ಆ ಬಳಿಕ ಈಥಿರಿಯಂ, ಟೀಥರ್, ಬಿನಾನ್ಸ್ ಕಾಯಿನ್, ಯುಎಸ್​ಡಿ ಕಾಯಿನ್ ಮುಂತಾದ ಕ್ರಿಪ್ಟೊಕರೆನ್ಸಿಗಳಿವೆ.

ಭಾರಿ ತೆರಿಗೆ ಪರೋಕ್ಷ ಮಾನ್ಯತೆ

ವಿಶ್ವಾದ್ಯಂತ ಸದ್ದು ಮಾಡುತ್ತ, ಅನಿಯಂತ್ರಣದ ಆತಂಕವನ್ನೂ ಸೃಷ್ಟಿಸುತ್ತಿರುವ ಕ್ರಿಪ್ಟೊ ಕರೆನ್ಸಿಯನ್ನು ಭಾರತದಲ್ಲಿ ನಿಷೇಧಿಸಬಹುದು ಎಂಬ ಸಾಧ್ಯತೆಗೆ ಬ್ರೇಕ್ ಹಾಕಿರುವ ಕೇಂದ್ರ ಸರ್ಕಾರ ಕ್ರಿಪ್ಟೊ ಕರೆನ್ಸಿಗೆ ಪರೋಕ್ಷವಾಗಿ ಅಧಿಕೃತ ಮಾನ್ಯತೆ ನೀಡಿದೆ. ಕ್ರಿಪ್ಟೊ ಕರೆನ್ಸಿ ಮೇಲಿನ ಹೂಡಿಕೆಯಿಂದ ಲಭಿಸುವ ಆದಾಯಕ್ಕೆ ಶೇ.30 ತೆರಿಗೆ ವಿಧಿಸಲು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದ್ದಾರೆ.

ಇಷ್ಟು ತೆರಿಗೆ ವಿಧಿಸಿರುವುದು ಕ್ರಿಪ್ಟೊ ಕರೆನ್ಸಿಗೆ ಹಿನ್ನಡೆ ಎಂದು ಮೇಲ್ನೋಟಕ್ಕೆ ಕಂಡುಬಂದರೂ, ಬಿಟ್ ಕಾಯಿನ್ ಸೇರಿ ಸಾವಿರಾರು ಸಂಖ್ಯೆಯಲ್ಲಿರುವ ಕ್ರಿಪ್ಟೊ ಕರೆನ್ಸಿಗಳು ಕಪುಪ ಹಣವಲ್ಲ ಎಂಬ ಅಧಿಕೃತ ಮುದ್ರೆಯನ್ನು ಕೇಂದ್ರ ಸರ್ಕಾರ ಒತ್ತಿದಂತಾಗಿದೆ. ಇಂತಹ ಕರೆನ್ಸಿಗಳ ಮೇಲೆ ಹೂಡಿಕೆ ಮಾಡುವುದು ಎಷ್ಟು ಸುರಕ್ಷಿತ ಎಂದು ಆಲೋಚಿಸುತ್ತಿದ್ದವರಿಗೆ ಹಾಗೂ ಕ್ರಿಪ್ಟೊ ಕರೆನ್ಸಿ ಎಕ್ಸ್​ಚೇಂಜ್ ಸ್ಟಾರ್ಟಪ್​ಗಳಿಗೆ ಇದರಿಂದ ನಿರಾಳ ಲಭಿಸಿದೆ.

2022-23ನೇ ಸಾಲಿನ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್, ಎಲ್ಲಿಯೂ ಕ್ರಿಪ್ಟೊ ಕರೆನ್ಸಿ ಹೆಸರಿಸದೆ ಅದರ ಕುರಿತು ನೀತಿಯನ್ನು ಪ್ರಕಟಿಸಿದರು. ‘ಡಿಜಿಟಲ್ ಆಸ್ತಿ’ಗಳ ವಹಿವಾಟಿನಲ್ಲಿ ಗಣನೀಯ ಏರಿಕೆ ಕಂಡಿದೆ. ಈ ಮಟ್ಟದ ವಹಿವಾಟಿನ ಕಾರಣದಿಂದಾಗಿ ತೆರಿಗೆ ವ್ಯಾಪ್ತಿಯೊಳಗೆ ತರುವುದು ಅನಿವಾರ್ಯವಾಗಿದೆ.

ಹಾಗಾಗಿ ಇಂತಹ ವಾಸ್ತವೋಪಮ ಡಿಜಿಟಲ್ ಆಸ್ತಿಗಳ ಮಾರಾಟದಿಂದ ಲಭಿಸುವ ಯಾವುದೇ ಆದಾಯದ ಮೇಲೆ ಶೇ.30 ತೆರಿಗೆ ವಿಧಿಸಲಾಗುತ್ತದೆ. ಖರೀದಿ ವೆಚ್ಚವನ್ನು ಹೊರತುಪಡಿಸಿ, ಇಂತಹ ಆದಾಯವನ್ನು ಲೆಕ್ಕ ಮಾಡುವಾಗ ಯಾವುದೇ ವೆಚ್ಚ ಅಥವಾ ಭತ್ಯೆಗಳ ಮೇಲೆ ರಿಯಾಯಿತಿ ಪಡೆಯಲು ಸಾಧ್ಯವಿಲ್ಲ. ಇಂತಹ ವಹಿವಾಟಿನಿಂದ ಉಂಟಾದ ನಷ್ಟವನ್ನು, ಇತರೆ ಆದಾಯದ ಜತೆಗೆ ಹೊಂದಾಣಿಕೆ ಮಾಡುವಂತಿಲ್ಲ ಎಂದಿದ್ದಾರೆ.

ಇಂತಹ ಡಿಜಿಟಲ್ ಕರೆನ್ಸಿಗಳ ವಹಿವಾಟು ಎಷ್ಟು ಪ್ರಮಾಣದಲ್ಲಿ ನಡೆಯುತ್ತಿದೆ ಎನ್ನುವುದನ್ನು ಅಳೆಯುವ ಸಲುವಾಗಿ ಪ್ರತ್ಯೇಕವಾಗಿ ಶೇ.1 ಮೂಲದಲ್ಲೆ ತೆರಿಗೆ ಕಡಿತವನ್ನೂ(ಟಿಡಿಎಸ್) ಪ್ರಸ್ತಾವಿಸಿದ್ದಾರೆ. ಸರ್ಕಾರ ಮುಂದಿನ ದಿನಗಳಲ್ಲಿ ಸೂಚಿಸುವ ಪ್ರಮಾಣದ ವಹಿವಾಟಿಗಷ್ಟೆ ಇದು ಅನ್ವಯವಾಗುತ್ತದೆ. ಕ್ರಿಪ್ಟೊ ಕರೆನ್ಸಿಗಳನ್ನು ಉಡುಗೊರೆಯಾಗಿ ನೀಡಿದರೂ, ಉಡುಗೊರೆಯನ್ನು ಪಡೆಯುವವರು ಪ್ರಸ್ತಾವಿತ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಪ್ರಯತ್ನದ ಫಲಾಫಲ ಕಾದುನೋಡಬೇಕಿದೆ.

ಭಾರತೀಯರೇ ಮುಂಚೂಣಿಯಲ್ಲಿ: 

ಜಗತ್ತಿನ ಕ್ರಿಪ್ಟೋಕರೆನ್ಸಿ ಗ್ರಾಹಕರ ಪೈಕಿ ಭಾರತೀಯರೇ 10.07 ಕೋಟಿ ಖಾತೆಗಳೊಂದಿಗೆ ಮುಂಚೂಣಿಯಲ್ಲಿದ್ದಾರೆ. ಅಮೆರಿಕನ್ನರ ಖಾತೆ 2.74 ಕೋಟಿ ಇದ್ದು, ರಷ್ಯನ್ನರು 1.74 ಕೋಟಿ, ನೈಜೀರಿಯಾದವರು 1.3 ಕೋಟಿ ಖಾತೆ ಹೊಂದಿದ್ದಾರೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap